ಸಾರಾಂಶ
ಹಾನಗಲ್ಲ: ಅಪಾಯಗಳಿಂದ ರಕ್ಷಿಸಿಕೊಂಡು ವಿದ್ಯುತ್ ಸೇವೆ ನೀಡುವಲ್ಲಿ ಹೆಸ್ಕಾಂ ಲೈನ್‌ಮನ್ ಹಾಗೂ ವಿದ್ಯುತ್ ಗುತ್ತಿಗೆದಾರರು ಜಾಗ್ರತೆ ವಹಿಸಬೇಕು ಎಂದು ವಿದ್ಯುತ್ ಪರಿವೀಕ್ಷಕ ಶ್ರೀನಿವಾಸ ತಿಳಿಸಿದರು.ಸೋಮವಾರ ಪಟ್ಟಣದ ಶ್ರೀ ಕುಮಾರೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಹೆಸ್ಕಾಂನಿಂದ ಆಯೋಜಿಸಿದ್ದ ವಿದ್ಯುತ್ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯುತ್ ಕಾರ್ಮಿಕರಿಗೆ ಬೆಂಕಿಯೊಂದಿಗೆ ಕೆಲಸ ಮಾಡುವಂತಹದ್ದು. ಅನಿರೀಕ್ಷಿತವಾದ ಅಪಘಾತಗಳ ಕಾರಣದಿಂದ ವಿದ್ಯುತ್ ಇಲಾಖೆಯಲ್ಲಿ ಪವರಮ್ಯಾನರಾಗಿ ಸೇವೆ ಸಲ್ಲಿಸುವವರಿಗೆ ಇದು ಸವಾಲಿನ ಕೆಲಸ. ಇಲ್ಲಿ ಜಾಗ್ರತೆ ಬಹು ಮುಖ್ಯ ಎಂದರು.
ಗುತ್ತಿಗೆದಾರ ಶಿವಕುಮಾರ ಮಲ್ಲಿಗಾರ ಮಾತನಾಡಿ, ಹೆಸ್ಕಾಂ ಮೂಲಕ ವಿದ್ಯುತ್ ಲೈನ್ ಮೇಲೆ ಕೆಲಸ ಮಾಡುವ ಕಾರ್ಮಿಕರು ಮೊಟ್ಟ ಮೊದಲನೆಯದಾಗಿ ಸುರಕ್ಷತಾ ಸಾಮಗ್ರಿಗಳನ್ನು ಬಳಸಬೇಕು ಎಂದರು.ಡಾ. ವಿರುಪಾಕ್ಷ ಮಾತನಾಡಿ, ಆರೋಗ್ಯದತ್ತ ಮೊದಲ ಗಮನ ಇರಲಿ. ಭಾವೋದ್ವೇಗಕ್ಕೆ ಒಳಗಾಗಬೇಡಿ. ಜೀವ ಉಳಿಸಿಕೊಳ್ಳುವುದೇ ಇಲ್ಲಿನ ಪ್ರಥಮ ಚಿಕಿತ್ಸೆ. ಆರೋಗ್ಯ ಕ್ರಮಗಳ ಬಗ್ಗೆ ತಿಳಿದುಕೊಳ್ಳಿ ಎಂದರು.ಹೆಸ್ಕಾಂ ನೌಕರರ ಸಂಘದ ಪ್ರತಿನಿಧಿ ಇಕ್ಬಾಲ್‌ಅಹಮ್ಮದ್ ಮಿಶ್ರಿಕೋಟಿ ಮಾತನಾಡಿ, ಹೆಸ್ಕಾಂ ಅಪಘಾತರಹಿತ ಕಂಪನಿಯಾಗಿ ಮಾಡಿಕೊಳ್ಳಬೇಕು. ಸಿಬ್ಬಂದಿ ಕೊರತೆಯಲ್ಲಿಯೂ ಕಾರ್ಮಿಕರು ಒತ್ತಡದಲ್ಲಿ ಕೆಲಸ ಮಾಡುವಂತಾಗಿದೆ. ಕಂಬದ ಮೇಲೆ ಕುಳಿತ ಕಾರ್ಮಿಕರು ಮೊಬೈಲ್ ಬಳಸಬೇಡಿ. ಕೆಲಸ ಬದ್ಧತೆ ಇರಲಿ. ನಿಷ್ಕಾಳಯಿಂದಾಗಿ ಸಾವು, ಅಂಗವಿಕಲತೆಗೆ ಒಳಗಾಗಿ ಕುಟುಂಬಕ್ಕೂ ತೊಂದರೆ ಕೊಡಬೇಡಿ ಎಂಬ ಸಲಹೆ ನೀಡಿದರು.ಹೆಸ್ಕಾಂ ಹಾವೇರಿ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ಸಿ.ಡಿ. ಹೊಸಮನಿ, ಹೆಸ್ಕಾಂ ಹಾನಗಲ್ಲ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ವಿ.ಎಸ್. ಮರಿಗೌಡರ, ಶ್ರೀ ಕುಮಾರೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಚಿರಂಜೀವಿ ಆಡೂರ, ಕೆ.ಎಲ್. ಅಂಗಡಿ, ಹೆಸ್ಕಾಂ ನೌಕರರ ಸಂಘದ ಅಧ್ಯಕ್ಷ ಸುಂಕದ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ರೇಖಾ ಸಂಗಡಿಗರು ಪ್ರಾರ್ಥನೆ ಹಾಡಿದರು. ಚನ್ನಪ್ಪ ದೊಡ್ಡಮನಿ ಸ್ವಾಗತಿಸಿದರು. ಸಾಗರ ಗಣೇಶಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.