ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾಪೇಟೆ
ಕುಡಿಯುವ ನೀರು ಸರಬರಾಜಿನ ಅಮೃತ-2 ಯೋಜನೆ ಕಾಮಗಾರಿ ಕುಂಟುತ್ತ ಸಾಗುತ್ತಿರುವ ಹಿನ್ನೆಲೆ, ವಾರ್ಡ್ ರಸ್ತೆಗಳು ಅಧ್ವಾನವಾಗಿವೆ ಎಂದು ಪಟ್ಟಣ ಪಂಚಾಯಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಯೋಜನೆಯ ಇಂಜಿನಿಯರ್ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ಕಳೆದ ಮೂರು ತಿಂಗಳ ಹಿಂದೆಯೆ ಕೂಡಲೆ ಕಾಮಗಾರಿ ಮುಗಿಸುವಂತೆ ತಿಳಿಸಲಾಗಿತ್ತು. ಆದರೆ ಮಳೆಗಾಲ ಪ್ರಾರಂಭವಾದರೂ ಕೆಲಸ ಮುಗಿದಿಲ್ಲ. ಈಗ ಗುಂಡಿ ಮುಚ್ಚುವ ಪ್ರಯತ್ನ ಮಾಡಿದರೆ ರಸ್ತೆ ಕೆಸರುಗುಂಡಿಗಳಾಗುತ್ತವೆ ಎಂದು ಜೀವನ್, ಶುಭಕರ್, ಮೃತ್ಯುಂಜಯ, ವಿನಯ್, ನಾಗರತ್ನ ಹೇಳಿದರು.ಪಂಚಾಯಿತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು ಹಾಗು ನೀರುಗಂಟಿಗಳನ್ನು ಹೊರತುಪಡಿಸಿ, ಉಳಿದ ಗುತ್ತಿಗೆ ಆಧಾರದ ಸಿಬ್ಬಂದಿಗಳಿಗೆ ಮೂರು ವರ್ಷಕ್ಕೆ ಮಾತ್ರ ನೇಮಕಾತಿ ಮಾಡಿಕೊಳ್ಳಬೇಕು. ಪ್ರತಿವರ್ಷ ಬೇರೆ ಬೇರೆ ಹುದ್ದೆಗಳಿಗೆ ಬದಲಾವಣೆ ಮಾಡುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ಸದಸ್ಯರಾದ ಶೀಲಾ ಡಿಸೋಜ, ಜೀವನ್, ಕಿರಣ್, ಮೃತ್ಯುಂಜಯ, ವಿನಯ್ ಆಗ್ರಹಿಸಿದರು. ಈ ವಿಷಯದ ಸಾಧಕ- ಬಾಧಕ ದ ಬಗ್ಗೆ ಆರೋಗ್ಯ ನಿರೀಕ್ಷಕ ಜಾಸ್ಮಿನ್ ಖಾನ್ ಸಭೆಗೆ ಮನವರಿಕೆ ಮಾಡಿಕೊಟ್ಟರು. ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು.ಪಂಚಾಯಿತಿ ವಾಣಿಜ್ಯ ಮಳಿಗೆಗಳನ್ನು ಬಿಡುವ ಬಾಡಿಗೆದಾರರ ಮುಂಗಡ ನೀಡಿದ ಹಣವನ್ನು ವಾಪಾಸ್ಸು ನೀಡಲು ಪಂಚಾಯಿತಿ ಅಧಿಕಾರಿಗಳು ಸತಾಯಿಸುತ್ತಿದೆ ಎಂಬ ಸದಸ್ಯರೊಬ್ಬರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷೆ ಜಯಂತಿ ಶಿವಕುಮಾರ್, ಬಾಡಿಗೆ ಬಾಕಿ ಉಳಿಸಿಕೊಂಡವರು ಬಾಡಿಗೆ ಪಾವತಿಸಿ ನಂತರ ಅವರ ಮುಂಗಡವನ್ನು ಹಣವನ್ನು ವಾಪಾಸ್ಸು ನೀಡಲಾಗುತ್ತದೆ. ಹಳೆ ಬಾಡಿಗೆದಾರರು ಪಂಚಾಯಿತಿಗೆ ಬಂದು ಸಮಸ್ಯೆ ಹೇಳಿಕೊಳ್ಳಬೇಕು ಎಂದು ಹೇಳಿದರು.ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಮಾನವೀಯ ದೃಷ್ಟಿಯಿಂದ ಉಚಿತ ನಿವೇಶನ ನೀಡಬೇಕಿದೆ ಎಂದು ಸದಸ್ಯ ಪಿ.ಕೆ.ಚಂದ್ರು ಹೇಳಿದರು. ಖಾಯಂ ಪೌರಕಾರ್ಮಿಕರಿಗೆ ಗುಂಪು ಮನೆಗಳನ್ನು ನಿರ್ಮಿಸಿ, ವಿತರಣೆ ಮಾಡಲು ನಿಯಮದಲ್ಲಿ ಅವಕಾಶವಿದೆ. ಬೇರೆ ರೀತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಉಚಿತ ನಿವೇಶನ ನೀಡಲು ಅವಕಾಶವಿಲ್ಲ ಎಂದು ಮುಖ್ಯಾಧಿಕಾರಿ ಸಭೆಗೆ ತಿಳಿಸಿದರು.2023ರಿಂದಲೂ ಹೊಸ ಬಡಾವಣೆಯಲ್ಲಿ ಗುತ್ತಿಗೆ ಆಧಾರದ ಪೌರಕಾರ್ಮಿಕರಿಗೆ ನಿವೇಶನ ನೀಡುತ್ತೇವೆ ಎಂದು ಆಡಳಿತ ಮಂಡಳಿ ಪಟ್ಟಿ ಮಾಡಿಕೊಂಡು, ಪೌರಕಾರ್ಮಿಕರಿಗೆ ಕನಸ್ಸು ಕಟ್ಟಿಕೊಟ್ಟಿದೆ. ಈ ವಿಷಯವನ್ನು ಹಿಂದಿನ ಮುಖ್ಯಾಧಿಕಾರಿ ಯಾಕೇ ಸಭೆಗೆ ತಿಳಿಸಿಲ್ಲ ಎಂದು ನಾಮನಿರ್ದೇಶನ ಸದಸ್ಯ ಕಿರಣ್ ಪ್ರಶ್ನಿಸಿದರು. ಪೌರ ಕಾರ್ಮಿಕರಿಗೆ ನಿವೇಶನ ನೀಡುವಂತೆ ಶಾಸಕ ಡಾ. ಮಂತರ್‌ಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ಸದಸ್ಯ ಬಿ.ಆರ್.ಮಹೇಶ್ ವಾದಿಸಿದರು. ಕಾನೂನಿನಲ್ಲಿ ಅವಕಾಶವಿದ್ದರೆ ನಿವೇಶನ ನೀಡಿ ಎಂದು ಹೇಳಿರಬಹುದು. ಇದಕ್ಕೆಲಾ ಆಡಳಿತ ಮಂಡಳಿ ಹೊಣೆ ಹೊರಬೇಕು ಎಂದು ಕಿರಣ್ ಹೇಳಿದರು.