ಯಾವುದೇ ಸಬೂಬು ಹೇಳದೆ ವಿಸಿ ನಾಲೆಗಳಿಗೆ ನೀರು ಹರಿಸಿ: ಎಂ.ಎಲ್‌.ತುಳಸೀಧರ್‌

| Published : Jul 09 2025, 12:18 AM IST

ಯಾವುದೇ ಸಬೂಬು ಹೇಳದೆ ವಿಸಿ ನಾಲೆಗಳಿಗೆ ನೀರು ಹರಿಸಿ: ಎಂ.ಎಲ್‌.ತುಳಸೀಧರ್‌
Share this Article
  • FB
  • TW
  • Linkdin
  • Email

ಸಾರಾಂಶ

ತಮಿಳುನಾಡಿಗೆ ಇದುವರೆಗೆ 300ಕ್ಕೂ ಹೆಚ್ಚು ಟಿಎಂಸಿ ನೀರು ಹರಿದುಹೋಗಿದೆ. ಮೆಟ್ಟೂರು ಅಣೆಕಟ್ಟು ಭರ್ತಿಯಾಗಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ವಿಪರ್ಯಾಸವೆಂದರೆ ಜಿಲ್ಲೆಯೊಳಗೆ ರೈತರ ಬೆಳೆಗಳಿಗೆ ನೀರು ಸಿಗದೆ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ನಾಲಾ ಆಧುನೀಕರಣ ಕೆಲಸದ ನೆಪವೊಡ್ಡಿ ನೀರು ಹರಿಸದಿರುವುದು ದುರಂತದ ಸಂಗತಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೃಷ್ಣರಾಜಸಾಗರ ಅಣೆಕಟ್ಟು ಜೂನ್‌ ತಿಂಗಳಲ್ಲಿ ಭರ್ತಿಯಾದರೂ ನಾಲೆಗಳಿಗೆ ನೀರು ಹರಿಸದೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಬೂಬು ಹೇಳುತ್ತಾ ರೈತರ ಬೆಳೆಗಳನ್ನು ಒಣಗಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಜೆಡಿಎಸ್‌ ಮುಖಂಡ ಎಂ.ಎಲ್‌.ತುಳಸೀಧರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಜಿಲ್ಲೆಯಲ್ಲಿ ರೈತರು ಕೃಷಿ ಚಟುವಟಿಕೆಯನ್ನು ಜೂನ್‌ ತಿಂಗಳಿನಿಂದ ಆರಂಭಿಸುವುದು ವಾಡಿಕೆ. ಕೆಆರ್‌ಎಸ್‌ ಜಲಾಶಯ ಜೂನ್‌ ತಿಂಗಳಲ್ಲಿ ತುಂಬಿ ದಾಖಲೆ ಸೃಷ್ಟಿಸುವುದಾದರೆ, ಸರ್ಕಾರವೂ ನಾಲೆಗಳಿಗೆ ಬೇಗ ನೀರು ಹರಿಸಿದ ದಾಖಲೆ ಸೃಷ್ಟಿಸಲಿ. ನಾಲೆಗಳಿಗೆ ನೀರು ಹರಿಸುವುದಕ್ಕೆ ನೀರು ಬಿಡುಗಡೆ ಇತಿಹಾಸವನ್ನು ನೆನಪಿಸುವ ಅಧಿಕಾರಿಗಳು ನಾಲೆಗಳಿಗೆ ನೀರು ಹರಿಸದೆ, ಕೆರೆ-ಕಟ್ಟೆಗಳನ್ನು ತುಂಬಿಸದೆ ಜೂನ್‌ನಲ್ಲಿ ಅಣೆಕಟ್ಟು ತುಂಬಿರುವುದಕ್ಕೆ ಸ್ಮಾರಕ ನಿರ್ಮಿಸಲು ಹೊರಟಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.

ತಮಿಳುನಾಡಿಗೆ ಇದುವರೆಗೆ 300ಕ್ಕೂ ಹೆಚ್ಚು ಟಿಎಂಸಿ ನೀರು ಹರಿದುಹೋಗಿದೆ. ಮೆಟ್ಟೂರು ಅಣೆಕಟ್ಟು ಭರ್ತಿಯಾಗಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ವಿಪರ್ಯಾಸವೆಂದರೆ ಜಿಲ್ಲೆಯೊಳಗೆ ರೈತರ ಬೆಳೆಗಳಿಗೆ ನೀರು ಸಿಗದೆ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ನಾಲಾ ಆಧುನೀಕರಣ ಕೆಲಸದ ನೆಪವೊಡ್ಡಿ ನೀರು ಹರಿಸದಿರುವುದು ದುರಂತದ ಸಂಗತಿ. ಬೇಸಿಗೆ ಸಮಯದಲ್ಲಿ ನಾಲಾ ಕೆಲಸವನ್ನು ನಡೆಸದೆ ಮಳೆಗಾಲದಲ್ಲಿ ನಾಲಾ ಆಧುನೀಕರಣ ಮಾಡುತ್ತಿರುವುದು ಅವೈಜ್ಞಾನಿಕ. ಇದು ರೈತರ ಬದುಕಿನ ಜೊತೆ ಆಡುವ ಚೆಲ್ಲಾಟ ಎಂದು ಕಿಡಿಕಾರಿದ್ದಾರೆ.

ರೈತರ ಹಿತ ಕಾಪಾಡುವ ಇಚ್ಛಾಶಕ್ತಿ ಜಿಲ್ಲಾ ಉಸ್ತುವಾರಿ ಮಂತ್ರಿ ಎನ್ ಚಲುವರಾಯಸ್ವಾಮಿ ಆದಿಯಾಗಿ ಯಾವೊಬ್ಬ ಜನಪ್ರತಿನಿಧಿಗಳಿಗೂ ಇಲ್ಲದಂತೆ ಕಾಣುತ್ತಿದೆ. ರೈತರು ನಾಲೆಗಳಿಗೆ ನೀರು ಹರಿಸುವಂತೆ ಅಂಗಲಾಚುತ್ತಿದ್ದರೂ ನೀರು ಹರಿಸದಿರುವುದು ಶೋಷಣೆಯ ಸಂಕೇತದಂತೆ ಕಂಡುಬರುತ್ತಿದೆ. ಕಬ್ಬು ಬೆಳೆಗಳ ಸಂರಕ್ಷಣೆ ಹಾಗೂ ರೈತರ ಕೃಷಿ ಚಟುವಟಿಕೆಗೆ ಅನುಕೂಲವಾಗುವಂತೆ ತುರ್ತಾಗಿ ನಾಲೆಗಳಿಗೆ ನೀರು ಬಿಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಒತ್ತಾಯಿಸಿದ್ದಾರೆ.

ರೈತರ ಸಂಕಷ್ಟಗಳಿಗೆ ಸ್ಪಂದಿಸದ ರಾಜಕಾರಣಿಗಳು ಪರಸ್ಪರ ಆರೋಪ-ಪ್ರತ್ಯಾರೋಪದ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ವ್ಯವಸ್ಥೆಯ ಬಗ್ಗೆ ಜನರು ಅಸಹ್ಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಮುಂದಾದರೂ ಜಿಲ್ಲೆಯ ರಾಜಕಾರಣಿಗಳು ಒಬ್ಬರನ್ನೊಬ್ಬರು ಟೀಕಿಸುವುದನ್ನು ಬಿಟ್ಟು ಜಿಲ್ಲೆಯ ಅಭಿವೃದ್ಧಿಗಾಗಿ ಪಕ್ಷಾತೀತ ಹಾಗೂ ಜಾತ್ಯತೀತವಾಗಿ ರೈತರು ಹಾಗೂ ಜಿಲ್ಲೆಯ ಸಾರ್ವಜನಿಕರ ಒಳಿತಿಗೆ ಶ್ರಮಿಸುವಂತೆ ಮನವಿ ಮಾಡಿದ್ದಾರೆ.