ಆನಂದ ಜಡಿಮಠ
ಕನ್ನಡಪ್ರಭ ವಾರ್ತೆ ಬೀಳಗಿಶಿಕ್ಷಣ ಶ್ರೀಮಂತರ ಸ್ವತ್ತಲ್ಲ. ಬಡವರಿಗೂ ಪಡೆಯುವ ಶಕ್ತಿಯಿದೆ ಎಂಬುವುದನ್ನು ತೋರಿಸಿಕೊಟ್ಟಿದೆ ತಾಲೂಕಿನ ಬಾಡಗಂಡಿ ಗ್ರಾಮದ ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನದ ಬಾಪೂಜಿ ಸ್ವತಂತ್ರ ಪಿಯು ಮಹಾವಿದ್ಯಾಲಯ. ಹೌದು. ಈ ಮಾತಿನಂತೆ ತರಕಾರಿ ಹರಾಜು ಮಾಡಿ ಜೀವನ ಕಂಡುಕೊಳ್ಳುತ್ತಿರುವವರ ಪುತ್ರಿಗೆ ಜ್ಞಾನಾರ್ಜನೆ ನೀಡಿದ್ದರಿಂದ ಇತ್ತೀಚೆಗೆ ಬಂದ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 5ನೇ ರ್‍ಯಾಂಕ್ ಪಡೆದಿದ್ದಾಳೆ ಸಮರೀನ್ ರಿಯಾಜ್ ಬಾಗವಾನ್.
ಸಾಕ್ಷರತೆಯು ಶಿಕ್ಷಣದ ಅಂತ್ಯವೂ ಅಲ್ಲ, ಆರಂಭವೂ ಅಲ್ಲ. ಅಕ್ಷರ ಕಲಿಕೆ ಶಿಕ್ಷಣದ ಒಂದು ಸಣ್ಣ ಭಾಗ ಮಾತ್ರ ಎಂದು ಮಹಾತ್ಮ ಗಾಂಧಿಜಿ ಹೇಳಿದ್ದರು. ಅದನ್ನೇ ಅಕ್ಷರಶಃ ಅನುಸರಿಸುತ್ತಿರುವ ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನದ ಬಾಪೂಜಿ ಕಾಲೇಜು ವಿದ್ಯಾರ್ಥಿಗಳಲ್ಲಿರುವ ಜ್ಞಾನ ಶಕ್ತಿಯನ್ನು ಹೆಕ್ಕಿ ತೆಗೆಯಲು ಅಲ್ಲಿನ ಬೋಧಕ ಸಿಬ್ಬಂದಿ ಅಣಿಯಾಗಿದ್ದಾರೆ. ಇದಕ್ಕೆ ಸಮರೀನ್‌ನಂತಹ ವಿದ್ಯಾರ್ಥಿಗಳ ಫಲಿತಾಂಶವೇ ದೃಷ್ಟಾಂತ.ಸಾಧನೆಗೆ ಬಡತನ ಅಡ್ಡಿಯಾಗಲ್ಲ. ಅಚಲ ನಿರ್ಧಾರ, ನಿರಂತರ ಅಭ್ಯಾಸ ಮತ್ತು ಸೂಕ್ತ ಮಾರ್ಗದರ್ಶನ ಸಿಕ್ಕರೆ ಸಾಕು ಎನ್ನುತ್ತಾಳೆ ಸಮರೀನ್ ಬಾಗವಾನ್. ವಿದ್ಯಾರ್ಥಿನಿ ಸಮರೀನ್ ಬಾಗವಾನ್ ಬೀಳಗಿ ಪಟ್ಟಣದ ರಿಯಾಜ್ ಬಾಗವಾನ್ ಹಾಗೂ ಹಮೀದಾ ಬಾಗವಾನ್ ದಂಪತಿ ದ್ವಿತೀಯ ಸುಪುತ್ರಿ. ತಂದೆ ತರಕಾರಿ ಸವಾಲು ಮಾಡುವ ಕೆಲಸ ಮಾಡಿದರೆ, ತಾಯಿ ಮನೆಗೆಲಸ ಮಾಡುತ್ತಾರೆ. ಬಡತನವಿದ್ದರೂ ರಿಯಾಜ್ ಬಾಗವಾನ ಅವರು ತನ್ನಿಬ್ಬರು ಪುತ್ರರು ಮತ್ತು ಪುತ್ರಿ ಸಮರೀನ್ ವಿದ್ಯಾಭ್ಯಾಸಕ್ಕೆ ತನ್ನ ಬಡತನ ತಿಳಿಸದೆ ಮಕ್ಕಳ ಅಭ್ಯಾಸಕ್ಕೆ ಪಣ ತೊಟ್ಟಿದ್ದಾರೆ.ತಾಲೂಕಿನ ಬಾಡಗಂಡಿ ಗ್ರಾಮದ ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನದ ಬಾಪೂಜಿ ಸ್ವತಂತ್ರ ಪಿಯು ಮಹಾವಿದ್ಯಾಲಯದಲ್ಲಿ ಪಿಯು ದ್ವಿತೀಯ ವರ್ಷದ ವಾಣಿಜ್ಯ ವಿಭಾಗದಲ್ಲಿ ಪ್ರಸಕ್ತ ಸಾಲಿನ ಪಿಯು ಫಲಿತಾಂಶದಲ್ಲಿ 600 ಅಂಕಗಳಿಗೆ 596 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 5ನೇ ರ್‍ಯಾಂಕ್ ಪಡೆಯುವುದಲ್ಲದೆ ಬಾಗಲಕೋಟೆ ವಿಜಯಪುರ ಅವಳಿ ಜಿಲ್ಲೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಹೆಚ್ಚು ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದಾಳೆ. ಬೀಳಗಿಯ ಆದರ್ಶ ವಿದ್ಯಾಲಯದಲ್ಲಿ ಎಸ್ಸೆಸ್ಸೆಲ್ಸಿ ಮಾಡಿದ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದಳು.ವಾಣಿಜ್ಯ ವಿಭಾಗದಲ್ಲಿ ಮೊದಲ ಬಾರಿ ಫಲಿತಾಂಶ ಬಂದಾಗ ವಿದ್ಯಾರ್ಥಿನಿ ಸಮರೀನ್ 600ಕ್ಕೆ 584 ಅಂಕ ಪಡೆದಿದ್ದಳು. ಈ ಫಲಿತಾಂಶ ತೃಪ್ತಿ ಆಗದೆ ಇದ್ದಾಗ ತಂದೆ ರಿಯಾಜ್ ಬಾಗವಾನ ಅವರನ್ನು ಕಾಡಿಬೇಡಿ ಮರುಮೌಲ್ಯಮಾಪನ ಹಾಕುವಂತೆ ಮಾಡಿ 7 ದಿನಗಳ ನಂತರ ಮತ್ತೆ ರ್‍ಯಾಂಕ್ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ. ವಾಣಿಜ್ಯ ವಿಭಾಗದ ವಿಷಯಗಳಾದ ಅರ್ಥಶಾಸ್ತ್ರ-೮೦/೮೦, ವ್ಯವಹಾರ ಅಧ್ಯಯನ-೮೦/೮೦, ಗಣಕಯಂತ್ರ ವಿಜ್ಞಾನ-೮೦/೮೦, ಹಿಂದಿ -೮೦/೮೦, ಲೆಕ್ಕ ಶಾಸ್ತ್ರ -೮೦/೭೯, ಇಂಗ್ಲಿಷ್ -೮೦/೭೭ - ಒಟ್ಟು ೫೯೬ (ಪ್ರತಿ ವಿಷಯಕ್ಕೂ ಆಂತರಿಕ ಅಂಕ ೨೦ ಸೇರಿ) ಅಂಕಗಳನ್ನು ಪಡೆದಿದ್ದಾಳೆ.ನಮ್ಮ ಬಾಪೂಜಿ ಸ್ವತಂತ್ರ ಮಹಾವಿದ್ಯಾಲಯದ ವಿದ್ಯಾರ್ಥಿನಿ ಸಮರೀನ್ ಬಾಗವಾನ್ ಪಿಯು ವಾಣಿಜ್ಯ ವಿಭಾಗದಲ್ಲಿ 5ನೇ ರ್‍ಯಾಂಕ್ ಪಡೆಯುವ ಮೂಲಕ ರಾಜ್ಯಕ್ಕೆ, ಅವಳಿ ಜಿಲ್ಲೆಗೆ ಹೆಸರು ಪಡೆದ ನಮ್ಮ ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿನಿ. ಅವಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದು ಸಂತೋಷ್ ತಂದಿದೆ. ನಮ್ಮ ಸಂಸ್ಥೆಯ ಪ್ರಾಚಾರ್ಯರಾದ ಶಿವಬೋದ ಶೆಟ್ಟಿ ಮತ್ತು ಅವರ ತಂಡದ ಸತತ ಪ್ರಯತ್ನದ ಫಲ ಇದಾಗಿದ್ದು, ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನ ಪ್ರತಿ ಫಲಿತಾಂಶದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗುವಂತೆ ಮಾಡಿ, ದೇಶದ ಸದೃಢ ಪ್ರಜೆಗಳು ಹೊರಹೊಮ್ಮುತ್ತಿರುವುದು ಹೆಮ್ಮೆ ತರುತ್ತದೆ.
- ಎಸ್.ಆರ್.ಪಾಟೀಲ, ಅಧ್ಯಕ್ಷರು ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನ ಬಾಡಗಂಡಿ.ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಶಿಕ್ಷಕರು ಹೇಳಿದ ಪ್ರತಿ ಪಾಠದಲ್ಲೂ ಯಶಸ್ಸು ಕಂಡು ಉತ್ತಮ ಫಲಿತಾಂಶ ಸಿಗುವಂತೆ ಮಾಡಿದ್ದಾರೆ. ವಿದ್ಯಾರ್ಥಿನಿ ಸಮರೀನ್ ಬಾಗವಾನ್ ರಾಜ್ಯಕ್ಕೆ 5ನೇ ರ್‍ಯಾಂಕ್, ಅವಳಿ ಜಿಲ್ಲೆಗಳಿಗೆ ಮೊದಲ ಸ್ಥಾನ ಪಡೆದಿದ್ದಾಳೆ. ಈ ವಿದ್ಯಾರ್ಥಿನಿ ಹಾಗೂ ಡಿಸ್ಟಿಂಕ್ಷನ್, ಫಸ್ಟ್ ಕ್ಲಾಸ್ ಸ್ಥಾನ ಪಡೆದ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಅವರ ಭವಿಷ್ಯ ಉಜ್ವಲವಾಗಲಿ.
- ಶಿವಬೋದ ಶೆಟ್ಟಿ,
ಪ್ರಾಚಾರ್ಯರು, ಬಾಪೂಜಿ ಸ್ವತಂತ್ರ ಪಿಯು ಮಹಾವಿದ್ಯಾಲಯ ಬಾಡಗಂಡಿ.