ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಅಧಿಕಾರ: ಶಾಸಕ ಕೆ.ಗೋಪಾಲಯ್ಯ

| Published : Mar 26 2024, 01:20 AM IST

ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಅಧಿಕಾರ: ಶಾಸಕ ಕೆ.ಗೋಪಾಲಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆ ಮಾಡುತ್ತದೆ. ನಂತರ ಒಂದೆರೆಡು ವಾರದಲ್ಲಿ ಇಲ್ಲಿಯ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ ಎಂದು ಮಾಜಿ ಸಚಿವ ಹಾಗೂ ಜಿಲ್ಲಾ ಲೋಕಸಭಾ ಕ್ಷೇತ್ರದ ಉಸ್ತುವಾರಿ ಗೋಪಾಲಯ್ಯ ಭವಿಷ್ಯ ನುಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆ ಮಾಡುತ್ತದೆ. ನಂತರ ಒಂದೆರೆಡು ವಾರದಲ್ಲಿ ಇಲ್ಲಿಯ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ ಎಂದು ಮಾಜಿ ಸಚಿವ ಹಾಗೂ ಜಿಲ್ಲಾ ಲೋಕಸಭಾ ಕ್ಷೇತ್ರದ ಉಸ್ತುವಾರಿ ಗೋಪಾಲಯ್ಯ ಭವಿಷ್ಯ ನುಡಿದಿದ್ದಾರೆ. ಪಟ್ಟಣದ ಹೊರಪೇಟೆಯಲ್ಲಿರುವ ವಿರಕ್ತ ಮಠದ ಸಮುದಾಯ ಭವನದಲ್ಲಿ ನಡೆದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರ ಉಳಿಯಬೇಕೆಂಬ ಉದ್ದೇಶದಿಂದಲೇ ಎಚ್.ಡಿ.ದೇವೇಗೌಡರು ಮೋದಿಯವರೇ ಸಮರ್ಥ ಪ್ರಧಾನಿ ಎಂದು ನಂಬಿ ಬಿಜೆಪಿಯೊಂದಿಗೆ ಕೈ ಜೋಡಿಸಿದ್ದಾರೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಅತ್ಯಗತ್ಯ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಸಂಕಷ್ಟ ತಪ್ಪಿದ್ದಲ್ಲ. ಬಹುಶಃ ದೇವೇಗೌಡರು ಬಿಜೆಪಿ ಜೊತೆ ಕೈ ಜೋಡಿಸಿರುವ ಹಿನ್ನೆಲೆ ಯಲ್ಲಿ ದೇಶದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಸ್ಥಾನಗಳು ಎನ್‌ಡಿಎಗೆ ಸಿಗಲಿದೆ ಎಂದು ಸಮೀಕ್ಷೆಗಳು ಹೇಳಿವೆ ಎಂದರು.

ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೆ.ಎನ್.ರಾಜಣ್ಣನ ಜೊತೆ ಸೇರಿ ಮಾಜಿ ಪ್ರಧಾನಿ ದೇವೇಗೌಡರಿಗೆ ಮೋಸ ಮಾಡಿದ ಹಾಲಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿರುವ ಮುದ್ದಹನುಮೇಗೌಡರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಕಳೆದ ಬಾರಿ ಮಾಜಿ ಪ್ರಧಾನಿ ದೇವೇಗೌಡರು ಗೆಲವು ಸಾಧಿಸಿದ್ದರೆ ಜಿಲ್ಲೆಗೆ ಸಾಕಷ್ಟು ಕೇಂದ್ರದಿಂದ ಅನುದಾನ ತಂದು ಅಭಿವೃದ್ಧಿ ಮಾಡುತ್ತಿದ್ದರು. ಮುದ್ದಹನುಮೇಗೌಡ. ಸಂಸದನಾಗಿದ್ದಾಗ ನನಗೆ ಸಾಕಷ್ಟು ಕಾಟ ಕೊಟ್ಟಿದ್ದಾರೆ. ೫ ವರ್ಷ ಸಂಸದನಾಗಿ ಜಿಲ್ಲೆಗೆ, ತಾಲೂಕಿಗೆ ಕೊಡುಗೆ ಏನೇನೂ ಇಲ್ಲ. ಮುದ್ದಹನುಮೇಗೌಡ ಮಾತ್ರ ಒಕ್ಕಲಿಗನಾ? ಹಾಗಾದರೆ ದೇವೇಗೌಡರು ಯಾರು? ಮೋಸಗಾರ ಮುದ್ದಹನುಮೇಗೌಡನಿಗೆ ಮತ ಹಾಕಬಾರದು ಎಂದು ಏಕವಚನದಲ್ಲೇ ಗುಡುಗಿದ ಶಾಸಕ ಎಂ.ಟಿ.ಕೃಷ್ಣಪ್ಪ, ಜೆಡಿಎಸ್, ಬಿಜೆಪಿಯವರು ಸೇರಿದಂತೆ ಎಲ್ಲರೂ ವಿ.ಸೋಮಣ್ಣರಿಗೆ ಮತಹಾಕಿ ಗೆಲ್ಲಿಸಬೇಕು ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನವರು ಎದುರಾಳಿಗಳಾಗಿ ಹೋರಾಟ ಮಾಡಿದ್ದೆವು. ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಇರುವ ಸಣ್ಣಪುಟ್ಟ ಬಿನ್ನಾಬಿಪ್ರಾಯಗಳನ್ನು ಬದಿಗೊತ್ತಿ ದೇಶಕ್ಕಾಗಿ ಕೆಲಸ ಮಾಡಬೇಕಿದೆ. ಈ ಕಾಂಗ್ರೆಸ್ ಸರ್ಕಾರ ಬಂದರೆ ರಾಜ್ಯಕ್ಕೆ ದರಿದ್ರ ಬರುತ್ತೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಶಾಸಕರ ಅನುದಾನ ನೀಡಲು ಲಂಚ ಕೊಡಬೇಕಾಗಿದೆ ಎಂದು ಎಂ.ಟಿ.ಕೃಷ್ಣಪ್ಪ ಆರೋಪಿಸಿದರು.

ಮೈತ್ರಿ ಪಕ್ಷದ ಅಭ್ಯರ್ಥಿ ಸೋಮಣ್ಣ ಮಾತನಾಡಿ, ೨೮ ವರ್ಷದಿಂದ ನಾನು ದೇವೇಗೌಡರ ಗರಡಿಯಲ್ಲಿ ಬೆಳೆದವನು. ನರೇಂದ್ರ ಮೋದಿಯವರ ಬಗ್ಗೆ ೧೪೨ ಕೋಟಿ ಜನರು ನಂಬಿಕೆ ಇಟ್ಟುಕೊಂಡಿದ್ದಾರೆ. ನಾನು ಹೊರಗಿನವನು ಎಂಬ ಆರೋಪವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್‌ನವರು ಎಲ್ಲಿ ವಾಸ ಮಾಡುತ್ತಿದ್ದಾರೆ? ನಾನು ಈಗಾಗಲೇ ತುಮಕೂರಿನಲ್ಲಿ ಮನೆ ಮಾಡಿದ್ದೇನೆ. ನಿಮ್ಮ ಕಷ್ಟ ಸುಖದಲ್ಲಿ ಭಾಗಿಯಾಗಿ ಕೆಲಸ ಮಾಡುತ್ತೇನೆ. ಜೆಡಿಎಸ್.ಬಿಜೆಪಿ ಕಾರ್ಯಕರ್ತರು ಎಲ್ಲ ಭಿನ್ನಾಭಿಪ್ರಾಯ ಮರೆತು ಹೋರಾಟ ಮಾಡಿ ನನ್ನನ್ನು ಗೆಲ್ಲಿಸಿ ಎಂದರು.

ಶಾಸಕ ಸುರೇಶ್‌ಗೌಡ ಮಾತನಾಡಿ, ಕಾಂಗ್ರೆಸ್‌ರವರಿಗೆ ಎಂ.ಪಿ ಕ್ಯಾಂಡಿಡೇಟ್ ಗತಿ ಇರಲಿಲ್ಲ. ಸೋಮಣ್ಣಗೆ ಗಾಳ ಹಾಕಿದ್ದರು. ಬರದಿದ್ದರಿಂದ ಕಡೆಗೆ ಮುದ್ದಹನುಮೇಗೌಡರನ್ನ ಕಾಂಗ್ರೆಸ್‌ಗೆ ಸೇರಿಸಿಕೊಂಡರು. ಕಾಂಗ್ರೆಸ್ನವರು ಸೋಮಣ್ಣರನ್ನು ಹೊರಗಿನವರು ಎನ್ನುತ್ತಾರೆ. ನಿಮ್ಮ ನಾಯಕ ರಾಹುಲ್ ಗಾಂಧಿ ಎಲ್ಲಿಯವರು?. ವಯನಾಡುಗೆ ಯಾಕೆ ಬಂದಿದ್ದಾರೆ. ಸಿದ್ದರಾಮಯ್ಯ ಬಾದಾಮಿಗೆ ಏಕೆ ಹೋಗಿ ನಿಂತಿದ್ದರು? ಎಂದು ಪ್ರಶ್ನೆ ಮಾಡಿದ ಅವರು ಸೋಮಣ್ಣ ಗೆಲ್ಲುತ್ತಾರೆ ಕೇಂದ್ರದ ಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದರು.

ಸಭೆಯಲ್ಲಿ ಮಾಜಿ ಶಾಸಕರಾದ ಎಂ.ಡಿ.ಲಕ್ಷ್ಮೀನಾರಾಯಣ್, ನೆ.ಲ.ನರೇಂದ್ರಬಾಬು, ಜೆಡಿಎಸ್ ತಾಲೂಕು ಅಧ್ಯಕ್ಷ ದೊಡ್ಡೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಮುತ್ತಣ್ಣ, ಮುಖಂಡರಾದ ದೊಡ್ಡಾಘಟ್ಟ ಚಂದ್ರೇಶ್, ಸಾಗರನಹಳ್ಳಿ ವಿಜಯಕು ಮಾರ್, ಕಡೇಹಳ್ಳಿ ಸಿದ್ದೇಗೌಡ, ವೆಂಕಾಟಪುರ ಯೋಗೀಶ್, ಕೊಂಡಜ್ಜಿ ವಿಶ್ವನಾಥ್, ವೆಂಕಟೇಶ್ ಕೃಷ್ಣಪ್ಪ, ದುಂಡಾ ರೇಣಕಪ್ಪ, ಶಂಕರೇಗೌಡ, ಧನಪಾಲ್, ಪ್ರಕಾಶ್, ಮುಸ್ಲಿಂ ಮುಖಂಡ ಜಪ್ರುಲ್ಲಖಾನ್ ಸೇರಿದಂತೆ ಜೆಡಿಎಸ್, ಬಿಜೆಪಿ ಪಕ್ಷದ ಮುಖಂಡರು ಹಾಗೂ ಅಪಾರ ಕಾರ್ಯಕರ್ತರು ಇದ್ದರು. ಆ ವೇಳೆ ವೇದಿಕೆಯಲ್ಲಿದ್ದ ಹಿರಿಯ ಬಿಜೆಪಿ ಮುಖಂಡ ಕಡೇಹಳ್ಳಿ ಸಿದ್ದೇಗೌಡರು ಶಾಸಕ ಎಂ.ಟಿ.ಕೃಷ್ಣಪ್ಪ ಆಡಿದ ಮಾತುಗಳನ್ನು ಖಂಡಿಸಿ ಏರುದನಿಯಲ್ಲಿ ಮಾತನಾಡಿದರು. ಆ ವೇಳೆ ಜೆಡಿಎಸ್ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಸಣ್ಣ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ಮಾಜಿ ಶಾಸಕ ಮಸಾಲಾ ಜಯರಾಮ್ ಮತ್ತು ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪ, ಸೋಮಣ್ಣ ಸೇರಿದಂತೆ ಹಲವರು ಪರಿಸ್ಥಿತಿಯನ್ನು ತಣ್ಣಗಾಗಿಸಿದರು. -------------------------------------ಸೋಮಣ್ಣ 1.20 ಲಕ್ಷ ಮತ ಲೀಡ್‌

ತಾಲೂಕಿನ ಬಿಜೆಪಿ, ಜೆಡಿಎಸ್ ಮುಖಂಡರು ಒಟ್ಟಾಗಿ ಮೈತ್ರಿ ಧರ್ಮವನ್ನು ಪಾಲಿಸುತ್ತೇವೆ. ನಮ್ಮ ತಾಲೂಕಿನಿಂದ ಸುಮಾರು ೧.೨೦,೦೦೦ ಮತಗಳನ್ನು ಲೀಡ್ ನೀಡುತ್ತೇವೆ ಎಂದು ಮಾಜಿ ಶಾಸಕ ಮಸಾಲ ಜಯರಾಮ್ ಹೇಳಿದರು.. ಈ ಚುನಾವಣೆ ಮೋದಿ, ದೇವೇಗೌಡರ ಚುನಾವಣೆ. ಸೋಮಣ್ಣರಿಗೆ ಅನುಮಾನ ಇತ್ತು. ಶಾಸಕ ಕೃಷ್ಣಪ್ಪ, ಮಾಜಿ ಶಾಸಕ ಮಸಾಲ ಜಯರಾಮ್ ಇಬ್ಬರು ಒಂದಾಗುತ್ತಾರಾ ಎಂಬ ಅಪನಂಬಿಕೆ ಇತ್ತು. ಈ ಕಾರ್ಯಕ್ರಮವನ್ನು ನೋಡಿ ಸೋಮಣ್ಣರಿಗೆ ನಂಬಿಕೆ ಬಂದಿದೆ. ಈ ಲೋಕಸಭಾ ಚುನಾವಣೆ ಕಳೆದ ನಂತರ ಕಾಂಗ್ರೆಸ್ ಸರ್ಕಾರ ಉರುಳಲಿದ್ದು, ಜಿಲ್ಲೆಯಿಂದ ಇಬ್ಬರು ಸಚಿವರಾಗುತ್ತಾರೆ. ಬಿಜೆಪಿ ಯಿಂದ ಸುರೇಶ್‌ಗೌಡರು ಮತ್ತು ಜೆಡಿಎಸ್‌ನಿಂದ ಶಾಸಕ ಎಂ.ಟಿ.ಕೃಷ್ಣಪ್ಪ ಸಚಿವರಾಗುವರು ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ಹೇಳುತ್ತಿದ್ದಂತೆ ಕಾರ್ಯಕರ್ತರು ಜಯಘೋಷ ಮೊಳಗಿಸಿದರು.

----------------------------------ಕೊಂಡಜ್ಜಿ ವಿಶ್ವನಾಥ್‌ಗೆ ಎಂ.ಟಿ ಕೃಷ್ಣಪ್ಪ ಟಾಂಗ್‌

ಶಾಸಕ ಎಂ.ಟಿ.ಕೃಷ್ಣಪ್ಪನವರು ಮಾತನಾಡುವ ವೇಳೆ ಬಿಜೆಪಿ ಮುಖಂಡ ಕೊಂಡಜ್ಜಿ ವಿಶ್ವನಾಥ್ ರವರು ಕಳೆದ ಬಾರಿ ಮುದ್ದಹನುಮೇಗೌಡರ ಪರವಾಗಿ ಕೆಲಸ ಮಾಡಿದ್ದರು. ಈ ಬಾರಿ ಯಾರಿಗೆ ಮಾಡ್ತಾರೋ ಗೊತ್ತಿಲ್ಲ ಎಂದು ವೇದಿಕೆ ಮೇಲೇ ಇದ್ದ ಕೊಂಡಜ್ಜಿ ವಿಶ್ವನಾಥ್ ಅವರನ್ನು ಕುರಿತು ಮಾತನಾಡಿದರು. ಆ ವೇಳೆ ಕೊಂಡಜ್ಜಿ ವಿಶ್ವನಾಥ್ ಕೆಲ ಕಾಲ ಸಿಡಿಮಿಡಿ ಗೊಂಡರು. ಸೋಮಣ್ಣನವರು ಮಾತನಾಡುವ ವೇಳೆ ಕೊಂಡಜ್ಜಿ ವಿಶ್ವನಾಥ್ ಕೃಷ್ಣಪ್ಪನವರ ಆಪಾದನೆ ಕುರಿತು ಸ್ಪಷ್ಟನೆ ಕೊಡುವುದಾಗಿ ಹೇಳಿದರು. ಆದರೆ ಸೋಮಣ್ಣನವರು ಬೇಡ ಕುಳಿತುಕೊಳ್ಳಿ ಎಂದು ವಿನಂತಿಸಿಕೊಂಡರು.