ಸಾರಾಂಶ
ಮಣ್ಣು ಮಾಫಿಯಾಕ್ಕೆ ವಿದ್ಯುತ್ ಪ್ರಸರಣದ ಬೃಹತ್ ಟವರ್‌ಗೆ ಗಂಡಾಂತರ ಎದುರಾದ ಮತ್ತೊಂದು ಪ್ರಕರಣ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಕಂಡುಬಂದಿದ್ದು, ತಾಲೂಕು ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ಆತಂಕ ಜೊತೆಗೆ ಖಂಡನೆ ವ್ಯಕ್ತಪಡಿಸಿದೆ.
- ಟವರ್ ಉರುಳಿದರೆ ಅಪಾರ ಆಸ್ತಿ ಹಾನಿ: ದಸಂಸ ಆತಂಕ - - - ಕನ್ನಡಪ್ರಭ ವಾರ್ತೆ ಹರಿಹರ
ಮಣ್ಣು ಮಾಫಿಯಾಕ್ಕೆ ವಿದ್ಯುತ್ ಪ್ರಸರಣದ ಬೃಹತ್ ಟವರ್‌ಗೆ ಗಂಡಾಂತರ ಎದುರಾದ ಮತ್ತೊಂದು ಪ್ರಕರಣ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಕಂಡುಬಂದಿದ್ದು, ತಾಲೂಕು ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ಆತಂಕ ಜೊತೆಗೆ ಖಂಡನೆ ವ್ಯಕ್ತಪಡಿಸಿದೆ.ಗ್ರಾಮದ ನದಿ ದಡದ ಪಟ್ಟಾ ಜಮೀನಿನಲ್ಲಿ 70 ಅಡಿಗಳಿಗೂ ಎತ್ತರದ ಈ ಟವರ್ ಲೈನ್ ಮೂಲಕ ಅಪಾರ ಪ್ರಮಾಣದ ವಿದ್ಯುತ್ ಪ್ರಸರಣವಾಗುತ್ತಿದೆ. ಟವರ್‌ಗೆ ನಾಲ್ಕೈದು ಅಡಿಗಳ ಅಂತರದಲ್ಲಿ 15 ಅಡಿಗಳಷ್ಟು ಆಳಕ್ಕೆ ಮಣ್ಣು ಗಣಿಗಾರಿಕೆ ನಡೆಸಲಾಗಿದೆ ಎಂದು ಸಂಚಾಲಕ ಪಿ.ಜೆ.ಮಹಾಂತೇಶ್ ದೂರಿದ್ದಾರೆ.
ಈ ಭಾಗದ ನದಿ ದಡದ ಮಣ್ಣು ಮೆದುವಾಗಿದ್ದು, ಒಂದೆರಡು ದಿನ ಮಳೆ ಹಿಡಿದರೂ ಮಣ್ಣು ಸವಕಳಿಯಾಗಿ ಟವರ್ ನೆಲಕ್ಕೆ ಉರುಳುವ ಸಾಧ್ಯತೆ ಹೆಚ್ಚಿದೆ. ಒಂದುವೇಳೆ ವಿದ್ಯುತ್ ಟವರ್ ಉರುಳಿಬಿದ್ದರೆ ಅಪಾರ ಪ್ರಮಾಣದ ಜೀವ, ಆಸ್ತಿ ಹಾನಿಯಾಗುತ್ತದೆ. ದಾವಣಗೆರೆ, ಹಾವೇರಿ ಹಾಗೂ ಇತರೆ ಜಿಲ್ಲೆಗಳಿಗೆ ಹಲವು ದಿನಗಳ ಕಾಲ ವಿದ್ಯುತ್ ಪ್ರಸಾರದಲ್ಲಿ ತಡೆಯುಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಟವರ್‌ಗಳ ಮಾಲೀಕತ್ವ ವಹಿಸಿರುವ ಕೆಪಿಟಿಸಿಎಲ್‍ನವರಿಗೆ ಈ ವಿಷಯ ಹೇಳಿದರೆ, ಹೌದು ವಿಷಯ ನಮ್ಮ ಗಮನಕ್ಕಿದೆ. ಜಮೀನಿನ ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಿದ್ದೇವೆ ಎನ್ನುತ್ತಾರೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಂದಾಯ ಇಲಾಖೆಯವರು. ಮಣ್ಣು ಗಣಿಗಾರಿಕೆ ಮಾಡಿದ್ದಕ್ಕೆ ನೋಟಿಸ್ ನೀಡಿದ್ದೇವೆ. ರಾಜಧನ ಹಾಗೂ ದಂಡ ವಿಧಿಸಿದ್ದೇವೆ ಎಂದು ಸಿದ್ಧಉತ್ತರ ನೀಡುತ್ತಿದ್ದಾರೆ ಎಂದಿದ್ದಾರೆ.
ಜಿಲ್ಲಾಧಿಕಾರಿ, ಗಣಿ, ಕಂದಾಯ, ಕೃಷಿ ಇಲಾಖೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸಂಘಟನೆಯಿಂದ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಮಣ್ಣು ಮಾಫಿಯಾಕ್ಕೆ ಮಣಿದಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಇಂಧನ, ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಇಲಾಖೆಗಳ ಮುಖ್ಯ ಕಾರ್ಯದರ್ಶಿ, ಲೋಕಾಯುಕ್ತರು ಹಾಗೂ ಪರಿಸರವಾದಿ, ಜನಪರ ಹೋರಾಟಗಾರ ಎಸ್.ಆರ್.ಹಿರೇಮಠ ಅವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.- - - -15ಎಚ್‍ಆರ್‍ಆರ್02.ಜೆಪಿಜಿ: