ಸರ್ವೇ ಇಲಾಖೆಗೆ ಸಂಬಂಧಪಟ್ಟಂತೆ ೧೫ ಅರ್ಜಿಗಳು, ಕಂದಾಯ ಇಲಾಖೆ- ೩೪, ಆರ್ ಡಿ ಪಿ ಆರ್ - ೧೭, ಕೆಇಬಿ- ೧, ನೀರಾವರಿ- ೧೬ ಹಾಗೂ ಇತರೆ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ೬ ಅರ್ಜಿಗಳು ಒಳಗೊಂಡಂತೆ ಒಟ್ಟು ೮೯ ಅರ್ಜಿಗಳು ಸಭೆಯಲ್ಲಿ ಸಲ್ಲಿಕೆಯಾಗಿವೆ. ಹಿರೀಸಾವೆ ಹೋಬಳಿ ವ್ಯಾಪ್ತಿಯ ರೈತರು ತಮ್ಮ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಬಳಿ ತಿಳಿಸಿ ಬಗೆಹರಿಸುವಂತೆ ಮನವಿ ಮಾಡಿದರು. ಶಾಸಕರು ಹಾಗೂ ಅಧಿಕಾರಿಗಳು ಅಗತ್ಯ ದಾಖಲಾತಿಗಳೊಂದಿಗೆ ಬಗೆಹರಿಸುವಂತೆ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕು ಈ ವರ್ಷ ತೀವ್ರ ಬರ ಪರಿಸ್ಥಿತಿ ಎದರಿಸುತ್ತಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.ತಾಲೂಕಿನ ಹಿರೀಸಾವೆ ಗ್ರಾಮದ ಶ್ರೀ ಚೌಡೇಶ್ವರಿ ಭವನದಲ್ಲಿ ತಾಲೂಕು ಆಡಳಿತವು ಏರ್ಪಡಿಸಿದ್ದ ಪ್ರಜಾ ಸೇವಾ ಆಂದೋಲನ ಸಭೆಯಲ್ಲಿ ಮಾತನಾಡಿ, ಜನಸಾಮಾನ್ಯರ ಬದುಕು ಚಿಂತಾಜನಕ ಸ್ಥಿತಿಗೆ ತಲುಪಿದೆ. ಮಳೆಯ ತೀವ್ರ ಕೊರತೆಯ ಜೊತೆಗೆ ವಿದ್ಯುತ್ ಸಮಸ್ಯೆಯು ಬಿಗಡಾಯಿಸಿದೆ. ಕೆರೆ ಕಟ್ಟೆಗಳಲ್ಲಿ ನೀರಿಲ್ಲ. ಪರಿಣಾಮ ಅಂತರ್ಜಲ ತೀವ್ರ ಮಟ್ಟದಲ್ಲಿ ಕುಸಿದಿದ್ದು ಕೊಳವೆ ಬಾವಿಗಳಲ್ಲಿಯೂ ನೀರಿನ ಪ್ರಮಾಣವು ಗಣನೀಯವಾಗಿ ಕುಸಿಯುತ್ತಿದೆ. ಇದರಿಂದ ಮತ್ತಷ್ಟು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಬಗೆಹರಿಸುವಲ್ಲಿ ಕ್ರಮ ಕೈಗೊಳ್ಳಬೇಕು. ಜನಸಾಮಾನ್ಯರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ೧೫ ಸಾವಿರ ಅರ್ಜಿಗಳು ನೋಂದಣಿಯಾಗಿದ್ದು, ಅರ್ಹತೆ ಇದ್ದಲ್ಲಿ ಯಾವುದೇ ಕಾರಣಕ್ಕೂ ಕೈ ಬಿಡಬಾರದು. ವಿನಾಕಾರಣ ಕೈ ಬಿಟ್ಟರೆ ಪಿಡಿಒಗಳೇ ಜವಾಬ್ದಾರಿಯಾಗಲಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಈ ತಿಂಗಳ ೩೦ನೇ ತಾರೀಖಿನವರೆಗೂ ಅವಕಾಶ ಇದೆ ಎಂದು ತಿಳಿಸಿದರು.
ಇನ್ನೇನು ಹಾಸನಾಂಬೆ ಜಾತ್ರೆ ಪ್ರಾರಂಭವಾಗಲಿದ್ದು ಮತ್ತೊಮ್ಮೆ ಅಧಿಕಾರಿಗಳು ಉತ್ಸವ ಯಶಸ್ವಿಗೊಳ್ಳಲು ತೊಡಗಿಕೊಳ್ಳಬೇಕಾಗಿದೆ ಜೊತೆಗೆ ೩ ಹಂತದಲ್ಲಿ ಪ್ರಕ್ರಿಯೆ ನಡೆಯುವುದರಿಂದ ಕೇವಲ 6 ತಿಂಗಳಲ್ಲಿಯೇ ಮುಗಿಯುವುದಿಲ್ಲ. ಹೆಚ್ಚಿನ ಅವಧಿ ಬೇಕಾಗಿದೆ ಎಂದರು.ಎಚ್.ಹೊನ್ನೇನಹಳ್ಳಿ, ದಿಡಗ, ನುಗ್ಗೇಹಳ್ಳಿ ಸೇರಿ ಬಹುತೇಕ ಕಡೆ ಹೈಮಾಸ್ಟ್ ದೀಪಗಳು ಹಗಲಿನ ವೇಳೆಯೂ ಸಹ ಉರಿಯುತ್ತಿರುವುದು ಕಂಡು ಬರುತ್ತಿದೆ. ಇದರಿಂದ ವಿದ್ಯುತ್ ವ್ಯರ್ಥವಾಗಲಿದ್ದು ಜೊತೆಗೆ ಹೈಮಾಸ್ಟ್ ದುಸ್ಥಿತಿಗೊಂಡರೆ ಹೆಚ್ಚಿನ ಖರ್ಚು ತಗಲಿದೆ. ಆದ್ದರಿಂದ ಟೈಮರ್ಸ್ ಅಳವಡಿಸುವ ಮೂಲಕ ಸೂಕ್ತ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು ಎಂದು ಪಿಡಿಒಗಳಿಗೆ ತಿಳಿಸಿದರು.
ತಹಸೀಲ್ದಾರ್ ಶಂಕರಪ್ಪ ಮಾತನಾಡಿ, ಕಂದಾಯ, ಸರ್ವೇ, ನೀರಾವರಿ ಸೇರಿ ಯಾವುದೇ ಸಮಸ್ಯೆಗಳಿದ್ದಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ಪ್ರತಿಯೊಂದು ಕೆಲಸಗಳಿಗೂ ಒಂದಷ್ಟು ಸಮಯ ಹಾಗೂ ಅದರದ್ದೇ ಆದ ಸರ್ಕಾರಿ ನಿಯಮಗಳು ಇರುತ್ತವೆ. ಅಧಿಕಾರಿಗಳಿಗೆ ಒತ್ತಡ ಹೇರದಂತೆ ಅಗತ್ಯ ದಾಖಲಾತಿಗಳನ್ನು ಒದಗಿಸಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವುದು ಸೂಕ್ತ ಎಂದು ಸಭೆಯಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಸಲಹೆ ನೀಡಿದರು.ಸರ್ವೇ ಇಲಾಖೆಗೆ ಸಂಬಂಧಪಟ್ಟಂತೆ ೧೫ ಅರ್ಜಿಗಳು, ಕಂದಾಯ ಇಲಾಖೆ- ೩೪, ಆರ್ ಡಿ ಪಿ ಆರ್ - ೧೭, ಕೆಇಬಿ- ೧, ನೀರಾವರಿ- ೧೬ ಹಾಗೂ ಇತರೆ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ೬ ಅರ್ಜಿಗಳು ಒಳಗೊಂಡಂತೆ ಒಟ್ಟು ೮೯ ಅರ್ಜಿಗಳು ಸಭೆಯಲ್ಲಿ ಸಲ್ಲಿಕೆಯಾಗಿವೆ. ಹಿರೀಸಾವೆ ಹೋಬಳಿ ವ್ಯಾಪ್ತಿಯ ರೈತರು ತಮ್ಮ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಬಳಿ ತಿಳಿಸಿ ಬಗೆಹರಿಸುವಂತೆ ಮನವಿ ಮಾಡಿದರು. ಶಾಸಕರು ಹಾಗೂ ಅಧಿಕಾರಿಗಳು ಅಗತ್ಯ ದಾಖಲಾತಿಗಳೊಂದಿಗೆ ಬಗೆಹರಿಸುವಂತೆ ಭರವಸೆ ನೀಡಿದರು.
ತಹಸೀಲ್ದಾರ್ ಶಂಕರಪ್ಪ, ಉಪ ತಹಸೀಲ್ದಾರ್ ಬಿ.ಎಸ್.ರವಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರೀಶ್, ರಾಜಸ್ವ ನಿರೀಕ್ಷಕ ಎಸ್.ಎಲ್.ಯೋಗೇಶ್, ಗ್ರಾಮ ಲೆಕ್ಕಾಧಿಕಾರಿಗಳಾದ ಮುತ್ತುರಾಜ್, ಚಂದ್ರಶೇಖರ್, ಗಾಯಿತ್ರಿ, ದೇವಮ್ಮ, ಹಿರೀಸಾವೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಮಂಜೇಗೌಡ, ಪ್ರಮುಖರಾದ ಎಚ್.ಜೆ.ಮಹೇಶ್, ಎಚ್.ಈ.ಬೋರಣ್ಣ, ಎಚ್.ಎಸ್.ರವಿಕುಮಾರ್, ಎ.ಜಿ.ಪ್ರಭಾಕರ್, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಹೋಬಳಿ ವ್ಯಾಪ್ತಿಯ ಸಾರ್ವಜನಿಕರು ಪಾಲ್ಗೊಂಡಿದ್ದರು.