ಸಾರಾಂಶ
- ಸೋಲಾರ್ ಅಳವಡಿಸದಂತೆ ರೈತರಿಗೆ ರೈತ ಸಂಘ ರಾಜಾಧ್ಯಕ್ಷ ಸಲಹೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆವಿದ್ಯುತ್ ಖಾಸಗೀಕರಣ ಹಾಗೂ ಕೃಷಿ ಪಂಪುಸೆಟ್‌ಗಳಿಗೆ ಆಧಾರ ಲಿಂಕ್ ಮಾಡುವ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಆಗ್ರಹಿಸಿ ಸರ್ಕಾರದ ವಿರುದ್ಧ ಚಳವಳಿ ಆರಂಭ ಮಾಡಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯುತ್ ಕ್ಷೇತ್ರ ಖಾಸಗೀಕರಣ ಪ್ರಕ್ರಿಯೆ 2000 ಇಸವಿಯಿಂದ ಪ್ರಾರಂಭಿಸಿ ರೈತರ ಕೃಷಿ ಪಂಪುಸೆಟ್‌ಗಳಿಗೆ ಮೀಟರ್ ಜೋಡಣೆ ಮಾಡಿ ಖಾಸಗೀಕರಣ ಮಾಡುವ ಅಂದಿನ ಸಿಎಂ ಎಸ್.ಎಂ.ಕೃಷ್ಣ ಅವರ ಪ್ರಯತ್ನ ತಡೆಹಿಡಿಯಲಾಯಿತು. ಆದರೆ 2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೃಷಿ ಕಾಯಿದೆಗಳ ಜೊತೆ ವಿದ್ಯುತ್ ಖಾಸಗೀಕರಣ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಾಗಿತ್ತು. ಇದನ್ನು ದೇಶದ ರೈತರ ಪ್ರತಿರೋಧ ಕಾರಣದಿಂದಾಗಿ ಸಂಪೂರ್ಣ ಕೈಬಿಡಲಾಗಿದೆ. ಈಗ ಕರ್ನಾಟಕ ಸರ್ಕಾರ ಮತ್ತೆ ಈ ಕೆಟ್ಟ ಪ್ರಯತ್ನ ಕೈಗೆತ್ತಿಕೊಂಡಿದೆ ಎಂದು ಕಿಡಿಕಾರಿದರು.ಕೃಷಿ ಪಂಪುಸೆಟ್‌ಗಳಿಗೆ ಆಧಾರ ಲಿಂಕ್ ಮಾಡುವ ಪ್ರಕ್ರಿಯೆ ತಕ್ಷಣ ಕೈ ಬಿಡಬೇಕು. ಕೃಷಿ ಪಂಪ್‌ಸೆಟ್‌ಗಳನ್ನು ಗ್ರಿಡ್ ಮತ್ತು ಗ್ರಿಡ್ ಮಾರ್ಗಗಳಿಂದ ಸಂಪೂರ್ಣ ಬೇರ್ಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಪಂಪ್‌ಸೆಟ್‌ಗಳಿಗೆ ಸೋಲಾರ್ ಅಳವಡಿಸಿಕೊಳ್ಳಲು ಶೇ.50ರಷ್ಟು ಸಬ್ಸಿಡಿ ನೀಡುತ್ತೇವೆ, ನೀವು ಖಾಸಗಿಯಾಗಿ ಅಳವಡಿಸಿಕೊಳ್ಳಬೇಕೆಂದು ರೈತರನ್ನು ಪ್ರಚೋದಿಸಿ, ಬೇರ್ಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಎಲ್ಲ ಕೃಷಿ ಪಂಪುಸೆಟ್‌ಗಳಿಗೆ ಮೀಟರ್ ಅಳವಡಿಕೆ ಕಡ್ಡಾಯಗೊಳಿಸುವುದು ನಿಲ್ಲಿಸಬೇಕು. ಸರ್ಕಾರದಿಂದ ಪಡೆಯುತ್ತಿದ್ದ ವಿದ್ಯುತ್ ಸೌಲಭ್ಯವನ್ನು ಸಂಪೂರ್ಣ ಕಡಿತಗೊಳಿಸಿ, ರೈತರು ನೀರಾವರಿಗೋಸ್ಕರ ಪಂಪ್‌ಸೆಟ್ ಮೂಲಕ ಸೋಲಾರ್ ವಿದ್ಯುತ್ ಬಳಸಬೇಕು, ಸೋಲಾರ್ ಪಂಪ್‌ಸೆಟ್‌ಗಳನ್ನು 10 ಎಚ್‌ಪಿ ಬದಲಿಗೆ 75 ಎಚ್‌ಪಿ ಸೀಮಿತವಾಗಿ ಅಳವಡಿಸಿಕೊಳ್ಳತಕ್ಕದೆಂದು ಸರ್ಕಾರವು ಆದೇಶವನ್ನು ತರಲಿದೆ. ಆದೇಶ ರೈತರಿಗೆ ಮಾರಕ ಆಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸರ್ಕಾರ 5 ವಿದ್ಯುಚ್ಛಕ್ತಿ ಕಂಪನಿಗಳನ್ನು ಖಾಸಗಿ ಮಾಲೀಕತ್ವದ ಕಂಪನಿಗಳಿಗೆ ಕೊಡುವ ತೀರ್ಮಾನವೇ ಈ ಎಲ್ಲ ಉದ್ದೇಶಗಳಿಗೆ ಕಾರಣವಾಗಿದೆ. ಆದ್ದರಿಂದ ರೈತರು ಯಾವುದೇ ಕಾರಣಕ್ಕೆ ಸೋಲಾರ್ ಪಂಪ್‌ಸೆಟ್ ಅಳವಡಿಕೆಗೆ ಹೋಗುವುದು ಬೇಡ ಎಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಶತಕೋಟಿ ಬಸಪ್ಪ, ಪಾಟೀಲ್ ವೀರನಗೌಡ, ಭಕ್ತರಹಳ್ಳಿ ಭೈರೇಗೌಡ, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಎನ್.ಬಸವರಾಜ ದಾಗಿನಕಟ್ಟೆ, ಕೆ.ಬಾಬುರಾವ್ ಕಣಿವೆಬಿಳಚಿ ಇತರರು ಇದ್ದರು.- - -
ಕೋಟ್ ಸರ್ಕಾರವು ರೈತರಿಗೆ ಸಹಾಯ ಮಾಡುವ ಉದ್ವೇಶ ಹೊಂದಿದ್ದರೆ ರಾಜ್ಯದ ಸಿ ಮತ್ತು ಡಿ ವರ್ಗದ ಕೃಷಿ ಭೂಮಿಯನ್ನು ಸೋಲಾರ್ ವಿದ್ಯುಚ್ಛಕ್ತಿ ಉತ್ಪಾದನೆಗೆ ಅತ್ಯುತ್ತಮವಾದ ದರ ನೀಡುವ ಮೂಲಕ ರೈತರನ್ನು ವಿದ್ಯುತ್ ಉತ್ಪಾದಕರೆಂದು ಪರಿಗಣಿಸಿ, ಹೆಚ್ಚಿನ ಸಹಾಯಧನ ಮತ್ತು ಉತ್ತೇಜನ ನೀಡಬೇಕು- ಕೋಡಿಹಳ್ಳಿ ಚಂದ್ರಶೇಖರ, ರಾಜ್ಯಾಧ್ಯಕ್ಷ
- - - -7ಕೆಡಿವಿಜಿ32ಃ:ದಾವಣಗೆರೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.