ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ಸಂವಿಧಾನ ರಚನೆಯಾದಾಗಿನಿಂದ ಅದನ್ನು ವಿರೋಧಿಸಿಕೊಂಡು ಬಂದ ಶಕ್ತಿಗಳಿಗೆ ಅಧಿಕಾರ ಸಿಕ್ಕಿದ್ದು, ಅಂತಹ ಶಕ್ತಿಗಳನ್ನು ಸೋಲಿಸಿ ಅಧಿಕಾರದಿಂದ ದೂರವಿಡಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.ತುಮಕೂರು ವಿಶ್ವವಿದ್ಯಾನಿಲಯದ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ತುಮಕೂರು ಜಿಲ್ಲೆಯ ಡಿಗ್ರಿ ಕಾಲೇಜು ವಿದ್ಯಾಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಏರ್ಪಡಿಸಿದ್ದ ಸಂವಿಧಾನ ಅರಿವು ಕಾರ‍್ಯಾಗಾರದಲ್ಲಿ ಮಾತನಾಡಿದರು.
ಸಂವಿಧಾನದಲ್ಲಿ ಜಾತ್ಯತೀತೆಯನ್ನು ಪ್ರತಿಪಾದಿಸಲಾಗಿದೆ. ಸಮಾನವಾಗಿ ಬದುಕಬೇಕು ಎಂದು ಸಂವಿಧಾನ ಹೇಳಿದ್ದರೂ, ಒಂದು ಧರ್ಮ ಮಾತ್ರ ಬೇಕು ಎಂದು ಹೇಳಿದರೆ ಇತರೆ ಧರ್ಮದವರು ದ್ವಿತೀಯ ದರ್ಜೆ ಪ್ರಜೆಗಳಾಗಿ ಬದುಕಬೇಕಾಗುತ್ತದೆ, ಆದ್ದರಿಂದ ಸಂವಿಧಾನ ವಿರೋಧಿ ಶಕ್ತಿಗಳನ್ನು ವಿರೋಧಿಸಬೇಕು ಎಂದು ಹೇಳಿದರು.ಒಂದು ದೇಶ ನಡಯಬೇಕೆಂದರೆ ಒಂದು ಚೌಕಟ್ಟಿರಬೇಕು, ಆ ಚೌಕಟ್ಟೇ ಸಂವಿಧಾನವಾಗಿದೆ. ಅದರಂತೆ ಭಾರತ ದೇಶ ಹಲವು ಜಾತಿ, ಧರ್ಮಗಳನ್ನು ಹೊಂದಿರುವಂತಹ ದೇಶ, ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ವಿಶ್ವಾಸದಿಂದ ಬದುಕಲು ಸಂವಿಧಾನದಿಂದ ಮಾತ್ರ ಸಾಧ್ಯ, ಹೀಗಾಗಿ ಪ್ರತಿಯೊಬ್ಬರಿಗೂ ಸಂವಿಧಾನದ ಅರಿವು ಅಗತ್ಯವಿದೆ ಎಂದು ತಿಳಿಸಿದರು.
ಕಾರ‍್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕನಾಥ್ ಮಾತನಾಡಿ ನಾವೆಲ್ಲಾ ಎಂತಹ ವ್ಯವಸ್ಥೆಯಲ್ಲಿದ್ದೇವು. ಎಂದರೆ ಹೆಣ್ಣು ಮಕ್ಕಳು ಮತ್ತು ದಲಿತ ಸಮುದಾಯದವರನ್ನು ಅಸ್ಪೃಶ್ಯರು ಎಂದು ನೋಡುತ್ತಿದಂತಹ ದೇಶದಲ್ಲಿದ್ದೆವು. ಅಂಬೇಡ್ಕರ್ ಬ್ರಿಟನ್ ಗೆ ದುಂಡು ಮೇಜಿನ ಪರಿಷತ್ ಸಭೆಗೆ ಹೋಗಿದ್ದಾಗ, ಬ್ರಿಟನ್ ಸರ್ಕಾರ ನಿಮ್ಮ ಅಜೆಂಡವೇನು ಎಂದು ಕೇಳಿತು. ಅದಕ್ಕೆ ಅಂಬೇಡ್ಕರ್ ಹೆಣ್ಣು ಮಕ್ಕಳಿಗೆ ಮತದಾನದ ಹಕ್ಕು ನೀಡುವುದು ಎಂದು ಹೇಳಿದರು. ಆಗ ಅಂಬೇಡ್ಕರ್ ಭಾರತದ ಹೆಣ್ಣು ಮಕ್ಕಳಿಗೆ ಮತದಾನದ ಹಕ್ಕು ಕೇಳುತ್ತಿದ್ದಾರೆಂದು ಬ್ರಿಟನ್ ಸರ್ಕಾರ ಮಹಿಳೆಯರಿಗೆ ಮತದಾನದ ಹಕ್ಕನ್ನು ತರಾತುರಿಯಲ್ಲಿ ನೀಡಿತು ಎಂದರು.ಈಗ ಜಾತಿ ಸಮೀಕ್ಷೆ ಮತ್ತು ಗ್ಯಾರಂಟಿ ಯೋಜನೆಗಳ ಬಗ್ಗೆ ತುಂಬಾ ಚರ್ಚೆಗಳು ನಡೆಯುತ್ತಿವೆ. ಜಾತಿ ಸಮೀಕ್ಷೆ ಮಾಡುವುದು ಏಕೆಂದರೆ ಒಂದು ಸವಲತ್ತು ನೀಡಬೇಕಾದರೆ, ತಳ ಸಮುದಾಯಗಳಿಗೆ ಪ್ರಾತಿನಿಧ್ಯ ಕೊಡಬೇಕು, ಸಂವಿಧಾನದ ಆಶಯವು ಇದೇ ಆಗಿದೆ, ಆದರೆ ಸಂವಿಧಾನ ಎಂದ ಕೂಡಲೇ ಕೆಲವರಿಗೆ ದಲಿತರಿಗೆ ಮೀಸಲಾತಿ ಕೊಡುವುದು ಎಂಬ ವಾದವಿತ್ತು. ಆದರೆ ಅಂಬೇಡ್ಕರ್, ಆರ್ಥಿಕವಾಗಿ ಹಿಂದುಳಿದವರಿಗೆ, ಹಿಂದುಳಿದ ವರ್ಗಗಳಿಗೆ, ಸಮಾಜಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕೆಂದು ಹೇಳಿದ್ದಾರೆ ಎಂದು ತಿಳಿಸಿದರು.
ಸರ್ಕಾರ ಕೊಟ್ಟಿರುವ ಗ್ಯಾರಂಟಿಗಳ ಬಗ್ಗೆ ಬಿಟ್ಟಿ ಚಾಕರಿ ಯೋಜನೆಗಳು ಎಂದು ಕೆಲವರು ಜರಿಯುತ್ತಾರೆ. ಸಂವಿಧಾನದ 38 ಮತ್ತು 38ಎ ಪರಿಚ್ಛೇದದ ಪ್ರಕಾರ ಎಲ್ಲಾರಿಗೂ ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ನೀಡಬೇಕೆಂದಿದೆ, ದೇಶದಲ್ಲಿ ಎಲ್ಲರ ಆದಾಯ ಸಮಾನವಾಗಿಲ್ಲ, ಅದಾನಿಯ ಆದಾಯ ಒಂದು ದಿನಕ್ಕೆ 1600 ಕೋಟಿಯಾದರೆ, ಒಬ್ಬ ಸಾಮಾನ್ಯ ಮನುಷ್ಯನ ಆದಾಯ 75 ರುಪಾಯಿಗಳು, ಈ ಅಸಮಾನತೆಯನ್ನು ಹೇಗೆ ಸರಿದೂಗಿಸುವುದು, ಈ ತಾರತಮ್ಯ ಹೋಗಲಾಡಿಸಿ ಸಮಾನತೆ ತರುವ ನಿಟ್ಟಿನಲ್ಲಿ ಅಕ್ಕಿ, ಹಣ ಕೊಡುವ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ ಎಂದರು.ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್ ಪ್ರಾಸ್ತಾವಿಕ ಮಾತಗಳನ್ನಾಡಿದರು. ತುಮಕೂರು ವಿ.ವಿ.ಯ ಕುಲಪತಿ ಎಂ.ವೆಂಕಟೇಶ್ವರಲು, ಸಿ.ಜೆ.ಲಕ್ಷ್ಮಿಪತಿ, ಬೆಂಗಳೂರು ವಿ.ವಿ. ಕುಲಸಚಿವ ರಮೇಶ್ ಇದ್ದರು.
-------------