ಶರಣರ ಕಾಯಕ ತತ್ವದಿಂದ ಬಡತನ ದೂರ: ಶಶಿಧರ ಯಲಿಗಾರ

| Published : Mar 24 2025, 12:34 AM IST

ಶರಣರ ಕಾಯಕ ತತ್ವದಿಂದ ಬಡತನ ದೂರ: ಶಶಿಧರ ಯಲಿಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಭಾಷಣಗಳಿಂದ ಸಮಾಜವನ್ನು ಕಟ್ಟಲು ಸಾಧ್ಯವಾಗುವುದಿಲ್ಲ. ನಮ್ಮನ್ನು ನಾವು ಕೀಳು ಮಟ್ಟದಲ್ಲಿ ನೋಡಿಕೊಳ್ಳುವುದನ್ನು ನಿಲ್ಲಿಸಬೇಕು. ಶರಣರ ಆಶಯದಂತೆ ಶ್ರದ್ಧೆಯಿಂದ ಕಾಯಕವನ್ನು ಮಾಡಬೇಕು.

ಶಿಗ್ಗಾಂವಿ: ಅಂಬಿಗ ಸಮಾಜದ ಬಡಮಕ್ಕಳ ಕಲ್ಯಾಣಕ್ಕಾಗಿ ಆರ್ಥಿಕ ಸಹಾಯ ಮಾಡುತ್ತೇನೆ. ಉತ್ತಮ ಶಿಕ್ಷಣ, ಶರಣರ ಕಾಯಕ ಮಂತ್ರದ ಪರಿಪಾಲನೆಯಿಂದ ಮಾತ್ರ ಬಡತನ ದೂರವಾಗುತ್ತದೆ ಎಂದು ಕೆಎಂಎಫ್‌ ನಿರ್ದೇಶಕ ಶಶಿಧರ ಯಲಿಗಾರ ತಿಳಿಸಿದರು.ಪಟ್ಟಣದ ಅಂಬೇಡ್ಕರ ಓಣಿಯ ಗಂಗಾ ಪರಮೇಶ್ವರಿ ದೇವಸ್ಥಾನದಲ್ಲಿ ಅಂಬಿಗ ಸಮಾಜದವರಿಂದ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ೯೦೫ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ವಿರಕ್ತಮಠದ ಸಂಗನಬಸವ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಆದರ್ಶ ಪುರುಷರ ಜಯಂತಿಯನ್ನು ಆಚರಿಸುವ ಮೂಲಕ ಅಂತರಂಗದಲ್ಲಿ ಆದರ್ಶಗಳನ್ನು ಸ್ಥಾಪಿಸಿಕೊಳ್ಳುವ ಕೆಲಸವನ್ನು ಸಮಾಜದವರು ಮಾಡಬೇಕು. ಭಾಷಣಗಳಿಂದ ಸಮಾಜವನ್ನು ಕಟ್ಟಲು ಸಾಧ್ಯವಾಗುವುದಿಲ್ಲ. ನಮ್ಮನ್ನು ನಾವು ಕೀಳು ಮಟ್ಟದಲ್ಲಿ ನೋಡಿಕೊಳ್ಳುವುದನ್ನು ನಿಲ್ಲಿಸಬೇಕು. ಶರಣರ ಆಶಯದಂತೆ ಶ್ರದ್ಧೆಯಿಂದ ಕಾಯಕವನ್ನು ಮಾಡಬೇಕು ಎಂದರು.ಪುರಸಭೆ ಸದಸ್ಯ ಪರಶುರಾಮ ಸೊನ್ನದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಜಶರಣ ಅಂಬಿಗರ ಚೌಡಯ್ಯ ಅವರು ನಿಷ್ಠುರವಾದಿಯಾಗಿದ್ದರು. ಅಲ್ಲದೇ ಜಾತಿ ವ್ಯವಸ್ಥೆಯನ್ನು ಖಂಡಿಸಿದರು ಎಂದರು.ಕುಮಾರಿ ವರ್ಷಾ ಬಾರಕೇರ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು. ಕೆಎಂಎಫ್‌ ನಿರ್ದೇಶಕ ತಿಪ್ಪಣ್ಣ ಸಾತಣ್ಣವರ, ರಮೇಶ ಸಾತಣ್ಣವರ, ಅನುರಾಧಾ ಮಾಳ್ವದೆ, ರೇಣಕನಗೌಡ ಪಾಟೀಲ, ಅಶೋಕ ಕಾಳೆ, ಈರಣ್ಣ ಬಾರ್ಕಿ, ಮಾಳಪ್ಪಾ ಜಾಡರ, ಚನ್ನಬಸಪ್ಪ ಅತ್ತಿಗೇರಿ, ಫಕ್ಕೀರಪ್ಪ ಇಂಧೂರ, ರಾಮಣ್ಣ ಅಂದಲಗಿ, ಸುರೇಶ ಕಾಮನಳ್ಳಿ, ಲಕ್ಷ್ಮಣ ಕುಂದಗೋಳ, ಪರಶುರಾಮ ಹಾಳಿ, ರಮೇಶ ಹೊಸಪೇಟೆ, ರುದ್ರಣ್ಣಾ ಬಂಕಾಪೂರ, ಚನ್ನಪ್ಪ ಹಾವಣಗಿ ಇತರರಿದ್ದರು.

ಹೆಸ್ಕಾಂ ಅಧ್ಯಕ್ಷ ಅಜೀಮಪೀರ ಖಾದ್ರಿ ಅವರು ಬೆಳಗ್ಗೆ ಅಂಬಿಗರ ಚೌಡಯ್ಯ, ಗಂಗಾ ಪರಮೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶ್ರೀಕಾಂತ ದುಂಡಿಗೌಡ್ರ ಮೆರವಣಿಗೆಗೆ ಚಾಲನೆ ನೀಡಿದರು. ಸಕಲ ವಾದ್ಯ ಮೇಳಗಳು, ಕುಂಭಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಾವಚಿತ್ರ ಮೆರವಣಿಗೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕಿನ ಗಣ್ಯರು ಉಪಸ್ಥಿತರಿದ್ದರು.ವಿಜೃಂಭಣೆಯ ಮಂತ್ರೋಡಿ ದೇವಿ ಮೆರವಣಿಗೆ

ಸವಣೂರು: ತಾಲೂಕಿನ ಮಂತ್ರೋಡಿ ಗ್ರಾಮದಲ್ಲಿ ಗ್ರಾಮದೇವತೆಯನ್ನು ಗದ್ದುಗೆಗೊಳಿಸುವ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಗ್ರಾಮದೇವಿಗೆ ಒಂದು ತಿಂಗಳಿನಿಂದ ಮೂರ್ತಿಗೆ ಬಣ್ಣವನ್ನು ಹಚ್ಚುವ ಮೂಲಕ ದೇವಿಗೆ ಹಿರೇಮಠ ಹಾಗೂ ಭಟ್ಟರಿಂದ ದೇವಿಗೆ ಪ್ರಾಣಪ್ರತಿಷ್ಠಾಪನೆ ಕೈಗೊಂಡ ನಂತರ ವಿವಿಧ ಪೂಜಾ ಧಾರ್ಮಿಕ ಕೈಂಕರ್ಯಗಳನ್ನು ಕೈಗೊಂಡ ನಂತರ ಶನಿವಾರ ಸಂಜೆ 7 ಗಂಟೆಗೆ ದೇವಸ್ಥಾನದಿಂದ ತನ್ನ ತವರು ಮನೆಯಾದ ಗ್ರಾಮದ ಹಿರೇಮಠ ಅವರ ಮನೆಗೆ ಪ್ರಮುಖ ಬೀದಿಗಳಲ್ಲಿ ಕಳಸ ಗ್ರಾಮದ ಪುಟ್ಟರಾಜ ಆರ್ಕೆಸ್ಟ್ರಾ, ಜಾಂಜ್ ಮೇಳ ಹಾಗೂ ಡೋಳು ಭಾಜಾ ಭಜಂತ್ರಿಯೊಂದಿಗೆ ಭಾನುವಾರ ಬೆಳಗ್ಗೆ 5 ಗಂಟೆಗೆ ತವರು ಮನೆಗೆ ತಲುಪಿತು. ಪ್ರಾತಃಕಾಲ ದೇವಿಗೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.ಭಾನುವಾರ ಬೆಳಗ್ಗೆ 11 ಗಂಟೆಗೆ ಗ್ರಾಮದೇವಿ ದೇವಸ್ಥಾನದಿಂದ ದುರ್ಗಾದೇವಿ ಮೂರ್ತಿ ಮೆರವಣಿಗೆ ಗ್ರಾಮದ ಸುಮಂಗಲೆಯರಿಂದ ಆರತಿ ಹಾಗೂ ಕುಂಭದೊಂದಿಗೆ ವಿವಿಧ ವಾದ್ಯ ವೈಭವದೊಂದಿಗೆ ಗ್ರಾಮ ದುರ್ಗಾದೇವಿ ದೇವಸ್ಥಾನಕ್ಕೆ ತಲುಪಿತು. ನಂತರ ದೇವಿಗೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿ ನಂತರ ಸರ್ವ ಭಕ್ತಾದಿಗಳಿಗೆ ಅನ್ನಪ್ರಸಾದ ಸೇವೆ ಜರುಗಿತು.