ಹಳಿಯಾಳ ತಾಲೂಕಿನ ಸಾಂಬ್ರಾಣಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ ಹಳಿಯಾಳ ವಿಧಾನಸಭಾ ಕ್ಷೇತ್ರ ಮಟ್ಟದ ಪ್ರಜಾಸೇವಾ ಅಭಿಯಾನ ಜನಸಭೆ ಕಾರ್ಯಕ್ರಮಕ್ಕೆ ಶಾಸಕ ಆರ್.ವಿ.ದೇಶಪಾಂಡೆ ಚಾಲನೆ ನೀಡಿದರು.
ಹಳಿಯಾಳ: ಸರ್ಕಾರವೇ ಜನರ ಬಳಿ ಹೋಗಿ ಅವರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ದಿಸೆಯಲ್ಲಿ ಮಹತ್ವಾಕಾಂಕ್ಷೆಯೊಂದಿಗೆ ಆರಂಭಿಸಿದ ಪ್ರಜಾಸೇವೆ ಯೋಜನೆಯು ದೇಶದಲ್ಲಿಯೇ ಮೊಟ್ಟ ಮೊದಲ ಜನಪರ ಯೋಜನೆಯಾಗಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ಶನಿವಾರ ತಾಲೂಕಿನ ಸಾಂಬ್ರಾಣಿ ಗ್ರಾಮದಲ್ಲಿ ಆಯೋಜಿಸಿದ ಹಳಿಯಾಳ ವಿಧಾನ ಸಭಾ ಕ್ಷೇತ್ರ ಮಟ್ಟದ ಪ್ರಜಾಸೇವಾ ಅಭಿಯಾನ ಜನಸಭೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಸರ್ಕಾರಕ್ಕೆ ಸಲಹೆ ನೀಡುವೆ: ಜನರ ಸಮಸ್ಯೆಗಳನ್ನು ಬಗೆಹರಿಸಲು ಎದುರಾಗುವ ಕಾನೂನಾತ್ಮಕ ತೊಡಕುಗಳಿದ್ದರೇ ಅಥವಾ ಇನ್ನೂ ಆಡಳಿತಾತ್ಮಕ ಸುಧಾರಣೆಗಳಾಗ ಬೇಕಾದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಮ್ಮ ಸಲಹೆಗಳನ್ನು ನನಗೆ ನೀಡಬಹುದು, ನಾನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷನಾಗಿ ಸರ್ಕಾರಕ್ಕೆ ನಿಮ್ಮ ಸಲಹೆಗಳನ್ನು ಸೂಚಿಸುತ್ತೆನೆ ಎಂದರು. ಈಗಾಗಲೇ ನಾನು ಆಡಳಿತ ಸುಧಾರಣೆಯ ಅಧ್ಯಕ್ಷನಾಗಿ 8ನೇ, 9ನೇ ಮತ್ತು 10ನೇಯ ಹೀಗೆ ಮೂರು ವರದಿಗಳನ್ನು ನೀಡಿದ್ದು, ಸರ್ಕಾರವು ಅವುಗಳನ್ನು ಅನುಷ್ಠಾನಗೊಳಿಸಿದೆ ಎಂದರು. ಆಡಳಿತ ಪಾರದರ್ಶಕ ಹಾಗೂ ಸರಳವಾಗಿರಬೇಕು, ಜನರು ತಮ್ಮ ಕೆಲಸಗಳಿಗಾಗಿ ಕಚೇರಿ ಅಲೆದಾಟ ತಪ್ಪಿಸಬೇಕೆಂಬುದು ಸರ್ಕಾರದ ಆಶಯವಾಗಿದೆ, ಈ ಜನಪರ ಯೋಜನೆಯನ್ನು ಯಶಸ್ವಿಗೊಳಿಸಲು ಅಧಿಕಾರ ವೃಂದ ಹಾಗೂ ಸಾರ್ವಜನಿಕರು ಕೈಜೋಡಿಸಬೇಕೆಂದರು.
ದೇಶಪಾಂಡೆ ಗರಂ: ಪ್ರಜಾಸೇವಾ ಅಭಿಯಾನದ ಚೊಚ್ಚಲ ಸಭೆಯಲ್ಲಿ ಕೆಲವು ಅಧಿಕಾರಿಗಳು ಗೈರಾಗಿರುವದನ್ನು ಕಂಡು ತೀವ್ರ ಸಿಟ್ಟಿಗೆದ್ದ ದೇಶಪಾಂಡೆ, ಸರ್ಕಾರದ ಜನಪರ ಯೋಜನೆಗೆ ಹೀಗೆ ಅಧಿಕಾರಿಗಳು ಅಸಡ್ಡೆ ತೋರಿದರೆ ಜನರ ಕೆಲಸಗಳು ಅಗುವುದು ಹೇಗೆ ಎಂದು ಪ್ರಶ್ನಿಸಿದರು. ಸಭೆಯಲ್ಲಿ ಗೈರಾದವರಿಗೆ ನೋಟಿಸ್ ನೀಡುವಂತೆ ಹಾಗೂ ಸಭೆಗೆ ಗೈರಾದವರ ಯಾದಿಯನ್ನು ತಮ್ಮ ಕಚೇರಿಗೂ ಕಳಿಸುವಂತೆ ತಹಸೀಲ್ದಾರರಿಗೆ ಸೂಚಿಸಿದರು.ಸಮಸ್ಯೆಗಳ ಪ್ರಸ್ತಾಪ: ಸಭೆಯಲ್ಲಿ ಪಿಂಚಣಿ, ಆಶ್ರಯ ಮನೆ, ವಿಧವಾ, ವೃದ್ಧಾಪ್ಯ ವೇತನ, ಹೊಲ ಗದ್ದೆಗಳಿಗೆ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರ ಕೋರಿ ಮಹಿಳೆಯರು, ಬುಡಕಟ್ಟು ಸಮಾಜ, ಸಂಘ ಸಂಸ್ಥೆಗಳು, ಹಿರಿಯ ನಾಗರಿಕರಿಂದ 60ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಸಲ್ಪಟ್ಟವು. ಅರ್ಜಿದಾರರನ್ನು ಕರೆಯಿಸಿ ಶಾಸಕರು ಖುದ್ದು ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದರು.
ಸಭೆಯಲ್ಲಿ ಸಹಾಯಕ ಆಯುಕ್ತ ಶಾಲಂ ಹುಸೇನ್, ನೋಡಲ್ ಅಧಿಕಾರಿ ಇಸ್ಮಾಯಿಲ್ ಶಿರಹಟ್ಟಿ, ಡಿವೈಎಸ್ಪಿ ಶಿವಾನಂದ ಮದರಖಂಡಿ, ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕು ತಾ.ಪಂ ಇಒ, ತಹಸೀಲ್ದಾರರು ಇದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮೀಣ ಭಾಗದ ರಾಜಕೀಯ ಮುಖಂಡರು, ಮಾಜಿ ಜನಪ್ರತಿನಿಧಿಗಳು, ಸಾರ್ವಜನಿಕರು ಆಗಮಿಸಿದ್ದರು. ಹಳಿಯಾಳ ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ ಪ್ರಜಾಸೇವೆ ಯೋಜನೆಯ ಉದ್ದೇಶಗಳನ್ನು ವಿವರಿಸಿದರು.