ಅಧಿಕಾರ ನಶ್ವರ, ಕಾಂಗ್ರೆಸ್ ಸಾಧನೆ ಅಜರಾಮರ

| Published : Dec 09 2024, 12:48 AM IST

ಸಾರಾಂಶ

ಮತದಾರರು ಅನ್ನಪೂರ್ಣಾ ಅವರನ್ನು ಗೆಲ್ಲಿಸುವ ಮೂಲಕ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆ ಎಂಬುದನ್ನು ದೃಢಪಡಿಸಿದ್ದೀರಿ.

ಸಂಡೂರು: ಅಧಿಕಾರ ನಶ್ವರ, ಕಾಂಗ್ರೆಸ್ ಸಾಧನೆ ಅಜರಾಮರ. ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಈ.ಅನ್ನಪೂರ್ಣಾ ತುಕಾರಾಂ ಅವರನ್ನು ಗೆಲ್ಲಿಸುವ ಮೂಲಕ ಕ್ಷೇತ್ರದ ಮತದಾರರು ಇತಿಹಾಸ ನಿರ್ಮಿಸಿದ್ದೀರಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಭಾನುವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಅಭಿನಂದನಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಮತದಾರರು ಅನ್ನಪೂರ್ಣಾ ಅವರನ್ನು ಗೆಲ್ಲಿಸುವ ಮೂಲಕ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆ ಎಂಬುದನ್ನು ದೃಢಪಡಿಸಿದ್ದೀರಿ. ದೇವೇಗೌಡರು, ಬಿಜೆಪಿಯವರು ಇನ್ನು ೬ ತಿಂಗಳಲ್ಲಿ ಸರ್ಕಾರವನ್ನು ಕಿತ್ತೊಗೆಯುತ್ತೇವೆ ಎಂದು ಹೇಳುತ್ತಿದ್ದರು. ಇದು ಸಾಧ್ಯವಿಲ್ಲ. ತುಂಗಭದ್ರಾ ಡ್ಯಾಂ ಒಡೆದಾಗ ಟೀಕೆ ಮಾಡಿದ್ದರು. ಟೀಕೆ ಸಾಯ್ತದೆ ಎಂದಿದ್ದೆ. ಅದು ಆಗಿದೆ. ನಮ್ಮ ಕೆಲಸ ಉಳಿದಿದೆ. ಕ್ಷೇತ್ರದಲ್ಲಿನ ಗೆಲುವು ನಮ್ಮ ವಿಶ್ವಾಸ ಹೆಚ್ಚಿಸಿದೆ. ಇಡಿ ಸರ್ಕಾರ ಸಂತೋಷ್ ಲಾಡ್, ಈ. ತುಕಾರಾಂ ಹಾಗೂ ಈ. ಅನ್ನಪೂರ್ಣಾ ತುಕಾರಾಂ ಅವರ ಜತೆಗಿರಲಿದೆ. ಎಲ್ಲರೂ ಸೇರಿ ಕ್ಷೇತ್ರದ ಜನರ ಋಣ ತೀರಿಸುವ ಕೆಲಸ ಮಾಡುತ್ತೇವೆ ಎಂದರು.

ಶಾಸಕಿ ಈ. ಅನ್ನಪೂರ್ಣಾ ತುಕಾರಾಂ ಮಾತನಾಡಿ, ನನ್ನ ಗೆಲುವು ಕ್ಷೇತ್ರದ ಮತದಾರ ಪ್ರಭುಗಳ ಗೆಲುವು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಂತೋಷ್ ಲಾಡ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರ ಶ್ರಮದಿಂದ ಪಕ್ಷದ ಗ್ಯಾರಂಟಿ ಸೇರಿದಂತೆ ವಿವಿಧ ಜನಪರ ಯೋಜನೆಗಳ ಸಹಕಾರದಿಂದ ನನ್ನ ಗೆಲುವು ಸಾಧ್ಯವಾಯಿತು. ಸಂಡೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು, ಸ್ವಚ್ಛ, ಭಯಮುಕ್ತ, ಅಭಿವೃದ್ಧಿ ಹೊಂದಿದ ಹಾಗೂ ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಲು ಜೋಡೆತ್ತಿನಂತೆ ಪತಿ ಈ. ತುಕಾರಾಂ ಅವರೊಂದಿಗೆ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ನೆರವಿನೊಂದಿಗೆ ಶ್ರಮಿಸುವೆ ಎಂದರು.

ಸಚಿವ ಜಮೀರ್ ಅಹಮದ್ ಖಾನ್ ಮಾತನಾಡಿ, ನಾವು ಸಾಧನೆಯ ಮೇಲೆ ಮತ ಕೇಳುತ್ತೇವೆ. ಬಿಜೆಪಿಯವರದ್ದು ಹಿಂದೂ-ಮುಸ್ಲಿಂ ಎಂದು ಮತ ಕೇಳುತ್ತಾರೆ. ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಈ. ಅನ್ನಪೂರ್ಣಾ ತುಕಾರಾಂ ಹೋಗುತ್ತಿರುವ ವೇಗವನ್ನು ನೋಡಿದರೆ, ಅಭಿವೃದ್ಧಿಯಲ್ಲಿ ಪತಿಯನ್ನು ಒವರ್‌ಟೇಕ್ ಮಾಡುವ ಲಕ್ಷಣ ಕಾಣುತ್ತಿದೆ. ಶಾಸಕರಾಗಿ ೧೫ ದಿನದಲ್ಲಿ ಆಕ್ವಿವ್ ಆಗಿದ್ದು, ಕ್ಷೇತ್ರಕ್ಕೆ ವಸತಿ ಯೋಜನೆ ಅಡಿಯಲ್ಲಿ ಮನೆಗಳನ್ನು ಮಂಜೂರು ಮಾಡುವಂತೆ ನಾಲ್ಕೈದು ಬಾರಿ ಫೋನ್ ಮಾಡಿದ್ದರು. ಈ ದಿನ ಕ್ಷೇತ್ರ ವ್ಯಾಪ್ತಿಯ ಕುಡುತಿನಿಗೆ ೧೦೦೦ ಮನೆಗಳು ಹಾಗೂ ತಾಲೂಕಿನ ಇತರ ಪ್ರದೇಶಗಳಿಗೆ ೧೦೦೦ ಸೇರಿ ಒಟ್ಟು ೨೦೦೦ ಮನೆಗಳ ಮಂಜೂರಾತಿ ಆದೇಶದ ಪ್ರತಿ ತಂದಿರುವುದಾಗಿ ತಿಳಿಸಿ, ಅದನ್ನು ಶಾಸಕರಿಗೆ ಹಸ್ತಾಂತರಿಸಿದರು.

ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿನ ಬಾಣಂತಿಯರ ಸಾವಿನ ಕುರಿತು ವಿಷಾದ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌, ಈ ಘಟನೆ ನಡೆಯಬಾರದಾಗಿತ್ತು. ನಡೆದಿದೆ. ಈ ಕುರಿತು ತನಿಖೆ ನಡೆಯುತ್ತಿದೆ. ಮೃತ ಬಾಣಂತಿಯರ ವಾರಸುದಾರರಿಗೆ ನೀಡಲು ತೀರ್ಮಾನಿಸಿದ್ದ ₹೨ ಲಕ್ಷ ಪರಿಹಾರ ಹಣವನ್ನು ಮುಖ್ಯಮಂತ್ರಿ ಸೂಚನೆಯ ಮೇರೆಗೆ ₹೫ ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದರು.

ಸಚಿವ ಸಂತೋಷ್ ಲಾಡ್ ಮಾತನಾಡಿ, ಕಾಂಗ್ರೆಸ್ ಜಾರಿಗೆ ತಂದ ಜನಪರ ಕಾರ್ಯಕ್ರಮಗಳಿಂದಾಗಿ ಜಿಡಿಪಿಯಲ್ಲಿ ರಾಜ್ಯ ದೇಶದಲ್ಲಿಯೇ ನಂ. ೧ ಸ್ಥಾನಕ್ಕೆ ತಲುಪಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುವೆವು ಎಂದರು.

ಸಂಡೂರಿನಲ್ಲಿ ಭಾನುವಾರ ಕಾಂಗ್ರೆಸ್ ವತಿಯಿಂದ ಅಭಿನಂದನಾ ಸಮಾವೇಶವನ್ನು ಹಮ್ಮಿಕೊಳ್ಳಲಾಯಿತು.