ಭಾನುವಾರ ಅಂಪಾರು‌ ಸಮೀಪದ‌ ನೆಲ್ಲಿಕಟ್ಟೆಯ ಜೈ ಭಾರತಿ ಶಾಲೆಯಲ್ಲಿ ಪ್ರದೀಪ್ ಶೆಟ್ಟಿ ಗುಡಿಬೆಟ್ಟು ಇವರ 50ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಹುಟ್ಟೂರ ಅಭಿನಂದನಾ ಕಾರ್ಯಕ್ರಮ ನೆರವೇರಿತು.

ಜನನಾಯಕನಿಗೆ 50, ಜನಸೇವೆಗೆ 25, ‘ದೀಪಣ್ಣ 50ರ ಸಂಭ್ರಮ’ । ಹುಟ್ಟೂರ ಅಭಿನಂದನಾ ಕಾರ್ಯಕ್ರಮ

ಕುಂದಾಪುರ: ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯವಾಗಿ‌ ಜನರ ಜೊತೆಗಿದ್ದು ತನ್ನಿಡೀ ಬದುಕನ್ನೇ ಸಾರ್ವಜನಿಕ ಜೀವನಕ್ಕೆ ಮೀಸಲಿಟ್ಟಿರುವ ಪ್ರದೀಪ್‌ ಕುಮಾರ್ ಶೆಟ್ಟಿ ಕಾರ್ಯ ಇತರರಿಗೂ ಸ್ಫೂರ್ತಿಯಾಗಲಿ ಎಂದು ಸೌಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಳ್ಳಿ ಕಿಶನ್ ಹೆಗ್ಡೆ ಹೇಳಿದ್ದಾರೆ.

ಭಾನುವಾರ ಅಂಪಾರು‌ ಸಮೀಪದ‌ ನೆಲ್ಲಿಕಟ್ಟೆಯ ಜೈ ಭಾರತಿ ಶಾಲೆಯಲ್ಲಿ ಪ್ರದೀಪ್ ಶೆಟ್ಟಿ ಗುಡಿಬೆಟ್ಟು ಇವರ 50ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಿದ ಹುಟ್ಟೂರ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮನುಷ್ಯ ಎಷ್ಟು ವರ್ಷ ಬದುಕಿದ್ದಾನೆ ಎನ್ನುವುದು ಮುಖ್ಯವಲ್ಲ. ಬದುಕಿದಷ್ಟು ವರ್ಷ ಏನು ಮಾಡಿದ್ದಾನೆ ಎನ್ನುವುದು ಮುಖ್ಯ. ತಮ್ಮ 25 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಪ್ರದೀಪ್ ಶೆಟ್ಟರು ಮಾಡಿದ‌ ಕೆಲಸಗಳು ಏನು ಎನ್ನುವುದು ಇಂದಿನ ಸಭೆಯೇ ಹೇಳುತ್ತಿದೆ. ಪ್ರದೀಪ್ ಶೆಟ್ಟರಿಗೆ ನಾಯಕತ್ವ ಗುಣ ಹುಟ್ಟಿನಿಂದಲೇ ಬಂದಿದೆ. ತಾನು ಬೆಳೆಯುವುದರ ಜೊತೆಗೆ ತಮ್ಮವರನ್ನು ಬೆಳೆಸುವ ಗುಣ ಅವರಲ್ಲಿದೆ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ‌ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಊರಿನವರು,‌ ಹಿತೈಷಿಗಳೆಲ್ಲಾ ಸೇರಿ ಹೀಗೊಂದು ಕಾರ್ಯಕ್ರಮ ಮಾಡುತ್ತೇವೆ ಎಂದಾಗ ಮೊದಲು ನಿರಾಕರಿಸಿದ್ದೆ. ಕೊನೆಗೆ ಅವರೆಲ್ಲರ ಒತ್ತಾಸೆಗೆ ಮಣಿದು ಒಪ್ಪಿಗೆ ಕೊಟ್ಟಿದ್ದೇನೆ. ನನ್ನ 25 ವರ್ಷದ ಸಾರ್ವಜನಿಕ ಜೀವನ ನನಗೆ ತೃಪ್ತಿ ನೀಡಿದೆ ಎಂದರು.

ರಾಜಕೀಯಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಿಲ್ಲ. ನನಗೆ ಯೋಗ‌ ಇದ್ದರೆ ರಾಜಕೀಯದಲ್ಲಿ ಎತ್ತರಕ್ಕೆ ಹೋಗುವೆ. ನಿರಂತರವಾಗಿ ಜನರೊಂದಿಗೆ ಇದ್ದಾಗ ಮಾತ್ರ ಜನರ ಪ್ರೀತಿ ಸಿಗುತ್ತದೆ ಎನ್ನುವುದಕ್ಕೆ ಸಾವಿರಾರು‌ ಸಂಖ್ಯೆಯಲ್ಲಿ ನೆರೆದ ನೀವೇ ಸಾಕ್ಷಿ.‌ ರಕ್ತದಾನ ಶಿಬಿರ, ವೈದ್ಯಕೀಯ‌ ನೆರವು ನೀಡುವುದರ ಮೂಲಕ ನನ್ನ 50 ನೇ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಕ್ಕೆ ನಿಮ್ಮೆಲ್ಲರ ಋಣದಲ್ಲಿದ್ದೇನೆ. ನೀವೆಲ್ಲರೂ ಜೊತೆಗಿದ್ದರೆ ಸಮಾಜಸೇವೆಯನ್ನು ಮುಂದುವರಿಸಲು ಶಕ್ತಿ ಬರುತ್ತದೆ ಎಂದರು.

ಬಲಾಡಿ ಸಂತೋಷ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಜ್ವಲಾ ಪ್ರದೀಪ್‌ ಶೆಟ್ಟಿ, ಡಾ. ನಾಗೇಶ್, ಗಣಪಯ್ಯ ಶೆಟ್ಟಿ, ದೇವಾನಂದ ಶೆಟ್ಟಿ, ಸಂತೋಷ ಶೆಟ್ಟಿ, ಶಂಕರ್ ಶೇಟ್ ನೆಲ್ಲಿಕಟ್ಟೆ, ಸತೀಶ್ ಶೆಟ್ಟಿ, ಕಿರಣ್ ಹೆಗ್ಡೆ, ಗೋಪಾಲಕೃಷ್ಣ ಕಿಣಿ, ಅರುಣ್ ಕುಮಾರ್ ಶೆಟ್ಟಿ, ಉಮೇಶ್ ಶೆಟ್ಟಿ‌ ಶಾನ್ಕಟ್ಟು, ಸಂತೋಷ್ ಶೆಟ್ಟಿ ಅಂಪಾರು ಇದ್ದರು.ಜನನಾಯಕನಿಗೆ 50... ಜನಸೇವೆಗೆ 25!:

ಗುಡಿಬೆಟ್ಟು ಪ್ರದೀಪ್ ಕುಮಾರ್ ಶೆಟ್ಟಿ 50ನೇ ಹುಟ್ಟುಹಬ್ಬ ಆಚರಣೆ ಹಾಗೂ ಸಮಾಜ ಸೇವೆಗೆ 25 ವರ್ಷ ತುಂಬಿದ‌ ಹಿನ್ನೆಲೆ ದಿನವಿಡೀ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಭಾನುವಾರ ಬೆಳಗ್ಗೆ ನೆಲ್ಲಿಕಟ್ಟೆ ಜೈ ಭಾರತಿ ಶಾಲೆಯಲ್ಲಿ‌ ರಕ್ತದಾನ‌ ಶಿಬಿರ ನಡೆಸಲಾಯಿತು. ಸಂಜೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ 15 ಮಂದಿ ಅನಾರೋಗ್ಯಪೀಡಿತರಿಗೆ ವೈದ್ಯಕೀಯ ನೆರವು ಹಾಗೂ ಜೈಭಾರತಿ ಶಾಲೆಗೆ ಶುದ್ದ ಕುಡಿಯುವ ನೀರಿನ ಘಟಕ ಹಸ್ತಾಂತರಿಸಿ ‘ದೀಪಣ್ಣನ 50ರ ಸಂಭ್ರಮ’ವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಉದಯ್ ಕುಮಾರ್ ಶೆಟ್ಟಿ ಪ್ರಾರ್ಥಿಸಿದರು. ಸಂಘಟಕ ನವೀನ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಮನೋಹರ ಶೆಟ್ಟಿ ಸ್ವಾಗತಿಸಿದರು. ಗಣೇಶ್ ಮೊಗವೀರ ವಂದಿಸಿದರು. ಅಕ್ಷಯ್ ಹೆಗ್ಡೆ ಮೊಳಹಳ್ಳಿ ನಿರೂಪಿಸಿದರು.