ಜೆಡಿಎಸ್ಸಿಂದ ಪ್ರಜ್ವಲ್‌ ಸಸ್ಪೆಂಡ್‌

| Published : May 01 2024, 02:00 AM IST

ಸಾರಾಂಶ

ಅಪರಾಧ ಸಾಬೀತಾದರೆ ಉಚ್ಚಾಟನೆ ಮಾಡಲಾಗುವುದು ಎಂದು ಎಚ್‌ಡಿಕೆ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ದೇಶಾದ್ಯಂತ ಭಾರೀ ಸಂಚಲನ ಮೂಡಿಸಿರುವ ಹಾಸನದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಜೆಡಿಎಸ್‌ನಿಂದ ಅಮಾನತು ಮಾಡಲಾಗಿದೆ.

ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಈ ವಿಚಾರ ಪ್ರಕಟಿಸಿದರು. ಅಮಾನತು ಆದೇಶಕ್ಕೆ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಸಹಿ ಮಾಡಿರುವ ಪ್ರತಿಯನ್ನು ಪ್ರದರ್ಶಿಸಿದರು.

ಪ್ರಜ್ವಲ್‌ ರೇವಣ್ಣ ಅವರ ಮೇಲೆ ಕೇಳಿ ಬಂದಿರುವ ಗಂಭೀರ ಆರೋಪ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಪ್ರಜ್ವಲ್‌ರನ್ನು ಅಮಾನತು ಮಾಡಿ ರಾಷ್ಟ್ರೀಯ ಅಧ್ಯಕ್ಷರಿಗೆ ಶಿಫಾರಸು ಮಾಡಲಾಗಿತ್ತು. ಅದರಂತೆ ಅವರು ಅಮಾನತು ಆದೇಶ ಹೊರಡಿಸಿದ್ದಾರೆ. ಈ ಅಮಾನತು ತಕ್ಷಣದಿಂದಲೇ ಜಾರಿಯಾಗಲಿದೆ. ಸದ್ಯ ಎಸ್‌ಐಟಿ ತಂಡ ತನಿಖೆ ನಡೆಸುತ್ತಿದೆ. ತನಿಖೆ ಪೂರ್ಣಗೊಂಡು ಅಪರಾಧ ಸಾಬೀತಾದರೆ ನಂತರ ಪಕ್ಷದಿಂದಲೇ ಉಚ್ಚಾಟನೆ ಮಾಡಲಾಗುವುದು. ಅಲ್ಲಿವರೆಗೂ ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಪ್ರಕರಣದ ಹಿಂದೆ ಮಾಜಿ ಪ್ರಧಾನಿ ಎಚ್.​ಡಿ.ದೇವೇಗೌಡರ ಕುಟುಂಬಕ್ಕೆ ಕಳಂಕ ತರುವ ಹುನ್ನಾರವಿದೆ. ಹಳೆಯ ಪ್ರಕರಣವನ್ನು ಈಗ ಚುನಾವಣೆ ಸಮಯದಲ್ಲಿ ಮುನ್ನೆಲೆಗೆ ತಂದಿದ್ದಾರೆ ಎಂದರು.

ರೇವಣ್ಣ ವಿರುದ್ಧ ಕ್ರಮವಿಲ್ಲ: ಮಾಜಿ ಸಚಿವ, ಶಾಸಕ ಎಚ್‌.ಡಿ.ರೇವಣ್ಣ ವಿರುದ್ಧವೂ ಕೇಸ್‌ ದಾಖಲಾಗಿದ್ದು, ಅವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ ಎಂಬ ಪ್ರಶ್ನೆಗೆ, ಯಾವ ಕ್ರಮ ಕೈಗೊಳ್ಳಬೇಕು? ಅವರ ವಿರುದ್ಧ ಸುಳ್ಳು ಕೇಸ್‌ ದಾಖಲಿಸಲಾಗಿದೆ. ಸದ್ಯಕ್ಕೆ ಅವರ ಮೇಲೆ ಯಾವುದೇ ಕ್ರಮವಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

ಸಂಬಂಧವಿಲ್ಲ: ನನ್ನ ಕುಟುಂಬ ಪ್ರತ್ಯೇಕವಾಗಿ ವಾಸವಾಗಿದೆ. ನನ್ನ ಕುಟುಂಬ ಹಾಗೂ ದೇವೇಗೌಡರಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಇದು ರೇವಣ್ಣ ಕುಟುಂಬಕ್ಕೆ ಸಂಬಂಧಿಸಿದ ವಿಚಾರ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ ಅವರು, ಪ್ರಧಾನಿ ಮೋದಿ ಅವರಿಗಾಗಲಿ, ಬಿಜೆಪಿಗಾಗಲಿ ಈ ಪ್ರಕರಣದ ಜತೆಗೆ ಸಂಬಂಧವಿಲ್ಲ ಎಂದರು.

ಮೋದಿ ಅವರು ಈ ಪ್ರಕರಣಕ್ಕೆ ಸಂಬಂಧಿಸಿ ಉತ್ತರಿಸಬೇಕು ಎಂದು ಕಾಂಗ್ರೆಸ್‌ನವರು ಆಗ್ರಹಿಸುತ್ತಿದ್ದಾರೆ. ಕಾಂಗ್ರೆಸ್‌ ವಿನಾಕಾರಣ ರಾಜಕಾರಣ ಮಾಡುತ್ತಿದೆ ಅಷ್ಟೆ. ಇದಕ್ಕೂ ಮೋದಿಗೂ ಏನು ಸಂಬಂಧ? ಬಿಜೆಪಿ-ಜೆಡಿಎಸ್‌ ಮೈತ್ರಿ ಮಾಡಿಕೊಂಡಿದೆ ಅಷ್ಟೆ ಎಂದರು.

ಪ್ರಜ್ವಲ್‌ ರೇವಣ್ಣ ವಿಷಯಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡ ಕುಮಾರಸ್ವಾಮಿ, ಹೌದು ಬಿಜೆಪಿಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಶಾ ಸರಿಯಾಗಿ ಹೇಳಿದ್ದಾರೆ ಎಂದು ನುಡಿದರು.

ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪುರ, ಸಾ.ರಾ.ಮಹೇಶ್‌, ಅಲ್ಕೋಡ್‌ ಹನುಮಂತಪ್ಪ ಎಂಎಲ್‌ಸಿ ಎಸ್‌.ಎಲ್‌.ಬೋಜೇಗೌಡ ಸೇರಿ ಹಲವರಿದ್ದರು.