ಯಲಬುರ್ಗಾದಲ್ಲಿ 16 ಕೋಟಿ ವೆಚ್ಚದಲ್ಲಿ ಪ್ರಜಾಸೌಧ ನಿರ್ಮಾಣ

| Published : Jul 19 2025, 01:00 AM IST

ಯಲಬುರ್ಗಾದಲ್ಲಿ 16 ಕೋಟಿ ವೆಚ್ಚದಲ್ಲಿ ಪ್ರಜಾಸೌಧ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾನ್ಯವಾಗಿ ತಾಲೂಕು ಪ್ರಜಾಸೌಧವನ್ನು ಹೊಸ ತಾಲೂಕುಗಳಿಗೆ ಕೊಡುವುದು ಹೆಚ್ಚು. ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರ ಶ್ರಮದ ಫಲದಿಂದ ಹಳೆಯ ಯಲಬುರ್ಗಾ ತಾಲೂಕಿಗೆ ಹೊಸ ಕಟ್ಟಡ ಮಂಜೂರು ಆಗಿರುವುದು ಗಮನಾರ್ಹ ಸಂಗತಿ.

ಯಲಬುರ್ಗಾ:

ಪಟ್ಟಣದಲ್ಲಿ ತಾಲೂಕು ಪ್ರಜಾಸೌಧ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಇದರಿಂದ ಸಾರ್ವಜನಿಕರಿಗೆ ಕಚೇರಿ ಅಲೆದಾಟ ತಪ್ಪಲಿದೆ.

ಸಾಮಾನ್ಯವಾಗಿ ತಾಲೂಕು ಪ್ರಜಾಸೌಧವನ್ನು ಹೊಸ ತಾಲೂಕುಗಳಿಗೆ ಕೊಡುವುದು ಹೆಚ್ಚು. ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರ ಶ್ರಮದ ಫಲದಿಂದ ಹಳೆಯ ಯಲಬುರ್ಗಾ ತಾಲೂಕಿಗೆ ಹೊಸ ಕಟ್ಟಡ ಮಂಜೂರು ಆಗಿರುವುದು ಗಮನಾರ್ಹ ಸಂಗತಿ. ಒಂದೇ ಸೂರಿನಲ್ಲಿ ತಾಲೂಕು ಕೇಂದ್ರ ಕಚೇರಿಗಳನ್ನು ಒದಗಿಸುವ ಪ್ರಜಾಸೌಧ ಕಟ್ಟಡವನ್ನು ₹೧೬ ಕೋಟಿ ವೆಚ್ಚದಲ್ಲಿ ನಿರ್ಮಿಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಇದನ್ನು ಟೈಪ್-ಸಿ ಮಾದರಿಯಲ್ಲಿ ನಿರ್ಮಿಸಲು ಪ್ರಸ್ತಾಪಿಸಲಾಗಿತ್ತು. ಕಟ್ಟಡಕ್ಕೆ ತಗುಲುವ ವೆಚ್ಚದಲ್ಲಿ ಶೇ. ೫೦ರಷ್ಟು ಅಂದರೆ ₹ ೮ ಕೋಟಿ ಅನುದಾನವನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಭರಿಸುವ ಷರತ್ತಿಗೆ ಒಳಪಟ್ಟು, ಇನ್ನುಳಿದ ₹ ೮ ಕೋಟಿ ಅನುದಾನವನ್ನು ರಾಜ್ಯ ಆಯವ್ಯಯ ಲೆಕ್ಕ ಶೀರ್ಷಿಕೆಯಡಿ ಭರಿಸುವ ಕುರಿತಂತೆ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.

ರಾಜ್ಯವ್ಯಾಪಿ ಏಕರೂಪ ವಿನ್ಯಾಸ:

ತಾಲೂಕು ಆಡಳಿತ ಸೌಧವನ್ನು ಟೈಪ್-ಸಿ ಮಾದರಿಯಲ್ಲಿ ಅಂದಾಜು ₹೧೬ ಕೋಟಿ ವೆಚ್ಚದಲ್ಲಿ ನಿರ್ಮಿಸಲು ಪ್ರಸ್ತಾಪಿಸಲಾಗಿತ್ತು. ರಾಜ್ಯವ್ಯಾಪಿ ತಾಲೂಕು ಪ್ರಜಾಸೌಧ ಕಟ್ಟಡವನ್ನು ಅವಶ್ಯವಿರುವ ಎಲ್ಲ ಕಾಮಗಾರಿ ಒಳಗೊಂಡಂತೆ ಟೈಪ್-ಸಿ ಮಾದರಿಯಲ್ಲಿ ಏಕರೂಪ ವಿನ್ಯಾಸ ಹಾಗೂ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.

ಕಚೇರಿ ಅಲೆದಾಟ ತಪ್ಪಲಿದೆ:

ಒಂದೇ ಸೂರಿನಡಿ ಎಲ್ಲ ಕಚೇರಿಗಳನ್ನು ಒಳಗೊಂಡ ತಾಲೂಕು ಆಡಳಿತ ಸೌಧ ನಿರ್ಮಾಣವಾಗುವುದರಿಂದ ಸಾರ್ವಜನಿಕರಿಗೆ ಕಚೇರಿಯಿಂದ ಕಚೇರಿಗೆ ಅಲೆದಾಟ ತಪ್ಪಲಿದೆ. ಆಯಾ ಇಲಾಖೆಗಳ ಅಧಿಕಾರಿಗಳು ಸರಿಯಾದ ಸಮಯಕ್ಕೆ ಸಿಗುವ ಜತೆಗೆ, ಸಕಾಲಕ್ಕೆ ಸಾರ್ವಜನಿಕರ ಕೆಲಸಗಳಾಗಲಿವೆ. ಆದಷ್ಟು ಶೀಘ್ರ ಪ್ರಜಾಸೌಧ ನಿರ್ಮಾಣವಾದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.ಯಲಬುರ್ಗಾದಲ್ಲಿ ಅಂದಾಜು ₹೧೬ ಕೋಟಿ ವೆಚ್ಚದಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಒಂದೇ ಸೂರಿನಡಿ ಪ್ರಜಾಸೌಧ ನಿರ್ಮಾಣವಾಗುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಅಲ್ಲದೆ ಅಲೆದಾಟ ತಪ್ಪಲಿದೆ.ಬಸವರಾಜ ರಾಯರಡ್ಡಿ, ಸಿಎಂ ಆರ್ಥಿಕ ಸಲಹೆಗಾರ