ಮಾರುತಿ ಶಿಡ್ಲಾಪೂರ

ಹಾನಗಲ್ಲ: ವಿದ್ಯುತ್ ವ್ಯತ್ಯಯದಿಂದ ಹಾನಗಲ್ಲ ಪಟ್ಟಣಕ್ಕೆ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಿದ್ದು, ಪಟ್ಟಣದಲ್ಲಿ ೭-೮ ದಿನಗಳಿಗೊಮ್ಮೆ ನೀರು ಪೂರೈಸುವ ಅನಿವಾರ್ಯತೆಗೆ ಹಾನಗಲ್ಲ ಪುರಸಭೆ ಸಿಲುಕಿದೆ.

೭,೨೮೪ ಕುಟುಂಬಗಳ ೩೫ ಸಾವಿರ ಜನಸಂಖ್ಯೆಯ ಹಾನಗಲ್ಲ ಪಟ್ಟಣಕ್ಕೆ ಸರತಿಯಂತೆ ದಿನಕ್ಕೆ ೩೫ ಸಾವಿರ ಲೀಟರ್ ಕುಡಿಯುವ ನೀರು ಬೇಕು. ಇದನ್ನು ಪೂರೈಸಲು ಪುರಸಭೆ ೩ ದಿನಕ್ಕೊಮ್ಮೆ ಇಡೀ ನಗರಕ್ಕೆ ಸರದಿಯಲ್ಲಿ ನೀರು ಪೂರೈಸುವ ಯೋಜನೆ ರೂಪಿಸಿಕೊಂಡಿದೆ. ಇದಕ್ಕಾಗಿ ನೀರಿನ ಕೊರತೆಯಿಲ್ಲ. ಪಟ್ಟಣಕ್ಕೆ ಹಲವು ದಶಕಗಳಿಂದ ಕುಡಿಯುವ ನೀರಿನ ಜಲಮೂಲವಾದ ಆನಿಕೆರೆಯಲ್ಲಿ ಇನ್ನೂ ಎರಡು ತಿಂಗಳಿಗಾಗುವಷ್ಟು ನೀರಿದೆ. ಆದರೆ ವಿದ್ಯುತ್ ಪೂರೈಕೆಯ ವ್ಯತ್ಯಯದಿಂದಾಗಿ ಈಗ ೭-೮ ದಿನಕ್ಕೊಮ್ಮೆ ನೀರು ಪೂರೈಸುವ ಅನಿವಾರ್ಯತೆ ಪುರಸಭೆಗೆ ಇದೆ.

ಕುಡಿಯುವ ನೀರಿನ ಸರಬರಾಜಿಗಾಗಿ ೯೪ ಕಿಮೀ ಪೈಪ್‌ಲೈನ್, ಆನಿಕರೆಯಿಂದ ನೀರು ಪೂರೈಸುವ ಫಿಲ್ಟರ್ ಬೆಡ್‌ ವರೆಗೆ ೩.೫ ಕಿಮೀ ಪೈಪ್‌ಲೈನ್ ಸುವ್ಯವಸ್ಥಿತವಾಗಿದೆ. ಪಟ್ಟಣದಲ್ಲಿ ೧೧೦ ಕೊಳವೆಬಾವಿಗಳಿಂದಲೂ ಫಿಲ್ಟರ್ ಬೆಡ್‌ಗೆ ನೀರು ಪೂರೈಕೆ ಇದೆ. ಇದಲ್ಲದೆ ನೀರು ಕೊರತೆಯಾದರೆ ಧರ್ಮಾ ಜಲಾಶಯದಿಂದಲೂ ನೀರು ತರುವ ವ್ಯವಸ್ಥೆ ಇದೆ. ಆದರೆ ವಿದ್ಯುತ್ ಕಣ್ಣುಮುಚ್ಚಾಲೆಯಿಂದ ನೀರಿಗೆ ತೊಂದರೆಯಾಗಿದೆ.

ನಿರಂತರ ಬೇಕು: ಆನೆಕೆರೆಯಿಂದ ಫಿಲ್ಟರ್ ಬೆಡ್‌ಗೆ ನೀರು ಪೂರೈಸಲು ನಿರಂತರ ವಿದ್ಯುತ್ ಬೇಕು. ದಿನಕ್ಕೆ ಹತ್ತಾರು ಬಾರಿ ವಿದ್ಯುತ್ ಕಟ್ ಹಾಗೂ ಹಲವು ಗಂಟೆಗಳ ವರೆಗೆ ವಿದ್ಯುತ್ ವ್ಯತ್ಯಯದಿಂದಾಗಿ ಆನಿಕೆರೆಯಿಂದ ನೀರು ಹರಿಸಲು ವಿಳಂಬವಾಗುತ್ತದೆ. ಒಂದು ಬಾರಿ ವಿದ್ಯುತ್ ನಿಂತರೆ ಮತ್ತೆ ವಿದ್ಯುತ್ ಬಂದಾಗಲೂ ನೀರನ್ನು ಆನಿಕರೆಯಿಂದ ಫಿಲ್ಟರ್ ಬೆಡ್‌ಗೆ ಹರಿಸಲು ಅರ್ಧ ಗಂಟೆಗೂ ಅಧಿಕ ಸಮಯಾವಕಾಶ ಬೇಕು. ಇದರಿಂದ ನೀರು ಸಂಗ್ರಹಕ್ಕೆ ತೊಂದರೆಯಾಗಿದೆ. ಅಲ್ಲದೆ ಫಿಲ್ಟರ್‌ ಬೆಡ್‌ನಲ್ಲಿಯೂ ವಿದ್ಯುತ್ ವ್ಯತ್ಯಯದಿಂದಾಗಿ ನೀರು ಶುದ್ಧೀಕರಣ ಹಾಗೂ ಮೇಲ್ಮಟ್ಟದ ಜಲಾಗಾರಕ್ಕೆ ನೀರು ಸಂಗ್ರಹಕ್ಕೆ ಅನನುಕೂಲವಾಗಿದೆ. ಒಂದು ದಿನ ನೀರಿನ ವ್ಯತ್ಯಾಸವಾದರೆ ಪಟ್ಟಣದಲ್ಲಿ ಎರಡು ಮೂರು ದಿನ ನೀರು ಬಿಡುವ ಪ್ರಕ್ರಿಯೆಗೆ ವಿಳಂಬವಾಗುತ್ತಿದೆ. ನೀರು ಪೂರೈಕೆಗೆ ವ್ಯತ್ಯಯವಾಗದಂತೆ ಆನಿಕೆರೆ ಪಂಪ್ ಹೌಸ್‌ನಲ್ಲಿ ₹೨೫ ಲಕ್ಷ ವೆಚ್ಚದ ೭೫ ಎಚ್‌ಪಿ ಇನ್ನೊಂದು ಹೆಚ್ಚುವರಿ ಮೋಟರ್ ಕೂಡ ಅಳವಡಿಸಲಾಗಿದೆ. ಆದರೂ ಸರದಿಯಂತೆ ನೀರು ಪೂರೈಸಲು ಆಗುತ್ತಿಲ್ಲ.


ವಿದ್ಯುತ್ ಸಮಸ್ಯೆ: ಈ ಬಗ್ಗೆ ಹೆಸ್ಕಾಂ ಕೂಡ ತನ್ನ ಸಮಸ್ಯೆಗಳನ್ನು ತೋಡಿಕೊಳ್ಳುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆಗಾಗಿಯೇ ಎಕ್ಸಪ್ರೆಸ್ ವಿದ್ಯುತ್ ಲೈನ್‌ ಅಳವಡಿಸಿದೆ ಎನ್ನುತ್ತಾರೆ. ಆದರೆ ಈ ಲೈನ್‌ನಿಂದ ಅನಿವಾರ್ಯಕ್ಕೆ ಬೇರೆ ಬೇರೆ ಬಳಕೆಗೂ ಕನೆಕ್ಷನ್ ನೀಡಿದ್ದರಿಂದ ಹಾಗೂ ಆಗಾಗ ವಿದ್ಯುತ್ ತಂತಿಗಳ ಸಮಸ್ಯೆಯಿಂದಾಗಿ ಈ ಎಕ್ಸ್‌ಪ್ರೆಸ್ ಲೈನ್ ತೊಂದರೆ ಆರಂಭವಾಗಿದೆ ಎನ್ನಲಾಗಿದೆ. ಎಕ್ಸಪ್ರೆಸ್ ಲೈನ್‌ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಇದಕ್ಕಾಗಿ ಹೆಸ್ಕಾಂ ಹೊಸ ವ್ಯವಸ್ಥೆಗೆ ಮುಂದಾಗಿದ್ದು, ಅದು ಕೈಗೂಡುವ ವರೆಗೆ ಈ ಸಮಸ್ಯೆಗೆ ಪರಿಹಾರವೇ ಇಲ್ಲ ಎನ್ನುಂತಾಗಿದೆ. ವಿಶೇಷವಾಗಿ ಬೇಸಿಗೆಯಲ್ಲಿ ಈ ಸಮಸ್ಯೆ ಉಲ್ಬಣಗೊಳ್ಳುತ್ತದೆ.

ಈಗ ಇನ್ನಷ್ಟು ಬಿರು ಬೇಸಿಗೆ ಆರಂಭವಾಗಿದ್ದು, ಪುರಸಭೆ ಹಾಗೂ ಹೆಸ್ಕಾಂ ಒಟ್ಟಾಗಿ ಯೋಜಿಸಿ, ಯೋಚಿಸಿ ಹಾನಗಲ್ಲ ಪಟ್ಟಣಕ್ಕೆ ವಿಳಂಬವಿಲ್ಲದೆ ನೀರು ಪೂರೈಕೆಗೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.ಬಗೆಹರಿಯುವ ವಿಶ್ವಾಸವಿದೆ: ಹಾನಗಲ್ಲ ಪಟ್ಟಣಕ್ಕೆ ಕುಡಿಯುವ ನೀರಿಗಾಗಿ ನೀರಿನ ಸಂಗ್ರಹವಿದೆ. ನಮಗೆ ಕುಡಿಯುವ ನೀರಿನ ಜಲಮೂಲಗಳಾದ ಆನಿಕರೆ ಹಾಗೂ ಧರ್ಮಾ ಜಲಾಶಯದಲ್ಲಿ ನೀರಿದೆ. ಆದರೆ ವಿದ್ಯುತ್ ವ್ಯತ್ಯಯವೇ ನೀರಿನ ಪೂರೈಕೆಗೆ ಆತಂಕವಾಗಿದೆ. ಈ ಬಗ್ಗೆ ಸಂಬಂಧಿಸಿದವರ ಗಮನ ಸೆಳೆಯಲಾಗಿದ್ದು, ಕೂಡಲೇ ಬಗೆಹರಿಯುವ ವಿಶ್ವಾಸವಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಹೇಳುತ್ತಾರೆ.

ಜಿಲ್ಲಾ ಕೇಂದ್ರ ಹಾವೇರಿಯಿಂದ ವಿದ್ಯುತ್ ವ್ಯತ್ಯಯವಾದಾಗ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಅನಿವಾರ್ಯ. ಕೆಲವೊಮ್ಮೆ ವಿದ್ಯುತ್ ತಂತಿಗಗಳು ಕಟ್ ಆದಾಗ, ಟಿಸಿಗಳಲ್ಲಿ ತೊಂದರೆ ಆದಾಗ ಮಾತ್ರ ವಿದ್ಯುತ್ ವ್ಯತ್ಯಯವಾಗುತ್ತಿದೆ. ಎಕ್ಸ್‌ಪ್ರೆಸ್ ಲೈನ್‌ಗೆ ವಿಳಂಬವಿಲ್ಲದೆ ವಿದ್ಯುತ್ ಪೂರೈಸುವ ಯತ್ನ ನಡೆದಿದೆ. ಇಷ್ಟರಲ್ಲೇ ಎಲ್ಲ ಸಮಸ್ಯೆಗೆ ಪರಿಹಾರ ಒದಗಿಸಲಿದ್ದೇವೆ ಎಂದು ಹಾನಗಲ್ಲ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಎ.ಎಸ್. ಮರಿಗೌಡರ ಹೇಳುತ್ತಾರೆ.