ಬಸವಣ್ಣ ತತ್ವಗಳ ಆಚರಣೆ ಅವಶ್ಯಕ: ಯತಿಶ್ವರಾನಂದ ಸ್ವಾಮೀಜಿ

| Published : May 09 2024, 01:00 AM IST

ಬಸವಣ್ಣ ತತ್ವಗಳ ಆಚರಣೆ ಅವಶ್ಯಕ: ಯತಿಶ್ವರಾನಂದ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಸಿಂಧನೂರಿನ ಆರ್.ಜಿ.ಎಂ.ಶಾಲಾ ಮೈದಾನದಲ್ಲಿ ಬಸವ ಜಯಂತಿ ಅಂಗವಾಗಿ ಮಂಗಳವಾರ ರಾತ್ರಿ ಹಮ್ಮಿಕೊಂಡಿರುವ 3ನೇ ದಿನದ ಪ್ರವಚನ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಣಾಧಿಕಾರಿ ಟಿ. ಅಯ್ಯಪ್ಪ ಉದ್ಘಾಟಿಸಿದರು.

ಸಿಂಧನೂರು: ಬಸವಣ್ಣನವರ ವಚನಗಳನ್ನು ಹೇಳುವವರ ಸಂಖ್ಯೆ ಅಧಿಕವಾಗಿದೆ. ಆದರೆ ಅವರ ಆದರ್ಶಗಳನ್ನು ಅನುಷ್ಠಾನಕ್ಕೆ ತರುವ ಜನರ ಸಂಖ್ಯೆ ಅತ್ಯಂತ ವಿರಳವಾಗಿದೆ. ಕನಿಷ್ಠ ಪ್ರಮಾಣದಲ್ಲಾದರೂ ಅವರ ವಚನ ತತ್ವಗಳಾಚರಣೆ ಜಾರಿಗೆ ತರುವ ಅವಶ್ಯವಿದೆ ಎಂದು ಕಾಗವಾಡದ ಯತೀಶ್ವರಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಆರ್.ಜಿ.ಎಂ.ಶಾಲಾ ಮೈದಾನದಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿರುವ 3ನೇ ದಿನದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂತರ್ಜಾತಿ ವಿವಾಹ, ಸಹಭೋಜನ ಲಿಂಗಾಯತ ಒಳ ಪಂಗಡಗಳನ್ನಾದರೂ ಮೀರುವ ಪ್ರಯತ್ನ ನಡೆಯಬೇಕಾಗಿದೆ. ಆಗ ಮಾತ್ರ ಶರಣರ ವಚನಗಳನ್ನು ಹೇಳುವ ಅರ್ಹತೆ ಸಿಗುತ್ತದೆ ಎಂದು ವಿವರಿಸಿದರು.

ಅನುಭಾವ ನೀಡಿದ ಸೋಮಸಾಗರದ ಅಮರೇಶಪ್ಪ ಗಡಳ್ಳಿ ಕಾಯಕ, ದಾಸೋಹ, ಲಿಂಗಾರ್ಚನೆ ಶರಣರ ಬಹುಮುಖ್ಯ ತತ್ವಗಳಾಗಿದ್ದವು. ಶ್ರದ್ಧೆಯಿಂದ ಕಾಯಕ ಮಾಡಬೇಕು, ಪರಧನ, ಪರಸತಿಗೆ ಆಸೆ ಪಡುವ ಅನೈತಿಕ ಮಾರ್ಗದಿಂದ ದೂರವಿರಬೇಕೆಂದು ಹೇಳಿದರು.

ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಮಹಮ್ಮದ ಹುಸೇನಸಾಬ ಮಾತನಾಡಿ, ಇಸ್ಲಾಂ ಧರ್ಮವು ಶಾಂತಿ ಮತ್ತು ಏಕದೇವೋಪಾಸನೆ ಬೋಧಿಸುತ್ತದೆ. ಬಸವ ಧರ್ಮವೂ ಸಹ ದಾಸೋಹ ಏಕದೇವೋಪಾಸನೆ ಕುರಿತು ಹೇಳುವುದರಿಂದ ಎರಡರಲ್ಲೂ ಸಾಮ್ಯತೆ ಇದೆ ಎಂದರು.

ನಿವೃತ್ತ ಶಿಕ್ಷಣಾಧಿಕಾರಿ ಟಿ. ಅಯ್ಯಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಡಿವಾಳ ಸಮಾಜದ ಮುಖಂಡ ಮುದಿಯಪ್ಪ ಕನ್ನಾರಿ, ಛಲವಾದಿ ಸಮಾಜದ ಮುಖಂಡ ಶರಣಬಸವ ಮಲ್ಲಾಪುರ, ಹಡಪದ ಸಮಾಜದ ಜಿಲ್ಲಾ ಘಟಕದ ಕಾರ್ಯದರ್ಶಿ ಸಿದ್ದಣ್ಣ ಮಾಡಸಿರವಾರ, ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರಪ್ಪ ಕುರಕುಂದಿ, ಮುಖಂಡರಾದ ಶಾಂತಪ್ಪ ಚಿಂಚಿರಿಕಿ, ಮಲ್ಲಿಕಾರ್ಜುನ ಹೊಗರನಾಳ, ಸಿದ್ರಾಮಪ್ಪ ಮಾಡಸಿರವಾರ, ಸುಮಂಗಲಾ ಚಿಂಚರಗಿ, ಚನ್ನಪ್ಪ ತೊಂತನಾಳ, ಎಚ್. ಜಿ.ಹಂಪಣ್ಣ ಭಾಗವಹಿಸಿದ್ದರು.

ಬಸಲಿಂಗಪ್ಪ ಬಾದರ್ಲಿ ನಿರೂಪಿಸಿದರು. ಜಾನಪದ ಅಕಾಡೆಮಿಯ ನಿಕಟಪೂರ್ವ ಸದಸ್ಯ ನಾರಾಯಣಪ್ಪ ಮಾಡಸಿರವಾರ ಮತ್ತು ಜಂಬಣ್ಣ ನಾಗಲಾಪುರ ತಂಡದವರು ವಚನ ಪ್ರಾರ್ಥನೆ ಮತ್ತು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.