ಸಾರಾಂಶ
ಪ್ರಜಾಸೌಧ ನಿರ್ಮಾಣ ಕುರಿತು ಈಚೆಗೆ ಬಾಗಲಕೋಟ ಜಿಲ್ಲಾಧಿಕಾರಿ ಎಂ.ಸಂಗಪ್ಪ ರಬಕವಿಯ ಎರಡೂ ಜಾಗೆಗಳನ್ನು ಪರಿಶೀಲಿಸಿ ಹೋಗಿದ್ದು, ತಮ್ಮಲ್ಲೇ ಪ್ರಜಾಸೌಧ ನಿರ್ಮಿಸುವಂತೆ ಆಗ್ರಹಿಸಿ ಅವಳಿ ನಗರಗಳ ಧುರೀಣರು ಜಿಲ್ಲಾಧಿಕಾರಿಗಳಿಗೆ ಪ್ರತ್ಯೇಕ ಮನವಿ ಸಲ್ಲಿಸಿ ರಾಜಕೀಯ ಕಿಡಿ ಹೊತ್ತಿಸಿದ್ದಾರೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಪ್ರಜಾಸೌಧ ನಿರ್ಮಾಣ ಕುರಿತು ಈಚೆಗೆ ಬಾಗಲಕೋಟ ಜಿಲ್ಲಾಧಿಕಾರಿ ಎಂ.ಸಂಗಪ್ಪ ರಬಕವಿಯ ಎರಡೂ ಜಾಗೆಗಳನ್ನು ಪರಿಶೀಲಿಸಿ ಹೋಗಿದ್ದು, ತಮ್ಮಲ್ಲೇ ಪ್ರಜಾಸೌಧ ನಿರ್ಮಿಸುವಂತೆ ಆಗ್ರಹಿಸಿ ಅವಳಿ ನಗರಗಳ ಧುರೀಣರು ಜಿಲ್ಲಾಧಿಕಾರಿಗಳಿಗೆ ಪ್ರತ್ಯೇಕ ಮನವಿ ಸಲ್ಲಿಸಿ ರಾಜಕೀಯ ಕಿಡಿ ಹೊತ್ತಿಸಿದ್ದಾರೆ.ಪರಸ್ಪರ ಒಪ್ಪಿಗೆಯ ಮೇಲೆ ಜಾಗ ಗುರುತಿಸುವ ಹೇಳಿಕೆಯ ಹಿನ್ನೆಲೆಯಲ್ಲಿ ನಿಗದಿತ ಸಮುದಾಯದ ಜನರಿಗೆ ನೆರವಾಗುವ ಹುನ್ನಾರ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಣಕಾಸು ವರ್ಷದಲ್ಲಿ ಪ್ರಜಾಸೌಧ ನಿರ್ಮಾಣದ ಅನುದಾನ ಸಕಾಲದಲ್ಲಿ ಬಳಕೆಯಾಗದೇ ಸರ್ಕಾರಕ್ಕೆ ಮರಳುವುದು ಗ್ಯಾರಂಟಿ ಎಂದು ಜನ ಮಾತಾಡುತ್ತಿದ್ದಾರೆ.
ಕುಮಾರಸ್ವಾಮಿ ಸಿಎಂ ಆಗಿದ್ದಾಗ ಹೊಸ ತಾಲೂಕೆಂದು ಘೋಷಣೆ ಮಾಡಿದರೂ ತೇರದಾಳದಲ್ಲಿ ಉಪನೋಂದಣಿ, ವಿಶೇಷ ತಹಸೀಲ್ದಾರ ಹುದ್ದೆ ಬಿಟ್ಟರೆ ಯಾವುದೇ ಕಚೇರಿಗಳು ಕಾರ್ಯಾರಂಭವಾಗಿಲ್ಲ. ಪ್ರಜಾಸೌಧ ನಿರ್ಮಾಣವಾದರೆ ಕಚೇರಿ ಕಾರ್ಯಾರಂಭವಾಗಿ ಪೂರ್ಣ ಪ್ರಮಾಣದ ತಾಲೂಕು ಭಾಗ್ಯ ಸಿಗುವುದು ಯಾವಾಗ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.ರಬಕವಿಯಲ್ಲೇ ಪ್ರಜಾಸೌಧ ನಿರ್ಮಿಸಬೇಕೆಂದು ಬುದ್ದಪ್ಪ ಕುಂದಗೋಳ, ಜಿ.ಎಸ್.ಅಮ್ಮಣಗಿಮಠ, ಅಮಿತ್ ನಾಶಿ, ಮಾರುತಿ ನಾಯಕ್, ಹನುಮಂತ ಪೂಜಾರಿ, ಮಲ್ಲಿಕಾರ್ಜುನ ವಂದಾಲ, ಹೊನ್ನಪ್ಪ ಬಿರಡಿ, ಆಸ್ಲಂ ಪೆಂಡಾರಿ, ಹಸನ್ ಕೊತ್ವಾಲ್, ನಿಂಗರಾಜ ನಾಯಕ, ಶಿವಾನಂದ ತಂಗಡಿ ಮುಂತಾದರು ಮನವಿ ಮಾಡಿದ್ದರೆ.
ಬನಹಟ್ಟಿಯಿಂದ ಸಮಸ್ತ ದೈವ ಮಂಡಳದ ಅಧ್ಯಕ್ಷ ಮಲ್ಲಿಕಾರ್ಜುನ ತುಂಗಳ, ಹರ್ಷವರ್ಧನ ಪಟವರ್ಧನ, ಭೀಮಶಿ ಮಗದುಮ, ಶಂಕರ ಸೋರಗಾಂವಿ, ಮಲ್ಲಿಕಾರ್ಜುನ ಬಾಣಕಾರ, ರಾಜೇಂದ್ರ ಭದ್ರನ್ನವರ, ಶಂಕರ ಕೆಸರಗೊಪ್ಪ ಮುಂತಾದವರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ದಾರೆ.