ಕಡೂರುಕ್ಷೇತ್ರದ ಹಿಂದುಳಿದ ವರ್ಗಗಳ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರದಿಂದ ₹150 ಕೋಟಿ ತರುವ ಮೂಲಕ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಕೆ. ಎಸ್.ಆನಂದ್ ಹೇಳಿದರು.

ಶಾಸಕ ಕೆ. ಎಸ್.ಆನಂದ್ । ಕಡೂರಲ್ಲಿ ಬಿಸಿಎಂ ಇಲಾಖೆಯಿಂದ 111ನೇ ದೇವರಾಜ ಅರಸು ಜಯಂತಿ । ₹1.25 ಕೋಟಿ ನೂತನ ಹಾಸ್ಟೆಲ್-ಡಿಜಿಟಲ್ ಲೈಬ್ರರಿ ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ ಕಡೂರು

ಕ್ಷೇತ್ರದ ಹಿಂದುಳಿದ ವರ್ಗಗಳ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರದಿಂದ ₹150 ಕೋಟಿ ತರುವ ಮೂಲಕ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಕೆ. ಎಸ್.ಆನಂದ್ ಹೇಳಿದರು.

ಭಾನುವಾರ ಕಡೂರು ಪಟ್ಟಣದ ವಿಜಯಲಕ್ಷೀ ಲೇ ಔಟ್ ನಲ್ಲಿ ಬಿಸಿಎಂ ಇಲಾಖೆಯಿಂದ 111ನೇ ದೇವರಾಜ ಅರಸು ಜಯಂತಿ, ₹1.25 ಕೋಟಿ ನೂತನ ಹಾಸ್ಟೆಲ್ ಮತ್ತು ಡಿಜಿಟಲ್ ಲೈಬ್ರರಿ ಲೋಕಾರ್ಪಣೆ ಮಾಡಿ ಮಾತನಾಡಿದರು. ರಾಜ್ಯದ ಕಡೂರು ತಾಲೂಕಿನಲ್ಲಿ 33 ಹಾಸ್ಟೆಲ್ ಗಳಿದ್ದು ಗ್ರಾಮೀಣ ಪ್ರದೇಶದ 2,884 ಮಕ್ಕಳು ಇಲ್ಲಿ ಓದುವ ಮುಖೇನ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ.

ಅನೇಕ ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದರೂ ಬಿಸಿಎಂ ಇಲಾಖೆಗೆ ದೇವರಾಜು ಅರಸು ಹೆಸರು ಇಡಲು ಕಾರಣ ಹಿಂದುಳಿದ ವರ್ಗಗಳಿಗೆ ಶೈಕ್ಷಣಿಕ, ರಾಜಕೀಯ ಹಾಗೂ ಉದ್ಯೋಗ ಮೀಸಲಾತಿ ಸಿಕ್ಕಿರುವುದು ಅರಸು ಅವರು ಸಿ ಎಂ ಆದಾಗ. 1975ರಲ್ಲಿ ಹಿಂದುಳಿದ ವರ್ಗದ ಮಕ್ಕಳ ಬಗ್ಗೆ ಸಮೀಕ್ಷೆ ಮಾಡಿಸಿದ ಎಲ್ ಜೆ. ಹಾವನೂರು ವರದಿ ಪ್ರಕಾರ ಶೇ 33 ಉದ್ಯೋಗ ಶೇ 13 ಮುಸ್ಲಿಂಮರಿಗೆ ನೀಡುವ ವರದಿ ಯಥಾವತ್ತಾಗಿ ಜಾರಿಗೊಳಿಸಿದರು ಎಂದು ತಿಳಿಸಿದರು.

ಅಲ್ಲದೆ1989 ರಲ್ಲಿ 109 ಜಾತಿಗಳಿಗೆ ಉದ್ಯೋಗದ ಮಂಡಲ್ ವರದಿ ಜಾರಿಗೊಳಿಸಿದರು. ಉಳುವವನೇ ಒಡೆಯ ಕಾನೂನು ಜಾರಿಗೊಳಿಸಿದ ಪರಿಣಾಮ ರಾಜ್ಯದ ಲಕ್ಷಾಂತರ ರೈತರಿಗೆ ಜಮೀನು ನೀಡಿದ್ದು ರೈತರು ಇತಿಹಾಸ ಮರೆಯಬಾರದು ಎಂದರು.

ರಾಜ್ಯದ ನಮ್ಮ ಕಾಂಗ್ರೆಸ್ ಸರ್ಕಾರದಿಂದ ಕಡೂರು ತಾಲೂಕಿನಲ್ಲಿ 5 ಗ್ಯಾರಂಟಿಗಳಿಂದ ₹132 ಕೋಟಿ ನೀಡುತ್ತಿದೆ. ಇದ ರಿಂದ ಬಡವರ ಬದುಕು ಹಸನಾಗುತ್ತಿದೆ ಎಂದರು.

ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ವಿ.ಪ. ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಅರಸು ಅವರನ್ನು ಪ್ರತೀ ಭಾರಿ ನೆನೆಯಬೇಕು. ಅವರು ರಾಜ್ಯದ ಎಲ್ಲ ವರ್ಗಗಳ ಧ್ವನಿಯಾಗಿ ಹೋರಾಟ ಮಾಡಿದ್ದರಿಂದ ನಾವು ಅಧಿಕಾರ ಅನುಭವಿಸುತ್ತಿದ್ದೇವೆ. ಇಂದಿರಾಗಾಂಧಿ ಪ್ರಧಾನಿಯಾದಾಗ ರಾಜ್ಯದ ಹಿಂದುಳಿದ ಎಲ್ಲ ವರ್ಗಗಳ ಅಭಿ ವೃದ್ಧಿಗೆ 20 ಅಂಶಗಳ ಕಾರ್ಯಕ್ರಮ ರೂಪಿಸಿದರು. ನೂತನ ಹಾಸ್ಟೆಲ್ ಇರುವ ಡಿಜಿಟಲ್ ಲೈಬ್ರರಿ ತೆರೆದಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ನಿಮ್ಮ ಪೋಷಕರಿಗೆ ಕೀರ್ತಿ ತರಬೇಕು. ಸಿದ್ದರಾಮಯ್ಯನವರು ಸಿಎಂ ಆದಾಗ ಚೌಳಹಿರಿಯೂರಿಗೆ ಮಂಜೂರಾಗಿದ್ದ ಡಿಪ್ಲಮೋ ಕಾಲೇಜನ್ನು ನಾನು ಕಡೂರು ಪಟ್ಟಣಕ್ಕೆ ಮಂಜೂರು ಮಾಡಿಸಿದೆ ಎಂದರು.

ಪ್ರಾಸ್ತಾವಿಕವಾಗಿ ಬಿಸಿಎಂ ಇಲಾಖೆ ಜಿಲ್ಲಾಧಿಕಾರಿ ಮಂಜುನಾಥ್ ಮಾತನಾಡಿ ಶಾಸಕರಾದ ಆನಂದ್ ರವರ ಸಹಕಾರ ದಿಂದ ₹1.25 ಕೋಟಿ ವೆಚ್ಚದ ನೂತನ ಕಟ್ಟಡ ಲೋಕಾರ್ಪಣೆ ಆಗುತ್ತಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ಮಾಡಲು ಡಿಟಿಟಲ್ ಲೈಬ್ರರಿ ಕೂಡ ಮಾಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಿರಿ ಎಂದರು.

ಮಾಜಿ ಜಿ.ಪಂ. ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಅರಸುರವರು ಬಡ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರು. ಶಾಸಕ ರಾಗಿದ್ದ ತಮ್ಮ ತಂದೆ ಕೆ.ಎಂ.ಕೃಷ್ಣಮೂರ್ತಿ ಕೂಡ ಬರ ಪೀಡಿತ ಕಡೂರು ತಾಲೂಕಿನ ಮಕ್ಕಳ ಶಿಕ್ಷಣಕ್ಕೆ 32 ಹಾಸ್ಟೆಲ್ ತಂದಿದ್ದು, ಶಾಸಕ ಆನಂದ್ ರವರು ಆ ದಾರಿಯಲ್ಲಿಯೇ ಸಾಗುತ್ತಿದ್ದಾರೆ ಎಂದರು.

ಸಮಾರಂಭದಲ್ಲಿ ಮಾಜಿ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಮಾಜಿಸದಸ್ಯರಾದ ತೋಟದಮನೆ ಮೋಹನ್, ಮನು ಮರುಗುದ್ದಿ,ಯಾಸೀನ್, ನಿರ್ಮಿತಿ ಗಂಗಾಧರ್, ಹಿ.ವ. ಆಯೋಗದ ಮಾಜಿ ಸದಸ್ಯ ಎಂ. ಎಸ್. ಹೆಳವಾರ್ , ವಿಸ್ತರಣಾಧಿಕಾರಿ ದೇವರಾಜ್, ಪಂಗುಲಿ ಮಂಜು, ಎಂ.ರಾಜಪ್ಪ ಸೇರಿದಂತೆ ನೂರಾರು ಮಕ್ಕಳು ಇದ್ದರು.

-- ಕೋಟ್‌.--

ಅರಸುರವರ ದಾರಿಯಲ್ಲಿ ಸಿದ್ದರಾಮಯ್ಯ ಸಾಗುವ ಮೂಲಕ ಶಿಕ್ಷಣಕ್ಕೆ ಆದ್ಯತೆ ನೀಡಿದರು. ತಾವು ಕೂಡ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದು, ಯಳಗೊಂಡನಹಳ್ಳಿ ಮೊರಾರ್ಜಿ ವಸತಿ ಶಾಲೆಗೆ ₹35 .20 ಕೋಟಿ, ಯಗಟಿ ₹35 ಕೋಟಿ, ಚೌಳಹಿರಿಯೂರು ₹22 ಕೋಟಿ,ಪಂಚನಹಳ್ಳಿಗೆ ₹22 ಕೋಟಿ, ಅಲ್ಪ ಸಂಖ್ಯಾತರ ಹಾಸ್ಟೆಲ್ ಗೆ ₹22 ಕೋಟಿ, ಆಶ್ರಮ ಶಾಲೆಗೆ ₹5 ಕೋಟಿ, ಯಗಟಿ ಶಾಲೆಗೆ ₹5 ಕೋಟಿ, ಪಂಚನಹಳ್ಳಿ ಮತ್ತು ಕಡೂರಿನ ಶಾಲೆಗಳಿಗೆ ತಲಾ ₹3 ಕೋಟಿ, ಸರಸ್ವತಿಪುರ ಶಾಲೆಗೆ ₹3ಕೋಟಿ ಸೇರಿದಂತೆ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ತಂದಿದ್ದೇನೆ

--ಕೆ.ಎಸ್.ಆನಂದ್,ಶಾಸಕರು.

. 23ಕೆಕೆಡಿಯು1.

ಕಡೂರು ಪಟ್ಟಣದ ವಿಜಯಲಕ್ಷ್ಮೀ ಲೇ ಔಟ್ ನಲ್ಲಿ ₹1.25 ಕೋಟಿ ವೆಚ್ಚದ ಬಿಸಿಎಂ ಇಲಾಖೆ ನೂತನ ಹಾಸ್ಟೆಲ್ ಲೋಕಾರ್ಪಣೆ ಸಮಾರಂಭ ನಡೆಯಿತು. ಶಾಸಕ ಕೆ ಎಸ್ ಆನಂದ್ ಮತ್ತಿತರರು ಇದ್ದರು.