ಸಾರಾಂಶ
ಎಂ. ಪ್ರಹ್ಲಾದ
ಕನಕಗಿರಿ:8 ವರ್ಷಗಳ ಬಳಿಕ ಪ್ರಜಾ ಸೌಧ (ಮಿನಿ ವಿಧಾನಸೌಧ) ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದ್ದು, ಮೇ ೨೫ರಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭೂಮಿಪೂಜೆ ನೆರವೇರಿಸಲಿದ್ದಾರೆ. ತಾಲೂಕು ಘೋಷಣೆಯಾದಾಗಿನಿಂದ ತಾಲೂಕು ಕಚೇರಿ ನಿರ್ಮಾಣಕ್ಕೆ ಪಟ್ಟಣದ ಎಂಟು ದಿಕ್ಕುಗಳಲ್ಲಿ ಜಾಗೆ ಪರಿಶೀಲಿಸಿ ಕೈಬಿಡಲಾಗುತ್ತಿತ್ತು. ನಾಲ್ಕೈದು ವರ್ಷ ಅಧಿಕಾರಿಗಳು, ಮಾಜಿ ಶಾಸಕ ಬಸವರಾಜ ದಢೇಸೂಗುರು, ಹಾಲಿ ಸಚಿವ ಶಿವರಾಜ ತಂಗಡಗಿ ಜಾಗೆ ಪರಿಶೀಲನೆ ತೊಡಗಿದ್ದರು. ಇದೀಗ ೧೮೭ ಹಾಗೂ ೧೮೯ರ ಸರ್ವೇ ನಂಬರಲ್ಲಿ ಪ್ರಜಾ ಸೌಧ ನಿರ್ಮಾಣಕ್ಕೆ ಕಂದಾಯ ಇಲಾಖೆ ಮುಂದಾಗಿದೆ.
₹ 10 ಕೋಟಿ ಅನುದಾನ:ಮಾಜಿ ಶಾಸಕ ಬಸವರಾಜ ದಢೇಸೂಗುರು ಅವಧಿಯಲ್ಲಿ ಕಲಿಕೇರಿ ರಸ್ತೆಗೆ ಹೊಂದಿಕೊಂಡಿರುವ ೪ ಎಕರೆ ಪ್ರದೇಶದಲ್ಲಿ ತಹಸೀಲ್ದಾರ್ ಕಚೇರಿ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕೆಲ ತಾಂತ್ರಿಕ ಕಾರಣಗಳಿಂದಾಗಿ ಈ ಭೂಮಿಯ ಬದಲಾಗಿ ಗಂಗಾವತಿ ರಸ್ತೆಯ ಗಾವಠಾಣ ಪಕ್ಕದಲ್ಲಿನ ಸರ್ವೇ ನಂ. ೧೮೭ ಹಾಗೂ ೧೮೯ರಲ್ಲಿನ ೩ ಎಕರೆ ಪ್ರದೇಶದಲ್ಲಿ ಪ್ರಜಾ ಸೌಧ ನಿರ್ಮಾಣಗೊಳ್ಳಲಿದೆ. ಕಂದಾಯ ಇಲಾಖೆಯಿಂದ ₹ ೧೦ ಕೋಟಿ ಅನುದಾನ ಮಂಜೂರಾಗಿದ್ದು, ತಹಸೀಲ್ದಾರ್ ಕಚೇರಿಯ ವ್ಯಾಪ್ತಿಯ ವಿವಿಧ ವಿಭಾಗಗಳು, ಉಪ ನೋಂದಣಿ ಇಲಾಖೆ, ಖಜಾನೆ ಸೇರಿದಂತೆ ನಾನಾ ಕೊಠಡಿಗಳು ನಿರ್ಮಾಣವಾಗಲಿವೆ.
ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ:ಕಂದಾಯ ಇಲಾಖೆ ನೀಡಿದ ₹ ೧೦ ಕೋಟಿ ಜತೆಗೆ ಕೆಕೆಆರ್‌ಡಿಬಿಯಡಿ ಹೆಚ್ಚುವರಿ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲು ಸಚಿವ ಶಿವರಾಜ ತಂಗಡಗಿ ಹಾಗೂ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ದಶಕಗಳ ಹೋರಾಟದ ಫಲವಾಗಿ ತಾಲೂಕು ಕೇಂದ್ರವಾಗಿದ್ದ ಕನಕಗಿರಿಗೆ ಇದೀಗ ಎಂಟು ವರ್ಷದ ಬಳಿಕ ಪ್ರಜಾ ಸೌಧ ನಿರ್ಮಾಣವಾಗುತ್ತಿರುವುದು ಜನತೆಯಲ್ಲಿ ಸಂತಸ ಮೂಡಿದೆ. ಈ ನಡುವೆ ಕಾಮಗಾರಿಗೆ ವೇಗ ನೀಡಿ ಸಾರ್ವಜನಿಕ ಸೇವೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಗುತ್ತಿಗೆದಾರರು ಕಾರ್ಯನಿರ್ವಹಿಸಬೇಕೆನ್ನುವುದು ಸ್ಥಳೀಯರ ಒತ್ತಾಯವಾಗಿದೆ.
ಒಂದೇ ಕ್ಷೇತ್ರದಲ್ಲಿ ಎರಡು ತಾಲೂಕು ಕೇಂದ್ರಗಳನ್ನಾಗಿ ಮಾಡಿದ್ದೆ. ಇದೀಗ ಮಿನಿ ವಿಧಾನಸೌಧ ಕಟ್ಟಡ ಸೇರಿ ವಿವಿಧ ಸರ್ಕಾರಿ ಕಚೇರಿ ತಂದು ಕಾರ್ಯಾರಂಭ ಮಾಡಿಸುತ್ತಿದ್ದೇನೆ. ಜನರ ಪ್ರೀತಿಗಿಂತ ಜನಹಿತ ಕಾರ್ಯ ಕೈಗೆತ್ತಿಕೊಂಡು ಸಾರ್ವಜನಿಕರಿಗೆ ಶಾಶ್ವತ ಪರಿಹಾರ ನೀಡುವ ಕೆಲಸ ಮಾಡುತ್ತಿದ್ದೇನೆ.ಶಿವರಾಜ ತಂಗಡಗಿ, ಸಚಿವಪ್ರಜಾ ಸೌಧ ನಿರ್ಮಾಣಕ್ಕೆ ಒಂದೇ ಕುಟುಂಬಸ್ಥರು ೩ ಎಕರೆ ಭೂಮಿ ದಾನ ನೀಡಿದ್ದು ರಾಜ್ಯಪಾಲರ ಹೆಸರಿಗೆ ನೋಂದಾಯಿಸಲಾಗಿದೆ. ೧೮೭ರಲ್ಲಿ ೨ ಎಕರೆ ೬ ಗುಂಟೆ ಮತ್ತು ೧೮೯ರಲ್ಲಿ ೩೪ ಗುಂಟೆ ಭೂಮಿ ದಾನ ನೀಡಲಾಗಿದೆ. ಇದೇ ಭೂಮಿಯನ್ನು ತಹಸೀಲ್ದಾರ್ ಕಚೇರಿ ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ವಿಶ್ವನಾಥ ಮುರುಡಿ, ತಹಸೀಲ್ದಾರ್