ಸಾರಾಂಶ
ಕೈಗಾರಿಕಾ ಪ್ರದೇಶಕ್ಕೆ ದಿನದ 24 ಗಂಟೆ ವಿದ್ಯುತ್ ಮತ್ತು ನೀರು ಸರಬರಾಜಿಗೆ ಕ್ರಮಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅಂಬಳೆಯ ಕೆಐಎಡಿಬಿ ಕೈಗಾರಿಕಾ ಪ್ರದೇಶಕ್ಕೆ ವಿದ್ಯುತ್ ಮತ್ತು ನೀರು ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ನೋಡಿ ಕೊಳ್ಳಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಂಬಳೆ ಕೆಐಎಡಿಬಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಿರಂತರ ವಿದ್ಯುತ್ ಮತ್ತು ನೀರು ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದ್ದು ಇದರಿಂದ ಕಾರ್ಖಾನೆಗಳ ಕಾರ್ಯ ನಿರ್ವಹಣೆ ಅಸಾಧ್ಯವಾಗುತ್ತಿದೆ. ಶಾಸಕರು ಮಧ್ಯ ಪ್ರವೇಶಿಸಿ ಕೈಗಾರಿಕಾ ಪ್ರದೇಶಕ್ಕೆ ದಿನದ 24 ಗಂಟೆ ವಿದ್ಯುತ್ ಮತ್ತು ನೀರು ಸರಬರಾಜಿಗೆ ಕ್ರಮ ತೆಗೆದುಕೊಳ್ಳಬೇಕೆಂದು ಇಂಡಸ್ಟ್ರಿಯಲ್ ಏರಿಯಾ ಮಾಲೀಕರು ಮತ್ತು ಬಾಡಿಗೆದಾರರ ಸಂಘದ ಪದಾಧಿಕಾರಿಗಳು ನೀಡಿದ ಮನವಿ ಪತ್ರ ಸ್ವೀಕರಿಸಿ ಶಾಸಕರು ಮಾತನಾಡಿದರು.
ಕಾರ್ಖಾನೆಗಳಿಂದ ಅನೇಕರಿಗೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿದೆ. ಕಾರ್ಖಾನೆಗಳು ಸುಗಮವಾಗಿ ನಡೆಯಲು ವಿದ್ಯುತ್ ಸರಬರಾಜು ಅತ್ಯಂತ ಅವಶ್ಯಕ. ಆದುದ್ದರಿಂದ ಇನ್ನೂ ಮುಂದೆ ವಿದ್ಯುತ್ ಸರಬರಾಜಿನಲ್ಲಿ ಅಡಚಣೆಯಾಗದಂತೆ ನೋಡಿ ಕೊಳ್ಳುವುದು ಮೆಸ್ಕಾ ಅಧಿಕಾರಿಗಳ ಕರ್ತವ್ಯ ಎಂದರು.ಇದಕ್ಕೂ ಮೊದಲು ಇಂಡಸ್ಟ್ರಿಯಲ್ ಏರಿಯಾ ಮಾಲೀಕರು ಮತ್ತು ಬಾಡಿಗೆದಾರರ ಸಂಘದ ಪದಾಧಿಕಾರಿಗಳು
ಶಾಸಕರನ್ನು ಭೇಟಿ ನೀಡಿ ಅಂದಾಜು 20 ವರ್ಷಗಳಿಂದ 80ಕ್ಕೂ ಹೆಚ್ಚು ವಿವಿಧ ತರಹದ ಕೈಗಾರಿಕೆಗಳು ಅಂಬಳೆ ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯ ಆರ್ಥಿಕ ಪ್ರಗತಿಗೂ ಸಹಕಾರಿಯಾಗಿವೆ. ನಮಗೆ ವಿದ್ಯುತ್ ಮತ್ತು ನೀರು ಸರಬರಾಜಿನಲ್ಲಿ ಅಡಚಣೆ ಯಾಗುತ್ತಿರುವುದರಿಂದ ಕಾರ್ಖಾನೆಗಳಲ್ಲಿ ಉತ್ಪತ್ತಿ ಕುಂಠಿತವಾಗುತ್ತಿದೆ. ಶ್ರಮ ಜೀವಿಗಳಿಗೆ ಪೂರ್ಣ ಪ್ರಮಾಣದ ಕೆಲಸ ಕೊಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಆರ್ಥಿಕ ಹೊರೆಯೂ ಹೆಚ್ಚುತ್ತಿದೆ ಎಂದು ತಿಳಿಸಿದರು.ಹಳ್ಳಿಗಳಿಗೆ ಸರಬರಾಜು ಮಾಡುವ ವಿದ್ಯುತ್ ಲೈನ್‌ನಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಇದರಿಂದ ಕಾರ್ಖಾನೆ ಗಳನ್ನು ನಡೆಸಲು ತುಂಬಾ ತೊಂದರೆಯಾಗುತ್ತಿದೆ. ಗಾಳಿ ಮಳೆ ಬಂದಾಗ, ಹಳ್ಳಿಗಳಲ್ಲಿ ಏನೇ ಕೆಲಸ ಮಾಡಬೇಕಾದರೆ, ಅಥವಾ ಸಂಪರ್ಕದಲ್ಲಿ ತೊಂದರೆಯಾದಾಗ ಆಗಾಗ ವಿದ್ಯುತ್ ಸಂಪರ್ಕ ದಿನದಲ್ಲಿ ಹಲವಾರು ಬಾರಿ ಕಡಿತ ಮಾಡುತ್ತಾರೆ. ಇದರಿಂದ ಕಾರ್ಖಾನೆ ನಡೆಸಲು ಜನರೇಟರ್ ಉಪಯೋಗಿಸುತ್ತಿದ್ದು, ಇದರಿಂದ ಆರ್ಥಿಕ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಜಿ.ಸುರೇಂದ್ರ ಶೆಟ್ಟಿ, ಕಾರ್ಯದರ್ಶಿ ಕೆ.ಎನ್.ಮಂಜುರಾಜ್ ಅರಸ್, ಜಂಟಿ ಕಾರ್ಯದರ್ಶಿ ಎಸ್.ಸೋಮಶೇಖರ್, ಖಜಾಂಚಿ ಸಿ.ಎಸ್. ಸುಬ್ಬರಾವ್, ವಿ.ಪಿ ಕೃಷ್ಣೇಗೌಡ, ಬಿ.ಎಂ.ಶರತ್ ಕುಮಾರ್, ಸಿ.ಉಮೇಶ್ ಹಾಜರಿದ್ದರು. 18 ಕೆಸಿಕೆಎಂ 1ಅಂಬಳೆಯ ಕೆಐಎಡಿಬಿ ಕೈಗಾರಿಕಾ ಪ್ರದೇಶಕ್ಕೆ ವಿದ್ಯುತ್ ಮತ್ತು ನೀರು ಸರಬರಾಜು ವ್ಯತ್ಯಯ ಆಗದಂತೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ಕೈಗಾರಿಕೋದ್ಯಮಿಗಳು ಶಾಸಕ ಎಚ್.ಡಿ. ತಮ್ಮಯ್ಯ ಮನವಿ ಸಲ್ಲಿಸಿದರು.