ಕನ್ನಡಪ್ರಭ ವಾರ್ತೆ ಅಥಣಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಪ್ರಧಾನ ಕವಿಗೋಷ್ಠಿಗೆ ಅಥಣಿಯ ಮೋಟಗಿ ಮಠದ ಪೀಠಾಧಿಪತಿ ಪ್ರಭು ಚೆನ್ನಬಸವ ಸ್ವಾಮೀಜಿ ಅವರು ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಅಥಣಿವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಪ್ರಧಾನ ಕವಿಗೋಷ್ಠಿಗೆ ಅಥಣಿಯ ಮೋಟಗಿ ಮಠದ ಪೀಠಾಧಿಪತಿ ಪ್ರಭು ಚೆನ್ನಬಸವ ಸ್ವಾಮೀಜಿ ಅವರು ಆಯ್ಕೆಯಾಗಿದ್ದಾರೆ. ಈ ಮೂಲಕ ಮೈಸೂರು ದಸರಾ ಮಹೋತ್ಸವದ ಪ್ರತಿಷ್ಠಿತ ಸಾಹಿತ್ಯ ವೇದಿಕೆಯಲ್ಲಿ ಕಾವ್ಯ ಪ್ರಸ್ತುತಪಡಿಸುವ ಅವಕಾಶ ಅವರಿಗೆ ಲಭಿಸಿದ್ದು, ಅಥಣಿ ತಾಲೂಕು ಸೇರಿದಂತೆ ಉತ್ತರ ಕರ್ನಾಟಕದ ಸಾಹಿತ್ಯಾಸಕ್ತರಲ್ಲಿ ಸಂತಸ ಮೂಡಿಸಿದೆ.‘ಅಥಣೀಶ’ ಎಂಬ ಅಂಕಿತನಾಮದೊಂದಿಗೆ ಸಾವಿರಾರು ಆಧುನಿಕ ವಚನಗಳನ್ನು ರಚಿಸಿರುವ ಪ್ರಭು ಚೆನ್ನಬಸವ ಸ್ವಾಮೀಜಿ ಅವರು ಖ್ಯಾತ ಪ್ರವಚನಕಾರರು ಹಾಗೂ ಲೇಖಕರಾಗಿಯೂ ಗುರುತಿಸಿಕೊಂಡಿದ್ದಾರೆ. ಕೋವಿಡ್ ಕಾಲಘಟ್ಟದಲ್ಲಿ ಅವರು ರಚಿಸಿ ಪ್ರಕಟಿಸಿರುವ ‘ಮಹಾತ್ಮರ ಚರಿತಾಮೃತ’ ಗ್ರಂಥವು ಅವರ ಸಾಹಿತ್ಯಿಕ ಸಾಧನೆಗೆ ಮತ್ತೊಂದು ನಿದರ್ಶನವಾಗಿದೆ.ಅ.17ರಂದು ಬೆಳಗ್ಗೆ 10ಗಂಟೆಗೆ ಮೈಸೂರು ವಿಶ್ವವಿದ್ಯಾಲಯದ ಬಿ.ಎಂ. ಶ್ರೀ ಸಭಾಂಗಣದಲ್ಲಿ ದಸರಾ ಪ್ರಧಾನ ಕವಿಗೋಷ್ಠಿ ನಡೆಯಲಿದ್ದು, ನಾಡಿನ ಪ್ರಖ್ಯಾತ ಕವಿಗಳು ಹಾಗೂ ಸಾಹಿತಿಗಳು ಭಾಗವಹಿಸಲಿದ್ದಾರೆ. ಈ ಪ್ರತಿಷ್ಠಿತ ವೇದಿಕೆಯಲ್ಲಿ ತಮ್ಮ ಕಾವ್ಯವನ್ನು ಪ್ರಸ್ತುತಪಡಿಸಲು ಸ್ವಾಮೀಜಿ ಅವರು ಆಯ್ಕೆಯಾಗಿರುವುದು ಅವರ ಸಾಹಿತ್ಯ ಸೇವೆಗೆ ಸಂದ ಗೌರವವಾಗಿದೆ.ಗಡಿನಾಡಿನ ಕನ್ನಡದ ಗುಡಿ ಎಂದೇ ಪ್ರಸಿದ್ಧವಾಗಿರುವ ಜಂಗಮಲಿಂಗ ಕ್ಷೇತ್ರ ಅಥಣಿಯ ಮೋಟಗಿ ಮಠದ ಮೂಲಕ ಪ್ರಭು ಚೆನ್ನಬಸವ ಸ್ವಾಮೀಜಿ ಅವರು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಹಿತ್ಯಿಕ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯ ಬೆಳವಣಿಗೆಗೆ ಅವರು ನೀಡುತ್ತಿರುವ ಕೊಡುಗೆ ಗಮನಾರ್ಹವಾಗಿದೆ.ಮೈಸೂರು ದಸರಾ ಪ್ರಧಾನ ಕವಿಗೋಷ್ಠಿಗೆ ಆಯ್ಕೆಯಾಗಿರುವುದು ಅಥಣಿ ತಾಲೂಕಿಗೆ ಮಾತ್ರವಲ್ಲದೆ ಇಡೀ ಉತ್ತರ ಕರ್ನಾಟಕಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಸ್ವಾಮೀಜಿ ಅವರ ಸಾಹಿತ್ಯಿಕ ಸಾಧನೆಗೆ ಅಥಣಿಯ ಸದ್ಭಕ್ತರು, ಕನ್ನಡಪರ ಹೋರಾಟಗಾರರು, ಸಾಹಿತಿಗಳು ಹಾಗೂ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದು, ಅವರಿಂದ ಕನ್ನಡ ನಾಡು-ನುಡಿಯ ಸೇವೆ ಮತ್ತಷ್ಟು ವಿಸ್ತರಿಸಲಿ ಎಂದು ಹಾರೈಸಿದ್ದಾರೆ.