ಪ್ರಜ್ವಲ್‌ ಆಗಮನ ಗುಮಾನಿ: ಮಂಗ್ಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸ್‌ ನಿಗಾ

| Published : May 06 2024, 12:35 AM IST / Updated: May 06 2024, 01:44 PM IST

prajwal revanna
ಪ್ರಜ್ವಲ್‌ ಆಗಮನ ಗುಮಾನಿ: ಮಂಗ್ಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸ್‌ ನಿಗಾ
Share this Article
  • FB
  • TW
  • Linkdin
  • Email

ಸಾರಾಂಶ

ಭಾನುವಾರ ಸಂಜೆ ವರೆಗೆ ದುಬೈ ಸೇರಿದಂತೆ ಕೊಲ್ಲಿ ರಾಷ್ಟ್ರಗಳಿಂದ ವಿಮಾನಗಳು ಮಂಗಳೂರಿಗೆ ಆಗಮಿಸಿದ್ದು, ಪ್ರಜ್ವಲ್‌ ರೇವಣ್ಣ ಆಗಮನ ಪತ್ತೆಯಾಗಿಲ್ಲ. ಪ್ರಜ್ವಲ್‌ ರೇವಣ್ಣ ದುಬೈನಿಂದ ಮಂಗಳೂರಿಗೆ ಆಗಮಿಸುವ ಬಗ್ಗೆ ಜಾಲತಾಣಗಳಲ್ಲಿ ಸುದ್ದಿ ಹರಡಿತ್ತು.

 ಮಂಗಳೂರು :  ಪೆನ್‌ಡ್ರೈವ್‌ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ವಿಶೇಷ ತನಿಖಾ ತಂಡ ಎದುರು ಶರಣಾಗುತ್ತಾರೆ ಎಂಬ ಗುಮಾನಿ ಹಿನ್ನೆಲೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರದಿಂದ ಪೊಲೀಸರು ಬಂಧನಕ್ಕಾಗಿ ನಿಗಾ ಇರಿಸಿದ್ದಾರೆ. 

ರಾಜತಾಂತ್ರಿಕ ಪಾಸ್‌ಪೋರ್ಟ್‌ನಲ್ಲಿ ಜರ್ಮನಿಗೆ ತೆರಳಿದ್ದ ಪ್ರಜ್ವಲ್‌ ರೇವಣ್ಣ, ಅಲ್ಲಿಂದ ದುಬೈಗೆ ತೆರಳಿರುವ ಶಂಕೆ ವ್ಯಕ್ತವಾಗಿತ್ತು. ಇದೀಗ ತಂದೆ, ಶಾಸಕ ರೇವಣ್ಣ ಬಂಧನ ಹಿನ್ನೆಲೆಯಲ್ಲಿ ಪ್ರಜ್ವಲ್‌ ಬಂಧನಕ್ಕೂ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೆ ಸಿದ್ಧತೆ ನಡೆಯುತ್ತಿದೆ. ಹೀಗಾಗಿ ಪ್ರಜ್ವಲ್‌ ದುಬೈನಿಂದ ಮಂಗಳೂರು ಮೂಲಕ ಬೆಂಗಳೂರಿಗೆ ಆಗಮಿಸುತ್ತಾರೆ ಎಂಬ ಗುಮಾನಿ ಹರಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್‌ ತಂಡ ಪ್ರಜ್ವಲ್‌ ಬಂಧನಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾಯುವಂತಾಗಿದೆ.

ಭಾನುವಾರ ಸಂಜೆ ವರೆಗೆ ದುಬೈ ಸೇರಿದಂತೆ ಕೊಲ್ಲಿ ರಾಷ್ಟ್ರಗಳಿಂದ ವಿಮಾನಗಳು ಮಂಗಳೂರಿಗೆ ಆಗಮಿಸಿದ್ದು, ಪ್ರಜ್ವಲ್‌ ರೇವಣ್ಣ ಆಗಮನ ಪತ್ತೆಯಾಗಿಲ್ಲ. ಪ್ರಜ್ವಲ್‌ ರೇವಣ್ಣ ದುಬೈನಿಂದ ಮಂಗಳೂರಿಗೆ ಆಗಮಿಸುವ ಬಗ್ಗೆ ಜಾಲತಾಣಗಳಲ್ಲಿ ಸುದ್ದಿ ಹರಡಿತ್ತು.

ಭಾನುವಾರ ಬೆಳಗ್ಗೆ ಎರಡು ಹಾಗೂ ಸಂಜೆ ಎರಡು ವಿಮಾನಗಳು ದುಬೈನಿಂದ ಮಂಗಳೂರಿಗೆ ಆಗಮಿಸಿದೆ. ಇದರಲ್ಲಿ ಯಾವುದರಲ್ಲೂ ಪ್ರಜ್ವಲ್‌ ರೇವಣ್ಣ ಆಗಮಿಸಿಲ್ಲ. ಮಾತ್ರವಲ್ಲ ಅವರ ಆಗಮನ ಬಗ್ಗೆ ಟಿಕೆಟ್‌ ಕೂಡ ಕಾಯ್ದಿರಿಸಿರುವ ಮಾಹಿತಿ ಇಲ್ಲ ಎಂದು ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ.