ಕಾಂಗ್ರೆಸ್ ಕಾರ್ಯಕರ್ತರಿಗೆ ಅಧಿಕಾರ ಸಿಗುತ್ತಿಲ್ಲವೆಂಬ ನೋವು ಕಾರ್ಯಕರ್ತರಲ್ಲಿ ಇರುವಂತೆ ಸಹಜವಾಗಿಯೇ ನನಗೂ ಇದೆ. ದಯಮಾಡಿ ಈ ಬಗ್ಗೆ ಪಕ್ಷದ ಹೈಕಮಾಂಡ್ ಗಮನ ಹರಿಸಬೇಕು ಎಂದು ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಮನವಿ ಮಾಡಿದ್ದಾರೆ.

- ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರೂವರೆ ವರ್ಷವಾದರೂ ಕಾರ್ಯಕರ್ತರಿಗೆ ಅಧಿಕಾರವಿಲ್ಲದ ನೋವು ನನಗಿದೆ: ಶಾಸಕ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾಂಗ್ರೆಸ್ ಕಾರ್ಯಕರ್ತರಿಗೆ ಅಧಿಕಾರ ಸಿಗುತ್ತಿಲ್ಲವೆಂಬ ನೋವು ಕಾರ್ಯಕರ್ತರಲ್ಲಿ ಇರುವಂತೆ ಸಹಜವಾಗಿಯೇ ನನಗೂ ಇದೆ. ದಯಮಾಡಿ ಈ ಬಗ್ಗೆ ಪಕ್ಷದ ಹೈಕಮಾಂಡ್ ಗಮನ ಹರಿಸಬೇಕು ಎಂದು ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಮನವಿ ಮಾಡಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವಿರಾರು ನಿಗಮ ಮಂಡಳಿಗಳ ನಿರ್ದೇಶಕ ಸ್ಥಾನಗಳು ಇವೆ. ನಮ್ಮ ಸರ್ಕಾರ ಬಂದು ಮೂರೂವರೆ ವರ್ಷವಾಗುತ್ತಿದೆ. ಮೊದಲೇ ಆಯ್ಕೆಯಾಗಿದ್ದರೆ ಒಬ್ಬೊಬ್ಬರಿಗೆ ಒಂದೊಂದು ವರ್ಷ ಕೊಟ್ಟಿದ್ದರೂ ಒಂದು ಕ್ಷೇತ್ರದಲ್ಲಿ 15 ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಬಹುದಾಗಿತ್ತು ಎಂದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ ಹಾಗೂ ಪಕ್ಷದ ಹೈಕಮಾಂಡ್‌ಗೆ ಮನವಿ ಮಾಡುತ್ತೇವೆ. ನಿಗಮ ಮಂಡಳಿ ನೇಮಕಾತಿ ಮಾಡುವ ಮೂಲಕ ನಮ್ಮ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮೊದಲು ಆಗಬೇಕು ಎಂದರು.

ಬೆಂಗಳೂರಿಗೆ ಬಂದ ಶಾಸಕರು ಎರಡೆರಡು ಮದುವೆ ಆಗಿದ್ದಾರೆಂದು ನಮ್ಮ ಗುರುಗಳು ಮಾತನಾಡಿದ್ದಾರೆ. ಅನುಭವ ಇರಬಹುದು ಮಾತನಾಡಿರುತ್ತಾರೆ. ನನಗೇನೂ ಹಾಗೆ ಅವಕಾಶ ಸಿಕ್ಕಿಲ್ಲ. ನಾನು ಹೇಗೆ ಹೇಳುವುದಕ್ಕಾಗುತ್ತದೆ? ಹಿರಿಯರ ಅನುಭವ ಅಲ್ಲಗಳೆಯೋಕೂ ಆಗುವುದಿಲ್ಲ. ನನಗೆ ಇನ್ನೂ ಅಂತಹ ಅವಕಾಶ ಸಿಕ್ಕಿಲ್ಲ. ನಾನು ಹೇಗೆ ಹೇಳಲಿ? ಮನೆಯಲ್ಲಿ ಟೀವಿನಲ್ಲಿ ಲೈವ್‌ ನೋಡುತ್ತಿರುತ್ತಾರೆ. ಆಡುಭಾಷೆಯಲ್ಲಿ ಯಾರನ್ನೋ ಗುರಿಯಾಗಿಟ್ಟುಕೊಂಡು ಮಾತನಾಡಿರುತ್ತೇವೆ. ಯಾರೋ ವಿಪಕ್ಷದವರು ಎರಡು ಮದುವೆ ಆಗಿರುವುದನ್ನು ನೋಡಿ ಹೇಳಿರುತ್ತಾರೆ ಎಂದು ಶಾಸಕರು ಪ್ರತಿಕ್ರಿಯಿಸಿದರು.

ಸಿಎಲ್‌ಪಿ ಸಭೆಯಲ್ಲಿ ಅರ್ಧದಷ್ಟು ಶಾಸಕರು ಸೋಲುತ್ತಾರೆಂಬ ಬಗ್ಗೆ ಚರ್ಚೆಯಾಗಿದೆ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ಸಿಎಲ್‌ಪಿ ಸಭೆಯಲ್ಲಿ ನಾನೂ ಇದ್ದೆ. ಇಡೀ ಸಭೆಯಲ್ಲಿ ಯಾವುದೇ ಶಾಸಕರು ಸೋಲುವ ಬಗ್ಗೆ ಚರ್ಚೆಯಾಗಿಲ್ಲ, ಯಾರೂ ಅದರ ಬಗ್ಗೆ ಮಾತನಾಡಿಲ್ಲ. ಕೆಲ ಶಾಸಕರಿಗೆ ಹಿನ್ನಡೆ ಇದೆ. ಸಹಜವಾಗಿ ವಿರೋಧಿ ಅಲೆ ಇರುತ್ತದೆ. ದೇವೇಗೌಡರು, ಡಿ.ಕೆ.ಶಿವಕುಮಾರ ಸಹ ಚುನಾವಣೆಗಳಲ್ಲಿ ಹಿಂದೆ ಸೋತಿದ್ದಾರೆ ಎಂದು ತಿಳಿಸಿದರು.

ಸೋಲಿಲ್ಲದ ಸರದಾರ ಎನ್ನುತ್ತಿದ್ದ ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್‌, ಎಸ್.ಬಂಗಾರಪ್ಪ ಸಹ ಚುನಾವಣೆಗಳಲ್ಲಿ ಸೋತಿದ್ದಾರೆ. ಚುನಾವಣೆಯಲ್ಲಿ ಸೋಲು, ಗೆಲುವುಗಳು ಸಹಜವಾಗಿವೆ. ಎಚ್ಚೆತ್ತು ಓಡಾಡುವಂತೆ ಸಿಎಲ್‌ಪಿ ಸಭೆಯಲ್ಲಿ ಸೂಚನೆ ನೀಡಿದ್ದಾರೆ. 2028ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಸೋಲು, ಗೆಲುವು ಅನ್ನೋದೆಲ್ಲಾ ಬೂತ್ ಓಪನ್‌ ಆದ ನಂತರವೇ ಗೊತ್ತಾಗುತ್ತದೆ ಎಂದು ಶಿವಗಂಗಾ ಹೇಳಿದರು.

ಮುಂಬರುವ ಚುನಾವಣೆಗೆ ಕೋಟಿಗಟ್ಟಲೇ ದುಡ್ಡು ಬೇಕು. ಇದೆಲ್ಲಾ ಸಹಜ ಪ್ರಕ್ರಿಯೆ ಎಂಬಂತಾಗಿದೆ. ಇಷ್ಟು ಕೋಟಿ ದುಡ್ಡೇ ಬೇಕು ಅಂತಾ ನಂಬರ್ ಬೇಡ. ಸೋಲುತ್ತೇನೆಂದು ಗೊತ್ತಿರುವವರು ಯಾರಾದರೂ ನಾಮಿನೇಷನ್ ಮಾಡುತ್ತಾರಾ? ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದುಕೊಂಡವರು ನಾಮಿನೇಷನ್ ಫೈಲ್ ಮಾಡುತ್ತಾರೆ ಎಂದು ಶಾಸಕ ಬಸವರಾಜ ಶಿವಗಂಗಾ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

- - -

(ಬಾಕ್ಸ್‌)

* ಬಸವಂತಪ್ಪ ಮುಗ್ಧ ಮನಸ್ಸಿನ ಜನಾನುರಾಗಿ ವ್ಯಕ್ತಿ

- ಶಾಮನೂರು ಕುಟುಂಬದ ಜೊತೆಗೆ ನಮ್ಮ, ಬಸವಂತಪ್ಪ ಬಾಂಧವ್ಯವಿದೆ: ಶಿವಗಂಗಾ

ದಾವಣಗೆರೆ: ದಾವಣಗೆರೆಯಲ್ಲಿ ಸಚಿವ ಕೆ.ಎಸ್.ಬಸವಂತಪ್ಪ ಅಸಹಾಯ ಆಗಿದ್ದಾರೆಂಬುದು ವಿಪಕ್ಷಗಳ ಟೀಕೆಯಷ್ಟೇ. ಬಸವಂತಪ್ಪ ಮುಗ್ಧ ಮನಸ್ಸಿನ, ಜನಾನುರಾಗಿ ವ್ಯಕ್ತಿತ್ವದವರು. ನಾನಾಗಲೀ, ಬಸವಂತಪ್ಪ ಅವರಾಗಲೀ ಶಾಮನೂರು ಕುಟುಂಬದ ಜೊತೆಗೆ ಒಂದೇ ಕುಟುಂಬದವರಾಗಿ ಬೆಳೆದವರು ಎಂದು ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಹಾಗೂ ಶಾಮನೂರು ಕುಟುಂಬ ಮಧ್ಯೆ ಅಣ್ಣ-ತಮ್ಮಂದಿರಗಿಂತ ಹೆಚ್ಚು ಬಾಂಧವ್ಯವಿದೆ. ಅದೇ ರೀತಿ ಬಾಂಧವ್ಯ ಕೆ.ಎಸ್. ಬಸವಂತಪ್ಪ ಅವರೂ ಹೊಂದಿದ್ದಾರೆ. ಸಚಿವ ಬಸವಂತಪ್ಪನವರ ಜೊತೆಗೆ ನಾವೂ ಆಪ್ತವಾಗಿರುತ್ತೇವೆ. ಕೈ ಮುಗಿಯುತ್ತೇವೆ, ಕಾಲಿಗೆ ಬೀಳುತ್ತೇವೆ ಎಂಬುದು ಸಹಜವಾಗಿ ಆಡಿರುವ ಮಾತುಗಳು. ಹಾಗೆ ಮಾತನಾಡುವುದು ಅವರವರ ಅಭಿಪ್ರಾಯವಾಗಿದೆ ಎಂದು ತಿಳಿಸಿದರು.

ಕೆಲವು ಸಂದರ್ಭಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನರನ್ನು ಮಲ್ಲಣ್ಣ ಅಂತೀನಿ. ಇನ್ನೂ ಕೆಲ ಸಂದರ್ಭದಲ್ಲಿ ಮಲ್ಲಿಕಾರ್ಜುನ ಅವರಿಗೆ ಎನ್ನುತ್ತೇನೆ. ಆಯಾ ಸಂದರ್ಭಕ್ಕೆ ಸರಿಯಾಗಿ ಮಾತನಾಡಿರುತ್ತೇವೆ ಎಂದು ಬಸವರಾಜ ಶಿವಗಂಗಾ ಸ್ಪಷ್ಟಪಡಿಸಿದರು.

- - -

-5ಕೆಡಿವಿಜಿ2, 3, 4: ಬಸವರಾಜ ವಿ. ಶಿವಗಂಗಾ