ಸಾರಾಂಶ
ವಿದ್ಯುತ್ ಸಮಸ್ಯೆಯಿಂದಾಗಿ ಎಂಜಿ ರಸ್ತೆ- ಬೈಯಪ್ಪನಹಳ್ಳಿ ನಡುವೆ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಪ್ರಯಾಣಿಕರು ಪರದಾಡಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ವಿದ್ಯುತ್ ಪೂರೈಕೆ ವ್ಯತ್ಯಯದಿಂದ ಮೆಟ್ರೋದ ಎಂ.ಜಿ.ರಸ್ತೆ-ಬೈಯಪ್ಪನಹಳ್ಳಿ ನಡುವೆ ರೈಲುಗಳ ಸಂಚಾರ ಒಂದೂವರೆ ಗಂಟೆಗೂ ಹೆಚ್ಚಿನ ಕಾಲ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದರು. ಸೂಕ್ತವಾಗಿ ಸ್ಪಂದಿಸದ ಬಿಎಂಆರ್‌ಸಿಎಲ್ ಅಧಿಕಾರಿಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.ಇಂದಿರಾನಗರ ರೈಲ್ವೆ ನಿಲ್ದಾಣದಲ್ಲಿ ಉಂಟಾದ ತಾಂತ್ರಿಕ ದೋಷದ ಕಾರಣ ವಿದ್ಯುತ್ ವ್ಯತ್ಯಯವಾಗಿ ಥರ್ಡ್ ರೈಲ್ ಸಿಸ್ಟ್ಂ ವೈಫಲ್ಯ ಉಂಟಾಯಿತು. ಇದರಿಂದ ಬೆಳಗ್ಗೆ 9.30ರ ಸುಮಾರಿಗೆ ರೈಲುಗಳ ಸಂಚಾರ ಸ್ಥಗಿತಗೊಂಡಿತು. ಇದರಿಂದ ಕಚೇರಿ, ಶಾಲಾ ಕಾಲೇಜು ಸೇರಿ ಇತರೆರೆ ತೆರಳುವ ನೌಕರರು, ಜನತೆ ತೀವ್ರ ಪರದಾಡಿದರು. ಎಂ.ಜಿ.ರಸ್ತೆ-ಬೈಯಪ್ಪನಹಳ್ಳಿ ನಡುವಿನ ನಿಲ್ದಾಣಗಳಲ್ಲಿದ್ದ ಪ್ರಯಾಣಿಕರು ನಿಂತಲ್ಲೇ ನಿಲ್ಲುವಂತಾಯಿತು. ಇಂಟರ್ ಚೇಂಜ್ ನಿಲ್ದಾಣ ಮೆಜೆಸ್ಟಿಕ್‌ನಲ್ಲೂ ಹೆಚ್ಚಿನ ಪ್ರಯಾಣಿಕರ ದಟ್ಟಣೆ ಉಂಟಾಗಿತ್ತು.
ಆದರೆ, ಪ್ರಯಾಣಿಕರಿಗೆ ನಿಲ್ದಾಣದ ಸಿಬ್ಬಂದಿ ಸಮರ್ಪಕವಾಗಿ ಸ್ಪಂದಿಸಲಿಲ್ಲ. ಟಿಕೆಟ್ ಮೊತ್ತವನ್ನೂ ಮರಳಿ ನೀಡಲು ಒಪ್ಪಲಿಲ್ಲ. ಇದರಿಂದ ಸಿಬ್ಬಂದಿ ಹಾಗೂ ಪ್ರಯಾಣಿಕರ ನಡುವೆ ವಾಗ್ವಾದ ನಡೆದಿದ್ದು ಕಂಡುಬಂತು. ಎಂ.ಜಿ.ರೋಡ್- ಚಲ್ಲಘಟ್ಟ, ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ನಡುವೆ ರೈಲಿನ ಸಂಚಾರವಿತ್ತು. ಬೆಳಗ್ಗೆ 11ಗಂಟೆ ಬಳಿಕ ಎಂ.ಜಿ.ರಸ್ತೆ-ಬೈಯಪ್ಪನಹಳ್ಳಿ ನಡುವೆ ರೈಲಿನ ಸಂಚಾರ ಪುನರ್ ಆರಂಭವಾಯಿತು.