ಸಾರ್ವಜನಿಕರ ಸಮಸ್ಯೆಗಳನ್ನು ನಿಗದಿತ ಕಾಲಮಿತಿಯೊಳಗೆ ಪರಿಹರಿಸುವುದು ಅಧಿಕಾರಿಗಳ ಜವಾಬ್ದಾರಿ. ಪ್ರತಿ ಶನಿವಾರ ನಡೆಯುವ ಅಹವಾಲು ಸ್ವೀಕಾರ ಸಭೆಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಐಜಿಪಿ ಆರ್‌ಆರ್‌ಎಸ್ ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತಿದೆ. ಈವರೆಗೆ 2,400ಕ್ಕೂ ಅಧಿಕ ಅರ್ಜಿಗಳು ಸ್ವೀಕೃತವಾಗಿದ್ದು, ಅವುಗಳ ವಿಲೇವಾರಿಗೆ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.
ಕಾರ್ಕಳ: ಸಾರ್ವಜನಿಕರ ಸಮಸ್ಯೆಗಳನ್ನು ನಿಗದಿತ ಕಾಲಮಿತಿಯೊಳಗೆ ಪರಿಹರಿಸುವುದು ಅಧಿಕಾರಿಗಳ ಜವಾಬ್ದಾರಿ. ಪ್ರತಿ ಶನಿವಾರ ನಡೆಯುವ ಅಹವಾಲು ಸ್ವೀಕಾರ ಸಭೆಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಐಜಿಪಿಆರ್‌ಆರ್‌ಎಸ್ ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತಿದೆ. ಈವರೆಗೆ 2,400ಕ್ಕೂ ಅಧಿಕ ಅರ್ಜಿಗಳು ಸ್ವೀಕೃತವಾಗಿದ್ದು, ಅವುಗಳ ವಿಲೇವಾರಿಗೆ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.
ಎರ್ಲಪಾಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಜಾಸೇವಾ ಆಂದೋಲನದ ಅಹವಾಲು ಸ್ವೀಕಾರ ಸಭೆಯಲ್ಲಿ ಅಜೆಕಾರು ಹೋಬಳಿ ವ್ಯಾಪ್ತಿಯ ಸಾರ್ವಜನಿಕರಿಂದ 23 ಅಹವಾಲುಗಳು ಸ್ವೀಕರಿಸಿ ಮಾತನಾಡಿದರು.ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ, ಅಧಿಕಾರಿಗಳೇ ಜವಾಬ್ದಾರಿಯಿಂದ ಸ್ಪಂದಿಸಿ ಸಮಸ್ಯೆ ಪರಿಹಾರ ಕಲ್ಪಿಸಬೇಕು ಎಂಬ ಆಶಯದೊಂದಿಗೆ ಪ್ರಜಾಸೇವಾ ಆಂದೋಲನ ಆರಂಭಿಸಲಾಗಿದೆ ಎಂದರು.
ವಿವಿಧ ವಿಷಯಗಳ ಚರ್ಚೆ: ಸಭೆಯಲ್ಲಿ 94ಸಿ ಹಕ್ಕುಪತ್ರ ವಿತರಣೆಯಲ್ಲಿನ ವಿಳಂಬ ಪ್ರಮುಖವಾಗಿ ಪ್ರಸ್ತಾಪವಾಯಿತು. ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದರು. ಇದರೊಂದಿಗೆ ರಸ್ತೆ ಡಾಂಬರೀಕರಣ, ಅಪಾಯಕಾರಿ ಮರಗಳ ತೆರವು, ಗೃಹಲಕ್ಷ್ಮಿ ಹಾಗೂ ಸಂಧ್ಯಾ ಸುರಕ್ಷಾ ಯೋಜನೆಗಳ ಹಣ ಪಾವತಿ ವಿಳಂಬ, 25 ಎಕರೆಗಿಂತ ಕಡಿಮೆ ವಿಸ್ತೀರ್ಣದ ಜಮೀನಿಗೆ ಏಕ ವಿನ್ಯಾಸ ಅನುಮೋದನೆ ಪಡೆಯುವಲ್ಲಿನ ತೊಡಕುಗಳ ಬಗ್ಗೆಯೂ ಅಹವಾಲು ಸಲ್ಲಿಸಲಾಯಿತು. ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಭಜನೆ ಮತ್ತಿತರ ಕಾರ್ಯಕ್ರಮಗಳಿಗೆ ಅವಕಾಶ ನೀಡುವಂತೆ ಮನವಿ ಮಾಡಲಾಯಿತು.ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಸಾರ್ವಜನಿಕರ ಅಹವಾಲುಗಳನ್ನು ಇಲಾಖೆಯಿಂದ ಇಲಾಖೆಗೆ ವರ್ಗಾಯಿಸುವ ಪ್ರವೃತ್ತಿ ನಿಲ್ಲಬೇಕು. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿಸಬೇಕು ಎಂದರು.
ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿ, ಸರ್ವೆ, ಕಂದಾಯ, ಅರಣ್ಯ, ಆಧಾರ್ ಹಾಗೂ ಪಡಿತರ ಚೀಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅಧಿಕಾರಿಗಳು ತಮ್ಮ ಹಂತದಲ್ಲೇ ಬಗೆಹರಿಸಬೇಕು. ಅರ್ಜಿದಾರರಿಗೆ ಕೈಗೊಂಡ ಕ್ರಮದ ಬಗ್ಗೆ ಲಿಖಿತ ಉತ್ತರ ನೀಡಬೇಕು ಎಂದು ತಿಳಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಸಹಾಯಕ ಪೊಲೀಸ್ ಅಧೀಕ್ಷಕಿ ಇಶಿತಾ ಗುಪ್ತಾ, ಅಜಿತ್ ಹೆಗ್ಡೆ, ಎಸ್.ಎಸ್. ಕಡ್ರೊಳ್ಳಿ, ಶಶಿಕಾಂತ್ ವಿಭೂದೆ, ತಹಶೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ಹಾಗೂ ಪ್ರಶಾಂತ್ ರಾವ್ ಉಪಸ್ಥಿತರಿದ್ದರು.
ಪಿಡಿಒ ಪ್ರತಾಪ್ ಶೆಟ್ಟಿ ಸ್ವಾಗತಿಸಿದರು. ಉಪತಹಸೀಲ್ದಾರ್ ನಳಿನಿ ನಿರೂಪಿಸಿದರು.