ಬಿರುಗಾಳಿಗೆ ಉರುಳಿ ಬಿದ್ದ ವಿದ್ಯುತ್ ಕಂಬ, ಮರಗಳು; ಮನೆಗಳಿಗೆ ಹಾನಿ

| Published : Jul 27 2024, 12:57 AM IST

ಸಾರಾಂಶ

ಸುಮಾರು 40ಕ್ಕಿಂತ ಅಧಿಕ ವಿದ್ಯುತ್ ಕಂಬಗಳು ನೆರಿಯ ಗ್ರಾಮ ಒಂದರಲ್ಲೇ ಉರುಳಿ ಬಿದ್ದಿವೆ. ಸುಮಾರು 25ಕ್ಕಿಂತ ಅಧಿಕ ಮನೆಗಳಿಗೆ ಹಾನಿ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ತಾಲೂಕಿನಲ್ಲಿ ಶುಕ್ರವಾರ ಮುಂಜಾನೆ ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ ನೂರಕ್ಕಿಂತ ಅಧಿಕ ವಿದ್ಯುತ್ ಕಂಬಗಳು, ನಾಲ್ಕು ಪರಿವರ್ತಕ, ನೂರಾರು ಮರಗಳು, ಸಾವಿರಾರು ಅಡಕೆ, ರಬ್ಬರ್ ಮರಗಳು ಧರಶಾಯಿಯಾಗಿವೆ.

ನೆರಿಯ ಗ್ರಾಮದಲ್ಲಿ ಅತಿ ಹೆಚ್ಚಿನ ಹಾನಿ ಉಂಟಾಗಿದ್ದು ಅಣಿಯೂರಿನಿಂದ ನೆರಿಯ ಗ್ರಾಮ ಪಂಚಾಯಿತಿವರೆಗೆ ರಸ್ತೆ ಬದಿ ಇದ್ದ ಮರಗಳು ಧರೆಗೆ ಉರುಳಿವೆ. ಪೆರಿಯಡ್ಕ, ಅಣಿಯೂರು, ಅಪ್ಪಿಲ, ಗಂಡಿಬಾಗಿಲು, ಕುಕ್ಕೆಜಾಲು ಸೇರಿದಂತೆ ಅಲ್ಲಲ್ಲಿ ಮರಗಳು ಉರುಳಿ ಬಿದ್ದು ಗ್ರಾಮದಲ್ಲಿ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.ಸುಮಾರು 40ಕ್ಕಿಂತ ಅಧಿಕ ವಿದ್ಯುತ್ ಕಂಬಗಳು ನೆರಿಯ ಗ್ರಾಮ ಒಂದರಲ್ಲೇ ಉರುಳಿ ಬಿದ್ದಿವೆ. ಸುಮಾರು 25ಕ್ಕಿಂತ ಅಧಿಕ ಮನೆಗಳಿಗೆ ಹಾನಿ ಸಂಭವಿಸಿದೆ.

ನಾಲ್ಕೂರು ಗ್ರಾಮದ ಸೂಳಬೆಟ್ಟು ಮುರಳೀಧರ ಗೋಖಲೆ ಅವರ ಅಡಕೆ ತೋಟದಲ್ಲಿದ್ದ ಬೃಹತ್ ಹಲಸಿನ ಮರ ಗುರುವಾರ ರಾತ್ರಿ ಬೀಸಿದ ಬಿರುಗಾಳಿಗೆ ಧರಾಶಾಯಿಯಾಗಿದೆ. ಇದರಿಂದ 60ಕ್ಕೂ‌ ಹೆಚ್ಚು ಅಡಕೆ ಮರಗಳು ಉರುಳಿವೆ.

ತಹಸೀಲ್ದಾರ್ ಪೃಥ್ವಿ ಸಾನಿಕಂ, ವಿಎ ಸಿದ್ದೇಶ್ ಪಿಡಿಒ ಸುಮಾ ಸಹಿತ ಪಂಚಾಯಿತಿ ಆಡಳಿತ ಮೆಸ್ಕಾಂ ಉಜಿರೆ ಎಇಇ ಪ್ರವೀಣ್ ಕೊಠಾರಿ, ಸೋಮಂತಡ್ಕ ಶಾಖೆಯ ಜೆಇ ಸುಭಾಷ್ ಮತ್ತಿತರರು ಪರಿಶೀಲನೆ ನಡೆಸಿ ಹಾನಿಯ ಕುರಿತು ವಿವರ ಸಂಗ್ರಹಿಸಿದರು.

ಗ್ರಾಮದಲ್ಲಿ ಅಲ್ಲಲ್ಲಿ ಮರಗಳು ಬಿದ್ದು ರಸ್ತೆ ಮುಂಜಾನೆಯಿಂದಲೇ ಮುಚ್ಚಿ ಹೋಗಿದ್ದು ಸ್ಥಳಿಯಾಡಳಿತ ಮೆಸ್ಕಾಂ ಅರಣ್ಯ ಇಲಾಖೆ ಸ್ಥಳೀಯರೊಂದಿಗೆ ಸಮಾರೋಪದಿಯಲ್ಲಿ ಕಾಮಗಾರಿ ನಡೆಸಿದೆ.

ಸಮೀಪದ ಪಟ್ರಮೆ ಗ್ರಾಮದಲ್ಲಿ ನಾಲ್ಕು ಮನೆಗಳಿಗೆ ಹಾನಿ ಸಂಭವಿಸಿದೆ. ಕೊಯ್ಯೂರಿನ ಮಲೆಬೆಟ್ಟು ಎಂಬಲ್ಲಿ ಕೃಷ್ಣ ಎಂಬವರು ಮನೆಯಂಗಳದಲ್ಲಿ ನಿಲ್ಲಿಸಿದ್ದ ರಿಕ್ಷಾದ ಮೇಲೆ ಮರ ಬಿದ್ದು ರಿಕ್ಷಾಕ್ಕೆ ಹಾನಿ ಸಂಭವಿಸಿದೆ.

ನೆರಿಯ, ಇಂದಬೆಟ್ಟು, ರೆಖ್ಯ ಮೊದಲಾದ ಕಡೆ ವಿದ್ಯುತ್ ಪರಿವರ್ತಕಗಳು ಕುಸಿದು ಬಿದ್ದಿದ್ದು ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗದಲ್ಲಿ 45, ಉಜಿರೆ ಉಪ ವಿಭಾಗದಲ್ಲಿ 55 ಕಂಬಗಳು ಮುರಿದು ಮೆಸ್ಕಾಂಗೆ ಲಕ್ಷಾಂತರ ರುಪಾಯಿ ನಷ್ಟ ಉಂಟಾಗಿದೆ. ನದಿ ನೀರು ಏರಿಳಿತ: ಕಳೆದ ಒಂದು ವಾರದಿಂದ ತಾಲೂಕಿನ ಪ್ರಮುಖ ನದಿಗಳಲ್ಲಿ ನೀರಿನ ಏರಿಳಿತ ಮುಂದುವರಿದಿದೆ. ತಗ್ಗು ಪ್ರದೇಶದ ಹಲವಾರು ತೋಟಗಳು ಜಲಾವೃತವಾಗಿವೆ. ಒಮ್ಮೆ ನೀರಿನ ಪ್ರಮಾಣದಲ್ಲಿ ಕೊಂಚ ಇಳಿಕೆ ಕಂಡರೆ ಕೆಲವೇ ಕ್ಷಣಗಳಲ್ಲಿ ನೀರು ಏರುತ್ತಿದ್ದು ನದಿ ತೀರದ ಜನರಲ್ಲಿ ಆತಂಕ ಮನೆ ಮಾಡಿದೆ. ನಲುಗಿದ ನೆರಿಯ: ತಾಲೂಕಿನ ಕೊನೆಯ ಭಾಗದಲ್ಲಿರುವ ನೆರಿಯದಲ್ಲಿ ಭೀಕರ ಗಾಳಿಯಿಂದ ಗ್ರಾಮವೇ ತತ್ತರಿಸಿ ಹೋಗಿದೆ. ಸಾಲು ಸಾಲುಮರಗಳು ಉರುಳಿ ಬಿದ್ದು ವಿದ್ಯುತ್ ಕಂಬಗಳು ಎಲ್ಲೆಂದರಲ್ಲಿ ಮುರಿದುಬಿದ್ದಿದ್ದವು. ಅಡಕೆ, ರಬ್ಬರ್ ತೋಟಗಳಲ್ಲಿ ಭಾರಿ ಪ್ರಮಾಣದ ಕೃಷಿ ಹಾನಿ ಉಂಟಾಗಿದೆ. ನೆರಿಯ ಪರಿಸರದ ಜನತೆ ಪ್ರಸ್ತುತ ಹಲವಾರು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು ಹೆಚ್ಚಿನ ಇಲಾಖೆಗಳು ಇಲ್ಲಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿವೆ.

ಭೀಕರ ಗಾಳಿಯಿಂದ ನೆರಿಯ ಗ್ರಾಮ ಭಾರಿ ನಷ್ಟ ಅನುಭವಿಸಿದ್ದು ಕೃಷಿಯೇ ಮೂಲವಾಗಿರುವ ಇಲ್ಲಿನ ಜನತೆಗೆ ಆನೆ ಹಾವಳಿಯು ಸದಾ ಇದ್ದು ಇದೀಗ ಭೀಕರ ಗಾಳಿ ಗಾಯದ ಮೇಲೆ ಬರೆ ಎಳೆದಿದೆ.

ನೆರಿಯ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಹಲವಾರು ವಿದ್ಯುತ್ ಕಂಬ,ಪರಿವರ್ತಕಗಳಿಗೆ ಹಾನಿಯಾಗಿದ್ದು ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಗಾಳಿಯಿಂದ ಮನೆಗಳಿಗೆ ಹಾನಿಯಾದವರಿಗೆ ಪರಿಹಾರ ಒದಗಿಸಲಾಗುವುದು ಎಂದು ತಹಸೀಲ್ದಾರ್‌ ಪೃಥ್ವಿ ಸಾನಿಕಂ ತಿಳಿಸಿದರು.