ರಜಾ ದಿನಗಳ ವ್ಯರ್ಥಗೊಳಿಸದೆ ಅಭ್ಯಾಸ ಮಾಡಿ: ಚೌದ್ರಿ

| Published : Apr 02 2025, 01:02 AM IST

ಸಾರಾಂಶ

ವಿದ್ಯಾರ್ಥಿ, ವಿದ್ಯಾರ್ಥಿನಿಯರು ರಜಾ ದಿನಗಳನ್ನು ವ್ಯರ್ಥ ಮಾಡದೇ ಶೈಕ್ಷಣಿಕ ವರ್ಷದ ಮುಂದಿನ ವರ್ಗದ ಅಭ್ಯಾಸವನ್ನು ಈಗಿನಿಂದಲೇ ಆರಂಭಿಸುವ ಮೂಲಕ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕು. ಭವಿಷ್ಯವನ್ನು ಸುಂದರವಾಗಿ ರೂಪಿಸಿಕೊಳ್ಳಬೇಕೆಂದು ಪೊಲೀಸ್ ಇಲಾಖೆಯ ಆರ್‌ಪಿಐ ಶಂಕರಗೌಡ ಚೌದ್ರಿ ಹೇಳಿದರು.

ಗದಗ: ವಿದ್ಯಾರ್ಥಿ, ವಿದ್ಯಾರ್ಥಿನಿಯರು ರಜಾ ದಿನಗಳನ್ನು ವ್ಯರ್ಥ ಮಾಡದೇ ಶೈಕ್ಷಣಿಕ ವರ್ಷದ ಮುಂದಿನ ವರ್ಗದ ಅಭ್ಯಾಸವನ್ನು ಈಗಿನಿಂದಲೇ ಆರಂಭಿಸುವ ಮೂಲಕ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕು. ಭವಿಷ್ಯವನ್ನು ಸುಂದರವಾಗಿ ರೂಪಿಸಿಕೊಳ್ಳಬೇಕೆಂದು ಪೊಲೀಸ್ ಇಲಾಖೆಯ ಆರ್‌ಪಿಐ ಶಂಕರಗೌಡ ಚೌದ್ರಿ ಹೇಳಿದರು. ಅವರು ಮಂಗಳವಾರ ನಗರದ ಶಿಕ್ಷಣ ಪ್ರೇಮಿ, ತ್ಯಾಗಜೀವಿ ಬಿ.ಜಿ. ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ಬೇಸಿಗೆ ರಜೆಯಲ್ಲಿ ಆರಂಭಗೊಂಡ 8, 9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಶನ್ ಹಾಗೂ ಗ್ರಾಮೀಣ ಪ್ರದೇಶದ ಆಯ್ದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದೊಂದಿಗೆ ಉಚಿತ ಊಟ, ವಸತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಬಿ.ಜಿ.ಅಣ್ಣಿಗೇರಿ ಗುರುಗಳು ಶಿಕ್ಷಣ ರಂಗಕ್ಕೆ ನೀಡಿದ ಕೊಡುಗೆ ಅನುಪಮವಾದದ್ದು ಅವರಲ್ಲಿ ಟ್ಯೂಶನ್ ಪಡೆದವರು ಇಂದು ಉನ್ನತ ಹುದ್ದೆಯಲ್ಲಿದ್ದಾರೆ. ಅವರ ತರುವಾಯ ಆಶ್ರಮವನ್ನು ಶಿಷ್ಯ ಬಳಗ ಚೆನ್ನಾಗಿ ಮುನ್ನಡೆಸಿದ್ದಾರೆ. ಇಲ್ಲಿ ಉಚಿತ ಟ್ಯೂಶನ್ ಜೊತೆಗೆ ಆಯ್ದ ವಿದ್ಯಾರ್ಥಿಗಳಿಗೆ ಉಚಿತ ಊಟ ವಸತಿಯನ್ನು ನೀಡುತ್ತಿರುವುದು ಮಾದರಿ ಆಗಿದೆ ಎಂದರು.ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ ಮಾತನಾಡಿ, ಗದಗ ಪರಿಸರದಲ್ಲಿ ಬಿ.ಜಿ. ಅಣ್ಣಿಗೇರಿ ಗುರುಗಳ ಆಶ್ರಮವು ಶಿಕ್ಷಣ ರಂಗಕ್ಕೆ ಬಹು ದೊಡ್ಡ ಕೊಡುಗೆ ನೀಡಿದೆ. ಗುರುಗಳ ತರುವಾಯ ಅವರ ಧ್ಯೇಯೋದ್ದೇಶಗಳನ್ನು ಯಥಾವತ್ತಾಗಿ ಅನುಷ್ಠಾನಕ್ಕೆ ತರುವುದರ ಜೊತೆಗೆ ಒಂದಿಷ್ಟು ಸುಧಾರಣೆ ಮಾಡಿಕೊಂಡು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಆಶ್ರಮದಲ್ಲಿ ಟ್ಯೂಶನ್ ಪಡೆದವರಿಗೆ ವಿಶೇಷ ಪುರಸ್ಕಾರಗಳನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿದ್ದು, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೂ ಪ್ರತಿಭಾ ಪ್ರತಿಷ್ಠಾನದ ಪುರಸ್ಕಾರವನ್ನು ನೀಡಲಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ನ ಉಪಾಧ್ಯಕ್ಷ ಎಸ್.ಜಿ. ಅಣ್ಣಿಗೇರಿ ಮಾತನಾಡಿದರು. ನಿರ್ದೆಶಕ ಡಾ. ಬೆಳ್ಳರಿಮಠ, ಡಾ.ಚನ್ನಪ್ಪಗೌಡರ, ಸಿದ್ದಣ್ಣ ಕವಲೂರ, ತೋಂಟೇಶ, ಎಸ್.ಆರ್. ಪಾಟೀಲ, ಜ್ಯೋತಿ, ಹುಲಿಗೆಮ್ಮ, ಸಂತೋಷ, ಗುರುರಾಜ, ಯೋಗ ಶಿಕ್ಷಕ ಮೋಹನ ಮುಂತಾದವರು ಪಾಲ್ಗೋಂಡಿದ್ದರು. ಪಾವನಿ ಪ್ರಾರ್ಥಿಸಿದರು. ಶಿಕ್ಷಕಿ ಮಂಜುಳಾ ನಿರೂಪಿಸಿದರು, ಶಿವಣ್ಣ ಕತ್ತಿ ವಂದಿಸಿದರು.