ಕಾಂಗ್ರೆಸ್‌ಗೆ ಅಧಿಕಾರದ ಅಮಲು: ಬಿ.ವೈ.ವಿಜಯೇಂದ್ರ

| Published : Mar 29 2024, 12:55 AM IST

ಸಾರಾಂಶ

ರಾಜ್ಯದಲ್ಲಿ ಭೀಕರ ಬರಗಾಲವಿದೆ. ೮೦೦ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಜನ-ಜಾನುವಾರುಗಳು ಕುಡಿಯುವ ನೀರು, ಮೇವಿಲ್ಲದೆ ಪರಿತಪಿಸುತ್ತಿವೆ. ಬರಗಾಲದಿಂದ ತತ್ತರಿಸುತ್ತಿರುವ ಜನರ ಜೀವನಕ್ಕೆ ಭದ್ರತೆ ಒದಗಿಸದ ಸರ್ಕಾರ ಗ್ಯಾರಂಟಿ ಸಮಾವೇಶಗಳನ್ನು ನಡೆಸುತ್ತಾ ದುಂದುವೆಚ್ಚ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಒಂಭತ್ತು ತಿಂಗಳಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಅಧಿಕಾರದ ಅಮಲಿನಿಂದ ತೇಲುತ್ತಿದೆ. ಕಷ್ಟದಲ್ಲಿರುವ ಜನರ ಬಗ್ಗೆ ಮುಖ್ಯಮಂತ್ರಿಗಳಿಗೆ ಕನಿಕರವೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.

ನಗರದಲ್ಲಿ ನಡೆದ ಜೆಡಿಎಸ್-ಬಿಜೆಪಿ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲವಿದೆ. ೮೦೦ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಜನ-ಜಾನುವಾರುಗಳು ಕುಡಿಯುವ ನೀರು, ಮೇವಿಲ್ಲದೆ ಪರಿತಪಿಸುತ್ತಿವೆ. ಬರಗಾಲದಿಂದ ತತ್ತರಿಸುತ್ತಿರುವ ಜನರ ಜೀವನಕ್ಕೆ ಭದ್ರತೆ ಒದಗಿಸದೆ ಗ್ಯಾರಂಟಿ ಸಮಾವೇಶಗಳನ್ನು ನಡೆಸುತ್ತಾ ದುಂದುವೆಚ್ಚ ಮಾಡುತ್ತಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಜಾತಿ-ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸುತ್ತಿದೆ. ಬಿಜೆಪಿ-ಜೆಡಿಎಸ್ ರಾಜ್ಯದಲ್ಲಿ ಒಂದಾಗುತ್ತಿದ್ದಂತೆ ಕಾಂಗ್ರೆಸ್‌ಗೆ ನಿದ್ರೆ ಬರುತ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ತತ್ತರಿಸಿ ಹೋಗಿದ್ದಾರೆ. ಭಯದಿಂದ ಮಂತ್ರಿಯಾಗಿರುವವರು ಚುನಾವಣೆ ಅಭ್ಯರ್ಥಿ ಆಗಲಿಲ್ಲ. ಜನರಿಂದ ಜನರಿಗಾಗಿ ಇರುವ ಕುಮಾರಸ್ವಾಮಿ ಮಂಡ್ಯದಿಂದ ಸಂಸದರಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ರಾಜ್ಯದ ೨೮ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತ. ೨೮ಕ್ಕೆ ೨೮ ಸ್ಥಾನಗಳನ್ನು ಗೆಲ್ಲುವುದೇ ನಮ್ಮ ಗುರಿ. ಮೈಮರೆಯವ ಪ್ರಶ್ನೆಯೇ ಇಲ್ಲ.

ದೇವೇಗೌಡರು, ಬಿ.ಎಸ್.ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ ಎಲ್ಲರೂ ರಾಜ್ಯಾದ್ಯಂತ ಪ್ರವಾಸ ಮಾಡುತ್ತಾರೆ. ನಾವೇ ನಾಯಕರು, ಅಭ್ಯರ್ಥಿ ಎಂದು ತಿಳಿದು ಕಾರ್ಯಕರ್ತರು ಕೆಲಸ ಮಾಡಬೇಕು.ಚುನಾವಣೆ ಮುಗಿಯುವವರೆಗೂ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ಮಂಡ್ಯದಿಂದಲೇ ಮೊದಲ ಫಲಿತಾಂಶ ಹೊರಬರಬೇಕು ಎಂದು ಹೇಳಿದರು.