ಸಾರಾಂಶ
ಬಳ್ಳಾರಿ: ಪ್ರತಿಯೊಬ್ಬ ವ್ಯಕ್ತಿ ಯೋಗದಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ಮತ್ತು ದೇಹವನ್ನು ಸದೃಢವಾಗಿ ಕಾಪಾಡಿಕೊಳ್ಳಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್.ಎಚ್. ಪುಷ್ಪಾಂಜಲಿದೇವಿ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಯುಕ್ತಾಶ್ರಯದಲ್ಲಿ ನಗರದ ತಾಳೂರು ರಸ್ತೆಯ ಹೊಸ ನ್ಯಾಯಾಲಯದ ಸಂಕೀರ್ಣದ ಆವರಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮತ್ತು ಯೋಗಾಸನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಯೋಗ ಮಾಡುವುದರಿಂದ ಆರೋಗ್ಯ ಸುಧಾರಣೆಗೊಳ್ಳಲಿದ್ದು, ಇದು ಒಂದು ದಿನಕ್ಕೆ ಸೀಮಿತವಾಗದೇ ಪ್ರತಿನಿತ್ಯ ಯೋಗಾಸನಗಳನ್ನು ಮಾಡುವ ರೂಢಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಅಧ್ಯಕ್ಷರು ಹಾಗೂ ವಕೀಲರಾದ ರಾಮ್ ಭ್ರಮಂ ಅವರು ಯೋಗಾಸನಗಳ ಕುರಿತು ಮಾರ್ಗದರ್ಶನ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್. ಹೊಸಮನೆ, ಪ್ರಧಾನ ಸಿವಿಲ್ ಹಿರಿಯ ನ್ಯಾಯಾಧೀಶರಾದ ಇಬ್ರಾಹಿಂ ಮುಜಾವರ್, ಪ್ರಧಾನ ಸಿವಿಲ್ ಹಿರಿಯ ನ್ಯಾಯಾಧೀಶರಾದ ಅಪರ್ಣ, ಕೌಟುಂಬಿಕ ನ್ಯಾಯಾಧೀಶರಾದ ಸಿದ್ದಲಿಂಗ ಪ್ರಭು, ಪ್ರಧಾನ ಸಿವಿಲ್ ಹಿರಿಯ ನ್ಯಾಯಾಧೀಶರಾದ ಮೊದಲನೇ ಸತ್ರ ನ್ಯಾಯಾಧೀಶರಾದ ವಿದ್ಯಾಧರ ಶಿರಹಟ್ಟಿ, ವಕೀಲರ ಸಂಘದ ಅಧ್ಯಕ್ಷ ನ್ಯಾ.ಎರ್ರಿಗೌಡ ಸೇರಿದಂತೆ ಹಲವು ನ್ಯಾಯಾಧೀಶರು, ವಕೀಲರು ಹಾಗೂ ಸಿಬ್ಬಂದಿಯವರು ಮತ್ತು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸ್ವಯಂ ಸೇವಕರು ಉಪಸ್ಥಿತರಿದ್ದರು.