ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಧರ್ಮದ ಆಚರಣೆಗಳನ್ನು ಪಾಲಿಸಿದರೇ ಧರ್ಮವು ನಮ್ಮನ್ನು ನಿಶ್ಚಿತವಾಗಿಯೂ ಸಂರಕ್ಷಿಸುತ್ತದೆ. ಅಂತೆಯೇ ಧರ್ಮೋ ರಕ್ಷತಿ ರಕ್ಷಿತಃ ಎಂಬ ಮಾತು ಜನಜನಿತವಾಗಿದೆ ಎಂದು ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ನುಡಿದರು.ಸಮೀಪದ ಸುಕ್ಷೇತ್ರ ಇಂಚಲದ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿಯವರ 84ನೇ ಜಯಂತ್ಯುತ್ಸವ, ವಿಶ್ವಶಾಂತಿಗಾಗಿ 54ನೇ ಅಖಿಲ ಭಾರತ ವೇದಾಂತ ಪರಿಷತ್ ರಜತ ರಥೋತ್ಸವ ಹಾಗೂ ಮಹಾರಥೋತ್ಸವ ಸಮಾರಂಭದದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿತವಾವುದಿ ಹಪರದೊಳು ಧರ್ಮರತಿ ವಿಷಯದ ಕುರಿತು ಮಾತನಾಡಿ, ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಧರ್ಮ ಎಂದರೆ ಮೂಢಾಚರಣೆಗಳಲ್ಲ. ಸತ್ಯ, ಅಹಿಂಸೆ, ಕರುಣೆ, ಶೀಲ, ಚಾರಿತ್ರ್ಯಗಳಿಂದ ಕೂಡಿದ ನೈತಿಕ ಆಚರಣೆಗಳೇ ಧರ್ಮದ ತಳಹದಿಯಾಗಿದೆ. ಪಾಪ ಮಾಡಿದರೇ ನಮ್ಮ ಜೊತೆ ಪಾಪ ಬರುತ್ತದೆ. ಪುಣ್ಯ ಮಾಡಿದರೆ ನಮ್ಮ ಜೊತೆ ಪುಣ್ಯ ಬರುತ್ತದೆ ಎಂದರು.
ಹುಬ್ಬಳ್ಳಿಯ ಜಡಿಸಿದ್ದೇಶ್ವರ ಮಠದ ರಾಮಾನಂದ ಸ್ವಾಮೀಜಿ ಮಾಡಲಿಲ್ಲ ತಪವನು ವಿಷಯದ ಕುರಿತು ಮಾತನಾಡಿ, ಪ್ರವಚನ ಆಲಿಸುವುದು ಒಂದು ದೊಡ್ಡ ತಪಸ್ಸು. ಶಾಸ್ತ್ರದಿಂದ ಶರೀರ ಪಾವನವಾಗುತ್ತದೆ. ಪುಣ್ಯದಿಂದ ನಮಗೆ ಮುಕ್ತಿ ಪ್ರಾಪ್ತ ಆಗುತ್ತದೆ. ಅಧ್ಯಾತ್ಮ ಚಿಂತನೆಯಿಂದ ಮನಸ್ಸು ಶುದ್ಧವಾಗುತ್ತದೆ. ಕೆಟ್ಟದನ್ನು ಯೋಚನೆ ಮಾಡುವುದರಿಂದ ಮನಸ್ಸು ಕಲುಷಿತವಾಗಿ ಚಿಂತೆಯುಂಟು ಮಾಡುತ್ತದೆ. ಮಹಾತ್ಮರ, ಪವಾಡ ಪುರಷರ ಅಮೃತವಾಣಿಗಳನ್ನು ಹಾಗೂ ಒಳ್ಳೆಯ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಪಾವನ ಆಗುತ್ತದೆ ಎಂದರು.ಡಾ.ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ಆಶೀರ್ವಚನ ನೀಡಿದರು. ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಸ್ವಾಮೀಜಿ, ದಾವಣಗೆರೆಯ ಜಡಿಶಾಂತಾಶ್ರಮದ ಶಿವಾನಂದ ಸ್ವಾಮೀಜಿ, ಇಂಚಲದ ಪೂರ್ಣಾನಂದ ಸ್ವಾಮೀಜಿ, ಮಲ್ಲಾಪುರ ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ, ಹಡಗಿನಾಳದ ಸುಜ್ಮಾನ ಕುಟೀರ ಮಲ್ಲೇಶ್ವರ ಶರಣರು, ತೊಂಡಿಕಟ್ಟಿ ಅವಧೂತ ಗಾಳೇಶ್ಬರ ಮಠದ ಅಭಿನವ ವೆಂಕಟೇಶರ ಸ್ವಾಮೀಜಿ, ಹುಬ್ಬಳ್ಳಿ ಸಿದ್ಧಾರೂಢ ಮಠದ ಸಚ್ಚಿದಾನಂದ ಸ್ವಾಮೀಜಿ, ಖೋದಾನಪುರದ ಶಾಂಭವಿ ಆಶ್ರಮದ ಜಾನಮ್ಮತಾಯಿ, ಸವಟಗಿ ನಿಂಗಾನಂದ ಸ್ವಾಮೀಜಿ, ಚಿಕ್ಕಪಡಸಲಗಿಯ ಅಕ್ಕಮಹಾದೇವಿ ತಾಯಿ, ಬಾದಾಮಿಯ ದಯಾಭಾರತಿ ತಾಯಿ, ತುಂಗಳದ ಅನಸೂಯಾ ತಾಯಿ ಮುಂತಾದ ಪೂಜ್ಯರು ಉಪಸ್ಥತಿರಿದ್ದರು. ಇದೇ ವೇಳೆ ಗಣ್ಯರಿಗೆ ಸತ್ಕಾರ ಸಮಾರಂಭ ನಡೆಯಿತು. ಈ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.