ಕಾಂಗ್ರೆಸ್‌ಗೆ ಅಧಿಕಾರ, ಮಲ್ಲಿಕಾರ್ಜುನ್‌ ಖರ್ಗೆ ಪ್ರಧಾನಿ ಗ್ಯಾರಂಟಿ: ಬಿಆರ್‌ ಪಾಟೀಲ್‌

| Published : Apr 13 2024, 01:05 AM IST

ಕಾಂಗ್ರೆಸ್‌ಗೆ ಅಧಿಕಾರ, ಮಲ್ಲಿಕಾರ್ಜುನ್‌ ಖರ್ಗೆ ಪ್ರಧಾನಿ ಗ್ಯಾರಂಟಿ: ಬಿಆರ್‌ ಪಾಟೀಲ್‌
Share this Article
  • FB
  • TW
  • Linkdin
  • Email

ಸಾರಾಂಶ

ನರೇಂದ್ರ ಮೋದಿ ಹೆಸರಿಗೆ ರಾಮನಾಮ ಹೇಳ್ತಾರೆ. ಆದರೆ ಎಲ್ಲರನ್ನು ನುಂಗಿ ನೀರು ಕುಡಿಯುತ್ತಾರೆ. ದೇಶದಲ್ಲಿ ಪ್ರಜಾಪ್ರಭುತ್ವ ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕಿದೆ ಎಂದು ಶಾಸಕರ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ದುರಾಡಳಿತಕ್ಕೆ ಹಾಗೂ ಸೇಡಿನ ಮನೋಭಾವಕ್ಕೆ ಬೇಸತ್ತಿರುವ ನಮ್ಮ ಜನ ಈ ಬಾರಿ ಕಾಂಗ್ರೆಸ್‌ ಕೈಯಲ್ಲಿ ಅಧಿಕಾರ ಕೊಡುತ್ತಾರೆ ಮತ್ತು ದೇಶದ ಪ್ರಧಾನಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂದು ಮುಖ್ಯಮಂತ್ರಿಗಳ ಸಲಹೆಗಾರರಾದ ಶಾಸಕ ಬಿಆರ್‌ ಪಾಟೀಲ್‌ ಭವಿಷ್ಯ ನುಡಿದರು.

ಅವರು ನಗರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಾಗರ ಖಂಡ್ರೆ ಪರ ಪ್ರಚಾರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಗಾಂಧೀಜಿ ಕನಸು ನನಸಾಗಿಸುವದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಪಂಡಿತ್‌ ಜವಾಹರಲಾಲ್‌ ನೆಹರು ಅವರಿಂದ ಮನಮೋಹನ್‌ ಸಿಂಗ್‌ ಅವರ ವರೆಗೆ ಪ್ರಯತ್ನ ನಡೆಸಿದ್ದಾರೆ. ಆದರೆ ಈ ಬಿಜೆಪಿ ಸರ್ಕಾರ ಅದೆಲ್ಲವನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು.

ನರೇಂದ್ರ ಮೋದಿ ಹೆಸರಿಗೆ ರಾಮನಾಮ ಹೇಳ್ತಾರೆ. ಆದರೆ ಎಲ್ಲರನ್ನು ನುಂಗಿ ನೀರು ಕುಡಿಯುತ್ತಾರೆ. ದೇಶದಲ್ಲಿ ಪ್ರಜಾಪ್ರಭುತ್ವ ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕಿದೆ. ಇದು ಕೇವಲ ಸಾಗರ ಖಂಡ್ರೆ ಅವರದ್ದಾಗಲಿ ಕಾಂಗ್ರೆಸ್‌ ಪಕ್ಷಕ್ಕಾಗಿನ ಚುನಾವಣೆ ಅಲ್ಲ ಇದು ದೇಶದ ಮುಂದಿನ ಭವಿಷ್ಯ ಬರೆಯುವ ಚುನಾವಣೆಯಾಗಿದೆ.

ಪ್ರಧಾನಿ ಮೋದಿ ಸ್ವಂತ ಮನೆ ಕಟ್ಟಿಕೊಳ್ಳಲು ₹500ಕೋಟಿ ಖರ್ಚು ಮಾಡಿಕೊಳ್ಳುತ್ತಿದ್ದಾರೆ. ವಿಲಾಸಿ ಜೀವನಕ್ಕಾಗಿ ಜನರ ನೂರಾರು ಕೋಟಿ ರು. ವ್ಯಯ ಮಾಡುತ್ತಿದ್ದಾರೆ. ವಿಶೇಷ ವಿಮಾನಕ್ಕಾಗಿ 17 ಸಾವಿರ ಕೋಟಿ ರು. ಖರ್ಚು ಮಾಡಿದರು. ಹೊಸ ಕಾರುಗಳಿಗೆ 72ಕೋಟಿ ರು. ಖರ್ಚು ಮಾಡಿದರು. ಸೆಂಟ್ರಲ್‌ ವಿಸ್ತಾ ಕಟ್ಟಲು 20ಸಾವಿರ ಕೋಟಿ ರು. ಖರ್ಚು ಮಾಡುತ್ತಿದ್ದಾರೆ, ಹೊಸ ಪಾರ್ಲಿಮೆಂಟ್‌ಗೆ 1ಸಾವಿರ ಕೋಟಿ ರು. ಖರ್ಚು ಮಾಡುವದು, ಚುನಾವಣೆ ಈ ಸಂದರ್ಭದಲ್ಲಿ ನಿತ್ಯ 200 ಕೋಟಿ ರು. ಖರ್ಚು ವೆಚ್ಚವಾಗುತ್ತಿದೆ ಈ ಬಡ ದೇಶಕ್ಕೆ ಬೇಕಾ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ರಾಜಶೇಖರ ಪಾಟೀಲ್‌ ಮಾತನಾಡಿ, ಕಾಂಗ್ರೆಸ್‌ ಅಭ್ಯರ್ಥಿ ಯುವಕರಾಗಿರುವ ಸಾಗರ ಖಂಡ್ರೆ ಲೋಕಸಭೆಗೆ ಹೋಗಬೇಕಿದೆ. ರಾಜ್ಯದಲ್ಲಿ ಆಡಳಿತದಲ್ಲಿ ಇರುವ ಕಾಂಗ್ರೆಸ್‌ ಪಕ್ಷ ಈ ಹಿಂದೆ ಚುನಾವಣೆಯಲ್ಲಿ ನೀಡಿದ ಭರವಸೆ ಈಡೇರಿಸಿದ್ದಾಗಿದೆ. ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದಲ್ಲಿ ಮತ್ತಷ್ಟು ಗ್ಯಾರಂಟಿ ಜಾರಿಗೆ ತರುವದರಲ್ಲಿ ಸಂದೇಹವಿಲ್ಲ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ವಿಜಯಸಿಂಗ್‌ ಅವರು ಮಾತನಾಡಿ, ಬಿಜೆಪಿಯವರು ಬರೀ ಗಂಟೆ ಬಾರಿಸ್ತಾರೆ. ಕೇವಲ ಪೊಳ್ಳು ಹೇಳಿಕೆ ಹರಿಬಿಡ್ತಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೇರಿದರೆ ರೈತರ ಸಾಲ ಮನ್ನಾ, ಮಹಿಳೆಯರಿಗೆ, ನಿರುದ್ಯೋಗಿಗಳಿಗೆ ವಾರ್ಷಿಕ ತಲಾ ಒಂದು ಲಕ್ಷ ರು. ಸೇರಿ ಮತ್ತಿತರರ ಅಗತ್ಯತೆ ಈಡೇರಿಸಲಾಗುತ್ತದೆ ಎಂದು ತಿಳಿಸಿದರು.

ಕಾಂಗ್ರೆಸ್‌ ಘೋಷಿತ ಅಭ್ಯರ್ಥಿ ಸಾಗರ ಖಂಡ್ರೆ ಮಾತನಾಡಿ, ಒಂದು ದಶಕಗಳ ಕಾಲ ಸಂಸದರಾಗಿದ್ದರೂ ಗ್ರಾಮ ಮಟ್ಟದಲ್ಲಿ ಯಾವುದೇ ಅಭಿವೃದ್ಧಿ ಇರಲಿ, ಗ್ರಾಮ ಭೇಟಿಯೂ ಮಾಡಿಲ್ಲ. ಅನುದಾನ ನೀಡುವದರಲ್ಲಿಯೂ ಅತ್ಯಂತ ಕೋಠರತನ ಪ್ರದರ್ಶನ, ರೈತರ ಕುರಿತಾಗಿಯೂ ಸರಿಯಾದ ಸ್ಪಂದನೆ ಇಲ್ಲವೇ ಇಲ್ಲ. ಕಾಂಗ್ರೆಸ್‌ ಗ್ಯಾರಂಟಿಗಳ ಕುರಿತು ಪ್ರತಿಯೊಬ್ಬ ಬಡವನಿಗೂ ಸಹಾಯವಾಗುತ್ತಿದೆ ಅದನ್ನ ಜನರೇ ಹೇಳುತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ನಿಮ್ಮ ಮನೆ ಮಗನಾಗಿ ಆಯ್ಕೆ ಮಾಡಿ ಗೆಲ್ಲಿಸುತ್ತೀರಿ ಎಂಬ ಭರವಸೆ ಇದೆ ಎಂದರು.ಬಹಿರಂಗ ಚರ್ಚೆಗೆ ಸಿದ್ದ, ಜ್ಞಾನದ ಅಳತೆ ಅಳೆಯೋಣ, ಖೂಬಾಗೆ ಸಾಗರ್‌ ಸವಾಲು:

ವಿರೋಧಿಗಳು ಹೇಳ್ತಾರೆ ನನ್ನ ವಯಸ್ಸು ಕಡಿಮೆ ಅನುಭವ ಕಡಿಮೆ ಎಂದು. ಆದರೆ ನಾನು ಬಿಬಿಎ ಎಲ್‌ಎಲ್‌ಬಿ 5 ವರ್ಷದ ಕೋರ್ಸ್‌ ಮುಗಿದಿದೆ. ಸುಪ್ರಿಂಕೋರ್ಟ್‌ನಲ್ಲಿಯೂ ಕೆಲಸ ಮಾಡಿದ್ದೇನೆ, ಸುಪ್ರಿಂಕೋರ್ಟ್‌ ನ್ಯಾಯಾಧೀಶನ ಕೈಕೆಳಗೆ ಕೆಲಸ ಮಾಡಿದ್ದೇನೆ, ವಕೀಲರ ಕೈಯಲ್ಲಿ ಕೆಲಸ ಮಾಡಿದ್ದೇನೆ. ಅಷ್ಟಕ್ಕೂ ರಾಜ್ಯ, ರಾಷ್ಟ್ರ ಅಂತಾರಾಷ್ಟ್ರೀಯ ವಿಷಯವಾಗಿ ಯಾರಿಗೆ ಎಷ್ಟು ಜ್ಞಾನವಿದೆ ಎಂಬ ಕುರಿತು ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ ಎಂದು ಕಾಂಗ್ರೆಸ್‌ ಘೋಷಿತ ಅಭ್ಯರ್ಥಿ ಸಾಗರ ಖಂಡ್ರೆ ಸವಾಲೆಸೆದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ದೇಶಾದ್ಯಂತ ಪೆಟ್ರೋಲ್‌, ಡೀಸಲ್‌ ಬೆಲೆ ಏರಿಕೆ ಎಲ್ಲವನ್ನೂ ಜನರನ್ನ ಕಂಗಾಲಾಗಿಸಿದೆ. ಕಪ್ಪು ಹಣ ತರ್ತೇವೆ ಎಂದವರು ಈಗ ಎಲ್ಲಿ ಹೋದರು. ಕಪ್ಪು ಇದ್ದದ್ದನ್ನೆಲ್ಲ ಬಿಳಿ ಮಾಡಿಕೊಂಡ ಬಂಡವಾಳ ಶಾಹಿಗಳು, ರೈತರ ಆದಾಯ ದುಪ್ಪಟ್ಟು ಮಾಡುವ ಭರವಸೆ ಸುಳ್ಳಾಯಿತು. ಹೀಗೆಯೇ ಅನೇಕ ಸುಳ್ಳುಗಳ ಸರಮಾಲೆ ಹೊತ್ತ ಬಿಜೆಪಿಗೆ ಈ ಬಾರಿ ಮತದಾರರು ಪಾಠ ಕಲಿಸಲಿದ್ದಾರೆ. ಭಗವಂತ ಖೂಬಾ ಸುಳ್ಳಿನ ಸರದಾರ, ದುರಹಂಕಾರಕ್ಕೆ ಕೊನೆ ಹೇಳಲು ಜನ ಬಯಸಿದ್ದಾರೆ. ಇವರ ಕೊನೆ ಚುನಾವಣೆ. ಜನ ಬೈ ಬೈ ಭವಂತ ಖೂಬಾ ಎಂದು ಹೇಳುತ್ತ ಮತ್ತೇ ಬರಬೇಡ ಎಂದು ಕರೆ ನೀಡುತ್ತಿದ್ದಾರೆ ಎಂದರು

ಕಾರ್ಯಕ್ರಮದಲ್ಲಿ ಪೌರಾಡಳಿಚ ಸಚಿವ ರಹೀಮ್ ಖಾನ್‌, ಶಾಸಕರಾದ ಅರವಿಂದ ಅರಳಿ, ಭೀಮರಾವ್‌ ಪಾಟೀಲ್‌, ಚಂದ್ರಶೇಖರ ಪಾಟೀಲ್‌, ಧನರಾಜ ತಾಳಂಪಳ್ಳಿ, ಮಾಲಾ ಬಿ. ನಾರಾಯಣರಾವ್‌, ಬಸವರಾಜ ಜಾಬಶೆಟ್ಟಿ, ಮಾಜಿ ಶಾಸಕ ಅಶೋಕ ಖೇಣಿ, ನೀಲಕಂಠ ರಾಠೋಡ, ಗುರಮ್ಮ ಸಿದ್ದಾರೆಡ್ಡಿ, ಅಮೃತರಾವ್‌ ಚಿಮಕೋಡೆ, ನರಸಿಂಗರಾವ್‌ ಸೂರ್ಯವಂಶಿ ಸೇರಿದಂತೆ ಮತ್ತಿತರರು ಇದ್ದರು.