ಪ್ರಜಾಸೌಧ, ಆಸ್ಪತ್ರೆ ಕಾಮಗಾರಿಗೆ ಶೀಘ್ರ ಚಾಲನೆ: ಸಚಿವ ತಂಗಡಗಿ

| Published : Feb 02 2025, 01:02 AM IST

ಪ್ರಜಾಸೌಧ, ಆಸ್ಪತ್ರೆ ಕಾಮಗಾರಿಗೆ ಶೀಘ್ರ ಚಾಲನೆ: ಸಚಿವ ತಂಗಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾರಟಗಿಯಲ್ಲಿ ವಿವಿಧ ಸರ್ಕಾರಿ ಕಚೇರಿಗಳಿಗೆಂದೇ ಮೀಸಲಿಟ್ಟಿದ್ದ ಜಾಗದಲ್ಲಿ ಹಿಂದಿನ ಬಿಜೆಪಿ ಶಾಸಕರು ಅವೈಜ್ಞಾನಿಕ ಕೆರೆ ಕಟ್ಟಿಸಿ ಹಾಳುಗೆಡವಿದ ಕಾರಣಕ್ಕೆ ಈಗ ಆ ನಿಯೋಜಿತ ಸ್ಥಳದಲ್ಲಿ ಕಚೇರಿ ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ.

ವಿವಿಧ ವಾರ್ಡ್‌ಗಳ ₹೧.೪೮ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ

ಕನ್ನಡಪ್ರಭ ವಾರ್ತೆ ಕಾರಟಗಿ

ಕಾರಟಗಿಯಲ್ಲಿ ವಿವಿಧ ಸರ್ಕಾರಿ ಕಚೇರಿಗಳಿಗೆಂದೇ ಮೀಸಲಿಟ್ಟಿದ್ದ ಜಾಗದಲ್ಲಿ ಹಿಂದಿನ ಬಿಜೆಪಿ ಶಾಸಕರು ಅವೈಜ್ಞಾನಿಕ ಕೆರೆ ಕಟ್ಟಿಸಿ ಹಾಳುಗೆಡವಿದ ಕಾರಣಕ್ಕೆ ಈಗ ಆ ನಿಯೋಜಿತ ಸ್ಥಳದಲ್ಲಿ ಕಚೇರಿ ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ. ಆದರೂ, ಪಟ್ಟಣದ ವ್ಯಾಪ್ತಿಯಲ್ಲಿ ಸೂಕ್ತ ಸ್ಥಳ ಗುರುತಿಸಿದ್ದು, ಶೀಘ್ರದಲ್ಲಿಯೇ ಪ್ರಜಾಸೌಧಕ್ಕೆ ಭೂಮಿ ಪೂಜೆ ನೆರವೇರಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಇಲ್ಲಿನ ಪುರಸಭೆ ಕಚೇರಿ ಆವರಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ವಿವಿಧ ವಾರ್ಡ್‌ಗಳ ₹೧.೪೮ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಕಾರಟಗಿ ತಾಲೂಕಾ ಕೇಂದ್ರವಾಗುವ ಎಲ್ಲ ಲಕ್ಷಣಗಳನ್ನು ಅರಿತಿದ್ದ ಪಟ್ಟಣದ ಹಿರಿಯರು ಸೇರಿದಂತೆ ಮಾಜಿ ಶಾಸಕರು, ಮಾಜಿ ಸಚಿವರುಗಳು ಇಲ್ಲಿನ ಕೆರೆ ಪ್ರದೇಶದಲ್ಲಿ ತಾಲೂಕಾ ಆಡಳಿತ ಕಚೇರಿ ಸೇರಿದಂತೆ ಎಲ್ಲಾ ಇಲಾಖೆಗಳ ಕಚೇರಿಗಳಿಗೆ, ತಾಲೂಕಾ ಕ್ರೀಡಾಂಗಣ, ಬಸ್ ಡೀಪೋ, ಕೋರ್ಟ್ ಹೀಗೆ ಅನೇಕ ಕಚೇರಿಗಳಿಗೆಂದೆ ಜಾಗೆ ಗುರುತಿಸಿದ್ದರು.

ಆದರೆ, ದೂರದೃಷ್ಠಿ ಇಲ್ಲದ ಈ ಹಿಂದಿನ ಆಡಳಿತಗಾರರು ಎಲ್ಲವನ್ನು ತಿರುವು ಮುರುವು ಮಾಡಿ ಅವೈಜ್ಞಾನಿಕ ಕೆರೆ ನಿರ್ಮಿಸಿದ ಕಾರಣಕ್ಕೆ ಈಗ ಅಲ್ಲಿ ಏನೂ ಮಾಡದಂಥ ಸ್ಥಿತಿಯಲ್ಲಿದ್ದೆವೆ.

ಇನ್ನೂ ಜನರಿಗೆ ಮಧ್ಯಭಾಗದಲ್ಲಿಯೇ ಅನುಕೂಲವಾಗುತ್ತಿದ್ದ ಸರ್ಕಾರಿ ಕಚೇರಿ ಸ್ಥಾಪಿಸಲು ಆಗುತ್ತಿಲ್ಲ ಎಂದು ನೋವು ವ್ಯಕ್ತಪಡಿಸಿದರು.

ಎಲ್ಲ ಕಚೇರಿಗಳನ್ನು ಸ್ಥಾಪಿಸಲೇಬೇಕಾದ ಕಾರಣಕ್ಕೆ ಪಟ್ಟಣದ ವ್ಯಾಪ್ತಿಯಲ್ಲಿ ಎರಡು ಕಡೆ ಸರ್ಕಾರಿ ಜಾಗೆಯನ್ನು ಗುರುತಿಸಿದ್ದು, ಅಲ್ಲಿಯೇ ಪ್ರಜಾಸೌಧ, ತಾಲೂಕಾ ಕ್ರೀಡಾಂಗಣ. ಇನ್ನು ಉದ್ಯಮಿ ಕೆ.ಸಣ್ಣ ಸೂಗಪ್ಪ ಅವರು ದಾನ ನೀಡಿರುವ ೬ ಎಕರೆ ಜಮೀನಿನಲ್ಲಿ ₹ ೪೨ಕೋಟಿ ವೆಚ್ಚದಲ್ಲಿ ಸುಸಜ್ಜಿತ ೧೦೦ ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.

ಈಗಾಗಲೇ ನೂತನ ನಿರೀಕ್ಷಣಾ ಮಂದಿರ ಹಾಗೂ ಕನ್ನಡ ಭವನ ಕಾಮಗಾರಿಗಳು ಪ್ರಗತಿಯಲ್ಲಿವೆ. ಕೆಲವೇ ದಿನಗಳಲ್ಲಿ ಅಲ್ಪ ಸಂಖ್ಯಾತ ವಾರ್ಡಗಳಲ್ಲಿ ಕ್ಷೇತ್ರಕ್ಕೆ ₹೫ ಕೋಟಿ ಬಿಡುಗಡೆಯಾಗಿದೆ. ಪಟ್ಟಣಕ್ಕಾಗಿಯೇ ₹ ೨ ಕೋಟಿ ನಿಗದಿಪಡಿಸಲಾಗಿದೆ. ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.ಚಾಲನೆ:ಸಚಿವ ಶಿವರಾಜ ತಂಗಡಗಿ ೧೭ನೇ ವಾರ್ಡ್‌ನಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ₹೧ ಕೋಟಿ ೪೮ ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. ವಿವಿಧ ಅನುದಾನದಲ್ಲಿ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿವೇತನ ಚೆಕ್ ನೀಡಿದರು. ವಿಕಲಚೇತನರಿಗೆ ತ್ರಿಚಕ್ರವಾಹನ ವಿತರಿಸಿದರು.

ಈ ಸಂದರ್ಭ ಪುರಸಭೆ ಅಧ್ಯಕ್ಷೆ ರೇಖಾ ಆನೆಹೊಸೂರು, ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಈಶಪ್ಪ ಇಟ್ಟಂಗಿ, ಮುಖ್ಯಾಧಿಕಾರಿ ಸುರೇಶ ಶೆಟ್ಟರ್, ಸದಸ್ಯರಾದ ಹಿರೇಬಸಪ್ಪ ಸಜ್ಜನ, ದೊಡ್ಡಬಸವರಾಜ ಬೂದಿ, ಮಂಜುನಾಥ್ ಮೇಗೂರು, ಸಂಗನಗೌಡ, ಸೋಮಶೇಖರ ಬೇರಿಗೆ, ರಮೇಶ ನಾಯಕ, ಶ್ರೀನಿವಾಸ ಕಾನುಮಲ್ಲಿ, ಸಿದ್ದಪ್ಪ ಬೇವಿನಾಳ, ಹನುಮಂತರೆಡ್ಡಿ, ಮುಖಂಡರಾದ ಶಿವರಡ್ಡಿ ನಾಯಕ, ಚನ್ನಬಸಪ್ಪ ಸುಂಕದ, ಬ್ಲಾಕ್ ಅಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ್, ನಗರ ಘಟಕ ಅಧ್ಯಕ್ಷ ಅಯಪ್ಪ ಉಪ್ಪಾರ, ಉದಯ ಈಡಿಗೇರ, ರಾಜಶೇಖರ ಆನೆಹೊಸೂರು, ಖಾಜಾಹುಸೇನ ಮುಲ್ಲಾ, ನಾಗರಾಜ್ ಭಜಂತ್ರಿ, ನಾಗರಾಜ್ ಈಡಿಗೇರ ಇತರರಿದ್ದರು.