ಸಾರಾಂಶ
ದೊಡ್ಡಬಳ್ಳಾಪುರ: ಇಲ್ಲಿನ ಶ್ರೀ ಭುವನೇಶ್ವರಿ ಕನ್ನಡ ಸಂಘದ 54ನೇ ವಾರ್ಷಿಕೋತ್ಸವ ಮತ್ತು 68ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಕನ್ನಡ ಹಬ್ಬದ 5 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿ ಸಮಾರೋಪ ಶ್ರೀ ರಾಮಾಂಜನೇಯ ಕಲ್ಯಾಣ ಮಂದಿರದಲ್ಲಿ ನಡೆಯಿತು.
ದೊಡ್ಡಬಳ್ಳಾಪುರದ ನಾಗಶ್ರೀ ಕರಾವಳಿ ಯಕ್ಷಗಾನ ಮಿತ್ರ ಬಳಗದ ರಜತ ಮಹೋತ್ಸವದ ಯಕ್ಷಗಾನ ಕಾರ್ಯಕ್ರಮದ ಭಾಗವಾಗಿ ಕಮಲಶಿಲೆಯ ಶ್ರೀ ದುರ್ಗಾ ಪರಮೇಶ್ವರಿ ಪ್ರವಾಸಿ ಯಕ್ಷಗಾನದ ಕಲಾವಿದರಿಂದ ವರಾಹ ರೂಪಂ(ಪ್ರಚಂಡ ಪಂಜುರ್ಲಿ) ಪೌರಾಣಿಕ ಯಕ್ಷಗಾನ ಬಯಲಾಟ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಸುರೇಶ್‌ರಾವ್ ಬಾರ್ಕೂರು ಅವರ ಗಾನ ಇಂಚರ, ಜಯರಾಮ ಕೊಠಾರಿ, ಕುಪ್ಪಾರು, ಮಾಗ್ಗೋಡು, ರವೀಶ, ಸತೀಶ ಯಡಮೊಗ್ಗೆ, ಸುನೀಲ್‌ದಾಸ್ ಅವರ ನೃತ್ಯ ವೈಭವ, ಗಂಡು-ಹೆಣ್ಣು ವರಾಹಗಳ ಅಬ್ಬರ, ಪಂಜುರ್ಲಿಯ ಧರ್ಮಪಾಲನೆ, ಮಾಯಾಸುರನ ಮಂತ್ರಶಕ್ತಿ, ಗುಳಿಗ ರೋಶಾವೇಶ, ಲಾವಣ್ಯಳ ನಾಟ್ಯ ವೈಭವ, ಅನಿರುದ್ದ-ವಜ್ರಾಂಗಿಯರ ಸೌಂದರ್ಯ ಸ್ಪರ್ಧೆ, ಶಿಕಾರಿ ಶೀನ, ದಲ್ಲಾಳಿ ಸೋಮನ ಹಾಸ್ಯ ಸೇರಿದಂತೆ ಹಲವು ಪ್ರಸಂಗಗಳು ನೋಡುಗಳ ಕಣ್ಮನ ಸೂರೆಗೊಂಡವು.
ಈ ವೇಳೆ ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್ ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ಕನ್ನಡ ನಾಡು-ನುಡಿ ಪರಂಪರೆ ಒಳಹುಗಳನ್ನು ಬಿತ್ತರಿಸುವ ಭಾಗವಾಗಿ ಭುವನೇಶ್ವರಿ ಕನ್ನಡ ಸಂಘದ ನೇತೃತ್ವದಲ್ಲಿ 5 ದಿನಗಳ ಕನ್ನಡ ಹಬ್ಬ ಯಶಸ್ವಿಯಾಗಿ ನಡೆದಿದೆ. ಕರಾವಳಿಯ ಹೆಮ್ಮೆಯ ಯಕ್ಷಗಾನ ಪ್ರದರ್ಶನವನ್ನು ಬಯಲುಸೀಮೆಯಲ್ಲಿ ಹಮ್ಮಿಕೊಂಡಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.ಕೇಂದ್ರ ರೇಷ್ಮೆ ಮಾರಾಟ ಮಂಡಲಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ಕಲಾ ಚಟುವಟಿಕೆಗಳು ಅವಿಚ್ಛಿನ್ನವಾಗಿ ನಡೆದುಕೊಂಡು ಬರುವ ಉನ್ನತ ಪರಂಪರೆ ಇದೆ. ನಾಡಿನ ವಿವಿಧ ಪ್ರದೇಶಗಳ ಸಂಸ್ಕೃತಿಯನ್ನು ಬಿಂಬಿಸುವ ವೇದಿಕೆಯಾಗಿ ಕನ್ನಡ ಹಬ್ಬ ಗಮನ ಸೆಳೆದಿದೆ ಎಂದರು.
ಶಾಸಕ ಧೀರಜ್ ಮುನಿರಾಜ್, ನಾಗಶ್ರೀ ಕರಾವಳಿ ಯಕ್ಷಗಾನ ಮಿತ್ರಬಳಗದ ಅಧ್ಯಕ್ಷ ಚಂದ್ರು, ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ನವೀನ್, ಶ್ರೀನೆಲದಾಂಜನೇಯ ಸ್ವಾಮಿ ಸೇವಾ ಟ್ರಸ್ಟ್‌ನ ಸೀತಾರಾಮ್ ಸೇರಿದಂತೆ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಭುವನೇಶ್ವರಿ ಕನ್ನಡ ಸಂಘ, ನಾಗಶ್ರೀ ಕರಾವಳಿ ಯಕ್ಷಗಾನ ಮಿತ್ರ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.6ಕೆಡಿಬಿಪಿ1-ದೊಡ್ಡಬಳ್ಳಾಪುರದಲ್ಲಿ ಭುವನೇಶ್ವರಿ ಕನ್ನಡ ಸಂಘದ ನೇತೃತ್ವದಲ್ಲಿ ಕನ್ನಡ ಹಬ್ಬದ ಸಮಾರೋಪ ಕಾರ್ಯಕ್ರಮ ನಡೆಯಿತು.