ಲೋಕಾಪುರ ಸಮೀಪದ ಹೆಬ್ಬಾಳ ಗ್ರಾಮದಲ್ಲಿ ಪ್ರಜಾಸೇವಾ ಕಾರ್ಯಕ್ರಮಕ್ಕೆ ಶಾಸಕ ಆರ್.ಬಿ. ತಿಮ್ಮಾಪುರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಪ್ರಜಾಸೇವೆ ಅಭಿಯಾನ ಮೂಲಕ ಜನರ ನಡುವೆಯೇ ಇದ್ದು ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸುವುದೇ ಸರ್ಕಾರದ ಉದ್ದೇಶವಾಗಿದೆ ಎಂದು ಸ್ಥಳೀಯ ಸಂಸ್ಥೆಗಳ ಹಾಗೂ ಪಂಚಾಯತ್‌ ರಾಜ್ ಸಂಸ್ಥೆಗಳ ವಿಧಾನ ಮಂಡಲ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಆರ್.ಬಿ. ತಿಮ್ಮಾಪೂರ ಹೇಳಿದರು.

ಸಮೀಪದ ಹೆಬ್ಬಾಳ ಗ್ರಾಮದಲ್ಲಿ ತಾಲೂಕಾಡಳಿತ, ಪ್ರಜಾಸೇವಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡ ಪ್ರಜಾಸೇವಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದ ಸೌಲಭ್ಯಗಳನ್ನು ನಿಗದಿತ ಅವಧಿಯಲ್ಲಿ ಪಡೆದುಕೊಳ್ಳಲು ಪ್ರಜಾಸೇವೆ ಅಭಿಯಾನವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಾರಂಭಿಸಿದ್ದು, ರಾಜ್ಯದ ಜನರಿಂದ ದಾಖಲೆ ಮಟ್ಟದಲ್ಲಿ ಸ್ಪಂದನೆ ದೊರೆತಿದೆ. ಜನಸೇವೆಯೇ ಉತ್ತಮ ಆಡಳಿತ ನಿಜವಾದ ಶಕ್ತಿ ಎಂದು ಹೇಳಿದರು.

ಸಾರ್ವಜನಿಕರ ದೂರುಗಳು ಮತ್ತು ವಿವಿಧ ಇಲಾಖೆಗಳ ಸೇವೆ ಸಂಬಂದಿಸಿದ ಅರ್ಜಿಗಳನ್ನು ಆನ್‌ಲೈನ್‌ ವೇದಿಕೆಯಡಿ ತಂದು ತ್ವರಿತವಾಗಿ ವಿಲೇವಾರಿ ಮಾಡುವ ಸರ್ಕಾರದ ಮಹತ್ವಾಕಾಂಕ್ಷಿ ಪ್ರಜಾಸೇವೆ ಅಭಿಯಾನವನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ತಹಸೀಲ್ದಾರ್‌ ಡಾ ಚಿಕ್ಕಪ್ಪ ನಾಯಕ ಮಾತನಾಡಿ, ಪ್ರಜಾಸೇವಾ ಅಭಿಯಾನ ಗ್ರಾಮೀಣ ಭಾಗದ ಬಡವರ, ಕೂಲಿ ಕಾರ್ಮಿಕರ, ರೈತರು ಸೇರಿ ಅನೇಕರ ಸಮಸ್ಯೆ ಹೊತ್ತು ತಾಲೂಕು ಕಚೇರಿಗಳಲ್ಲಿ ಅಲೆಯುವುದನ್ನು ತಪ್ಪಿಸಲು ಈ ಕಾರ್ಯಕ್ರಮವನ್ನು ಗ್ರಾಮ ಮಟ್ಟದಲ್ಲಿ ಆಯೋಜನೆ ಮಾಡಿದ್ದು, ಪ್ರತಿಯೊಬ್ಬರು ತಮ್ಮ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡುವ ಮೂಲಕ ಪರಿಹಾರ ಕಂಡುಕೊಳ್ಳಲು ಸಲಹೆ ನೀಡಿದರು.

ಗ್ಯಾರಂಟಿ ಯೋಜನೆ ಅಧ್ಯಕ್ಷ ಮಹಾಂತೇಶ ಮಾಚಕನೂರ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ತಹಸೀಲ್ದಾರ್‌ ಡಾ.ಚಿಕ್ಕಪ್ಪ ನಾಯಕ, ತಾಪಂ ರಾಘವೇಂದ್ರ ಕಳ್ಳಿಮನಿ, ಹೆಬ್ಬಾಳ ಗ್ರಾಮ ಪಂಚಾಯತಿ ಆಡಳಿತಾಧಿಕಾರಿ ರಮೇಶ ನಿಡೋಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖಂಡರಾದ ರಾಜುಗೌಡ ನ್ಯಾಮಗೌಡ, ಮಹಾದೇವ ಹೊಸಟ್ಟಿ, ರಂಗಪ್ಪ ತಳವಾರ, ರುದ್ರಪ್ಪ ಕಪ್ಪಿಕೇರಿ, ರಮೇಶ ವಜ್ರಮಟ್ಟಿ, ಗಡ್ಡೆಪ್ಪ ಬಾರಕೇರ, ಸುರೇಶ ಸಬರದ, ಹಣಮಂತ ರಾಜವ್ವಗೋಳ, ಹರಬಸು ಹೊಸಕೊಟಿ, ಹಣಮಂತ ಗುರಜಟ್ಟಿ, ಮಹಾಂತೇಶ ಮಹಾಲಿಂಗಪೂರ ಹೆಬ್ಬಾಳ, ಎಲ್ಲ ಇಲಾಖೆ ಅಧಿಕಾರಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಆಶಾ ಕಾರ್ಯಕರ್ತೆಯರು ಇದ್ದರು. ಶಿಕ್ಷಕರಾದ ಸಂಗಮೇಶ ನಿಲಗುಂದ ಸ್ವಾಗತಿಸಿದರು. ಶ್ರೀಕಾಂತ ಹರಕಂಗಿ ವಂದಿಸಿದರು.