ಶಿಕ್ಷಣದಿಂದ ಮಾತ್ರ ದೇಶದ ಬಡತನ, ದಾರಿದ್ರ್ಯ ಹೋಗಲಾಡಿಸಲು ಸಾಧ್ಯ: ಡಾ.ಶ್ರೀತೋಂಟದ ಸಿದ್ಧರಾಮ ಮಹಾ ಸ್ವಾಮೀಜಿ

| Published : Jan 17 2025, 12:49 AM IST

ಶಿಕ್ಷಣದಿಂದ ಮಾತ್ರ ದೇಶದ ಬಡತನ, ದಾರಿದ್ರ್ಯ ಹೋಗಲಾಡಿಸಲು ಸಾಧ್ಯ: ಡಾ.ಶ್ರೀತೋಂಟದ ಸಿದ್ಧರಾಮ ಮಹಾ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳು ನಗರ, ಪಟ್ಟಣ, ಗ್ರಾಮಗಳಲ್ಲಿ 400ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ, ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾರಣರಾಗಿದ್ದಾರೆ. ಭೈರವೈಕ್ಯ ಶ್ರೀಗಳು ತಮ್ಮ ಇಡೀ ಜೀವನವನ್ನು ಬಡವರಿಗಾಗಿ ಮುಡಿಪಾಗಿಟ್ಟು ನಾಡಿನ ಪರಿಸರ, ಆರೋಗ್ಯ ರಕ್ಷಣೆ, ಜ್ಞಾನ- ವಿಜ್ಞಾನ, ತಂತ್ರಜ್ಞಾನವನ್ನು ನಾಡಿನ ಮಕ್ಕಳಿಗೆ ಕೊಡುಗೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಶಿಕ್ಷಣದಿಂದ ಮಾತ್ರ ದೇಶದ ಬಡತನ, ದಾರಿದ್ರ್ಯ, ಅಜ್ಞಾನ, ಅಂಧಕಾರವನ್ನು ಹೋಗಲಾಡಿಸಲು ಸಾಧ್ಯ ಎಂದು ತೋಂಟದಾರ್ಯ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಹೇಳಿದರು.

ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಡಾ.ಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳ ಜಯಂತ್ಯುತ್ಸವ, 12ನೇ ವರ್ಷದ ಪುಣ್ಯಸ್ಮರಣೆ ಹಾಗೂ ಶಾಲಾ ವಾರ್ಷಿಕೋತ್ಸವದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.

ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳು ನಗರ, ಪಟ್ಟಣ, ಗ್ರಾಮಗಳಲ್ಲಿ 400ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ, ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾರಣರಾಗಿದ್ದಾರೆ. ಭೈರವೈಕ್ಯ ಶ್ರೀಗಳು ತಮ್ಮ ಇಡೀ ಜೀವನವನ್ನು ಬಡವರಿಗಾಗಿ ಮುಡಿಪಾಗಿಟ್ಟು ನಾಡಿನ ಪರಿಸರ, ಆರೋಗ್ಯ ರಕ್ಷಣೆ, ಜ್ಞಾನ- ವಿಜ್ಞಾನ, ತಂತ್ರಜ್ಞಾನವನ್ನು ನಾಡಿನ ಮಕ್ಕಳಿಗೆ ಕೊಡುಗೆ ನೀಡಿದ್ದಾರೆ ಎಂದರು.

ಮಕ್ಕಳಿಗೆ ಕೇವಲ ಶಿಕ್ಷಣಾಭ್ಯಾಸ ಮಾಡಿಸಿದರೆ ಸಾಲದು, ಸಂಸ್ಕಾರವನ್ನೂ ಬೆಳೆಸಬೇಕು. ಅಂತಹ ಕೆಲಸಗಳನ್ನು ಮಠ- ಮಂದಿರಗಳು ಶಿಕ್ಷಣ ಸಂಸ್ಥೆಗಳ ಮೂಲಕ ಮಾಡುತ್ತಿವೆ. ಶಿಕ್ಷಣದ ಜತೆಗೆ ಸಂಸ್ಕಾರ ಕಲಿತ ಮಕ್ಕಳು ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗುತ್ತಾರೆ ಎಂದರು.

ಹಿರಿಯ ನಟ ರಾಮಕೃಷ್ಣ ಮಾತನಾಡಿ, ವಿದ್ಯಾರ್ಥಿಗಳು ವಿಕಸಿತ ಭಾರತದ ಮುಂದಿನ ಪ್ರಜೆಗಳು. ಓದುವ ದಿನಗಳಲ್ಲಿ ಚನ್ನಾಗಿ ಅಧ್ಯಯನ ಮಾಡುವ ಮೂಲಕ ಜ್ಞಾನಿಗಳಾಗಬೇಕು. ನಾಡಿಗೆ ತಮ್ಮ ಅಮೂಲ್ಯ ಸೇವೆ ಸಲ್ಲಿಸಬೇಕು. ಮೈಸೂರು ಮಹಾರಾಜರು, ವಿಶ್ವೇಶ್ವರಯ್ಯನವರಂತಹ ಮಹಾನ್ ವ್ಯಕ್ತಿಗಳು ಓಡಾಡಿದ ನಾಡಿನಲ್ಲಿ ಜನಿಸಿರುವ ನೀವು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಮಾತನಾಡಿ, ಮಕ್ಕಳು ಜೀವನದಲ್ಲಿ ನಾವು ಸಾಧನೆ ಮಾಡುತ್ತೇವೆ ಎಂಬ ವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ತಮಗೆ ಖುಷಿ ಅನಿಸುವ ಕೆಲಸವನ್ನು ಮಾಡಬೇಕು, ಎಷ್ಟೇ ಎತ್ತರಕ್ಕೆ ಬೆಳೆದರೂ ಕಲಿಕೆಯನ್ನು ಮಾತ್ರ ನಿಲ್ಲಿಸಬಾರದು ಎಂದರು.ಡಾ.ಜೆ.ಎನ್.ರಾಮಕೃಷ್ಣೇಗೌಡರು ಮಾತನಾಡಿದರು.

ವೇದಿಕೆ ಮೇಲಿನ ಗಣ್ಯರು ಶಾಲೆಯ ಜ್ಞಾನಸಿರಿ, ಡೈರಿಗಳನ್ನು ಬಿಡುಗಡೆ ಮಾಡಿದರು. ಎಸ್ಸೆಸ್ಸಿಲ್ಸಿ ಹಾಗೂ ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್‍ಯಕ್ರಮಗಳು ನಡೆದವು, ಮಕ್ಕಳ ನೃತ್ಯಕಂಡು ಪೋಷಕರು ಸಂಭ್ರಮಿಸಿದರು.

ಸಮಾರಂಭದಲ್ಲಿ ಹೇಮಗಿರಿ ಶಾಖಾಮಠದ ಕಾರ್‍ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ, ಸಾಹಿತಿ ಕೆ.ಕಲ್ಯಾಣ್, ಹಿರಿಯ ನಟಿ ಪದ್ಮವಾಸಂತಿ, ನಿರ್ದೇಶಕ ಕೆ.ಮಾದೇಶ್, ಜನಸ್ನೇಹಿ ಯೋಗೇಶ್, ಬಿಇಒ ರವಿಕುಮಾರ್ ಸೇರಿದಂತೆ ಅನೇಕರು ಹಾಜರಿದ್ದರು.