ವಕೀಲ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ

| Published : Dec 04 2024, 12:32 AM IST

ಸಾರಾಂಶ

ವಕೀಲರು ತಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಜನರಿಗೆ ನ್ಯಾಯ ಕೊಡಿಸಿದಲ್ಲಿ ಜನರ ಪ್ರೀತಿ ಗಳಿಸಿ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾದ್ಯವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಇರ್ಫಾನ್ ಹೇಳಿದರು.

ಕನ್ನಡಪ್ರಭ ವಾರ್ತೆ ಕಡೂರು

ವಕೀಲರು ತಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಜನರಿಗೆ ನ್ಯಾಯ ಕೊಡಿಸಿದಲ್ಲಿ ಜನರ ಪ್ರೀತಿ ಗಳಿಸಿ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾದ್ಯವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಇರ್ಫಾನ್ ಹೇಳಿದರು.

ಅವರು ಮಂಗಳವಾರ ಕಡೂರಿನ ನ್ಯಾಯಾಲಯದಲ್ಲಿ ವಕೀಲರ ಸಂಘದಿಂದ ಆಯೋಜಿಸಿದ್ದ ವಕೀಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ನ್ಯಾಯಾಂಗ ಕ್ಷೇತ್ರಕ್ಕೆ ಬಹು ದೊಡ್ಡ ಗೌರವವಿದೆ. ಅದರಲ್ಲಿ ನ್ಯಾಯವಾದಿಗಳ ಪಾತ್ರವು ಬಹು ಮುಖ್ಯ. ನಾವು ಮತ್ತು ವಕೀಲರು ಸೇರಿ ಪರಿಶ್ರಮ ಹಾಕಿದರೆ ಜನರಿಗೆ ಉತ್ತಮ ನ್ಯಾಯ ದೊರಕಿಸಲು ಸಾಧ್ಯ. ಅದರಲ್ಲೂ ಕಿರಿಯ ವಕೀಲರು ಹಿರಿಯ ವಕೀಲರುಗಳ ಸಲಹೆ ಸಹಕಾರ ಪಡೆದು, ತಮ್ಮ ಜಾಣ್ಮೆ ಉಪಯೋಗಿಸಿ ಯಶಸ್ಸು ಗಳಿಸುವ ತಂತ್ರವನ್ನು ಕೇಳಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಕಾನೂನು ಸಮುದ್ರ ಇದ್ದಂತೆ. ಒಂದು ಪ್ರಕರಣ ತೀರ್ಮಾನಕ್ಕೆ ಕನಿಷ್ಠ 2 ರಿಂದ 3 ವರ್ಷ ತೆಗೆದುಕೊಂಡರೆ, ಆ ಅವಧಿಯಲ್ಲಿ ವಕೀಲರು ಶ್ರಮ ಹಾಕಿದಷ್ಟೂ ಅದಕ್ಕೆ ನ್ಯಾಯ ಒದಗಿಸುವ ವಿಶ್ವಾಸ ಬರುತ್ತದೆ. ನಿಮ್ಮನ್ನು ನಂಬಿ ಬಂದ ಕಕ್ಷಿದಾರನಿಗೆ ನ್ಯಾಯ ಕೊಡಿಸುವುದು ಬಹು ಮುಖ್ಯ. ಈ ಎಂದು ವಕೀಲರಿಗೆ ಸಲಹೆ ನೀಡಿದರು.

ಉಪನ್ಯಾಸ ನೀಡಿದ ಚಿಕ್ಕಮಗಳೂರಿನ ಹಿರಿಯ ವಕೀಲ ಲಕ್ಷ್ಮಣಗೌಡ ಮಾತನಾಡಿ, ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುವ ನಾವು ತಮ್ಮ ವೃತ್ತಿ ಜೀವನದ ಕುರಿತು ಚಿಂತಿಸಬೇಕು. ನಾನು ಸೇನೆಯಲ್ಲಿ ಕೆಲಸ ಮಾಡಿದ ನಂತರ ನೊಬೆಲ್ ವೃತ್ತಿ ಎಂದು ಕರೆಯಲ್ಪಡುವ ವಕೀಲಗಿರಿಗೆ ಪ್ರವೇಶ ಪಡೆದು ಹೋರಾಟ ನಡೆಸಿದೆ. ವಕೀಲರಿಗೆ ಶ್ರದ್ಧೆ, ಅಧ್ಯಯನ ಮತ್ತು ಹೋರಾಟ ಬಹುಮುಖ್ಯ ಎಂದರು.

ವಕೀಲರ ಸಂಘದ ಅದ್ಯಕ್ಷ ಟಿ. ಗೋವಿಂದಸ್ವಾಮಿ ಮಾತನಾಡಿ, ಬಹುದೊಡ್ಡ ಸ್ಥಾನವನ್ನು ಅಲಂಕರಿಸಿದ್ದ ಬಾಬು ರಾಜೇಂದ್ರ ಪ್ರಸಾದ್ ರವರ ನೆನಪಲ್ಲಿ ವಕೀಲರ ದಿನ ಆಚರಿಸಲಾಗುತ್ತಿದೆ. ಕೆಟ್ಟ ಯೋಚನೆಗಳಿಗಿಂತ ಉತ್ತಮ ಯೋಚನೆಗಳನ್ನು ಮೈ ಗೂಡಿಸಿಕೊಳ್ಳಬೇಕು. ಪ್ರತಿದಿನ ಅಭ್ಯಾಸ ಮಾಡಿದಲ್ಲಿ ಉತ್ತಮ ವಕೀಲರಾಗಿ ಹೊರಹೊಮ್ಮಲು ಸಾಧ್ಯ ಎಂದರು.

ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಮತ್ತು ನ್ಯಾಯಾಧೀಶ ಅಮ್ರೀನ್ ಸುಲ್ತಾನ್, ಶ್ರೀಮತಿ ಸವಿತಾ ರಾಣಿ, ತಹಖಲೀಲ್, ಜಿಲ್ಲಾ ವಕೀಲ ಮಹೇಶ್ ಕುಮಾರ್ ಮಾತನಾಡಿದರು.

ವಕೀಲರ ಸಂಘದ ಅಧ್ಯಕ್ಷ ಟಿ. ಗೋವಿಂದಸ್ವಾಮಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರೇಣುಕಾ ಪ್ರಸಾದ್, ಉಪಾಧ್ಯಕ್ಷ ಹರೀಶ್, ಗೌರವಾಧ್ಯಕ್ಷ ಕೆ.ಎನ್. ರಾಜಣ್ಣ, ಸಹ ಕಾರ್ಯದರ್ಶಿ ವಸಂತ್ ಕುಮಾರ್, ಹಿರಿಯ ವಕೀಲ ಶಿವಕುಮಾರ್, ಎಂ.ಎಸ್. ಹೆಳವಾರ್, ಕೆ.ಎನ್. ಜಯಣ್ಣ, ಕೆ.ಎನ್ ಬೊಮ್ಮಣ್ಣ, ವಕೀಲ ಕೆ.ಜಿ.ಅಣ್ಣಪ್ಪ, ಶೇಖರ್, ಕೆ.ಆರ್. ಶಿವಕುಮಾರ್, ಜಗದೀಶ್‌, ಶೇಷಪ್ಪ, ಮಂಗಳಾ, ಮಂಜುಳಾ, ಮಂಜುನಾಥ್ ಮತ್ತಿತರು ಹಾಜರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ಅಧ್ಯಕ್ಷ ಟಿ. ಗೋವಿಂದಸ್ವಾಮಿ ಧ್ವಜಾರೋಹಣ ನೆರವೇರಿಸಿದರು.