ಪ್ರಜ್ವಲ್‌ ಎನ್‌ಡಿಎ ಅಭ್ಯರ್ಥಿ ಎಂದು ಹೇಳಿಲ್ಲ

| Published : Jan 29 2024, 01:31 AM IST

ಸಾರಾಂಶ

ಸಂಸದ ಪ್ರಜ್ವಲ್‌ ರೇವಣ್ಣ ಮುಂದಿನ ಲೋಕಸಭಾ ಚುನಾವಣೆಯ ಹಾಸನ ಕ್ಷೇತ್ರ ಅಭ್ಯರ್ಥಿ ಎಂದು ಬಿಜೆಪಿ ನಾಯಕರು ಎಲ್ಲಿಯೂ ಹೇಳಿಲ್ಲ. ಆದರೆ, ಮಾಜಿ ಪ್ರಧಾನಿ ದೇವೇಗೌಡರು ಎನ್‌ಡಿಎ ಅಭ್ಯರ್ಥಿಯ ಗೆಲುವಿನ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದಾರೆ. ಆದರೆ ಎನ್‌ಡಿಎ ಅಭ್ಯರ್ಥಿ ಯಾರು ಎನ್ನುವುದು ಸೀಟು ಹಂಚಿಕೆ ವೇಳೆ ತೀರ್ಮಾನ ಆಗಲಿದೆ ಎಂದು ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಹೇಳಿದರು. ಹಾಸನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಹೇಳಿಕೆ । ಎನ್‌ಡಿಎ ಅಭ್ಯರ್ಥಿ ಗೆಲುವಿನ ಹಿನ್ನೆಲೆ ದೇವೇಗೌಡ ಜಿಲ್ಲಾ ಪ್ರವಾಸ

ಕನ್ನಡಪ್ರಭ ವಾರ್ತೆ ಹಾಸನ

ಸಂಸದ ಪ್ರಜ್ವಲ್‌ ರೇವಣ್ಣ ಮುಂದಿನ ಲೋಕಸಭಾ ಚುನಾವಣೆಯ ಹಾಸನ ಕ್ಷೇತ್ರ ಅಭ್ಯರ್ಥಿ ಎಂದು ಬಿಜೆಪಿ ನಾಯಕರು ಎಲ್ಲಿಯೂ ಹೇಳಿಲ್ಲ. ಆದರೆ, ಮಾಜಿ ಪ್ರಧಾನಿ ದೇವೇಗೌಡರು ಎನ್‌ಡಿಎ ಅಭ್ಯರ್ಥಿಯ ಗೆಲುವಿನ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದಾರೆ. ಆದರೆ ಎನ್‌ಡಿಎ ಅಭ್ಯರ್ಥಿ ಯಾರು ಎನ್ನುವುದು ಸೀಟು ಹಂಚಿಕೆ ವೇಳೆ ತೀರ್ಮಾನ ಆಗಲಿದೆ ಎಂದು ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಹೇಳಿದರು.

ನಗರದಲ್ಲಿ ಭಾನುವಾರ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ‘ಬೆಂಗಳೂರಿನಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ಆಗಿದ್ದು, ಮುಂದಿನ ತಿಂಗಳು ಜಿಲ್ಲಾ ಕಾರ್ಯಕಾರಿಣಿ ಸಭೆ ನಡೆಯಲಿದೆ. ಕಾರ್ಯಕರ್ತರ ಭಾವನೆ ರಾಜ್ಯ ತಂಡದ ಭಾವನೆ ಆಧರಿಸಿ ಲೋಕಸಭಾ ಅಭ್ಯರ್ಥಿಗಳ ಆಯ್ಕೆಗೆ ಅಂತಿಮ ತೀರ್ಮಾನ ಆಗಲಿದೆ. ಹಾಸನದಲ್ಲಿ ಹಾಲಿ ಸಂಸದ ಪ್ರಜ್ವಲ್ ಅವರೇ ಮುಂದಿನ ಅಭ್ಯರ್ಥಿ ಎಂದು ಘೋಷಣೆ ಮಾಡಿ ದೇವೇಗೌಡರು ಪ್ರಚಾರ ಮಾಡುತ್ತಿದ್ದಾರೆ. ಅವರು ಹಿರಿಯರು, ಮಾಜಿ ಪ್ರದಾನಿಗಳು, ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ೨೮ಕ್ಕೆ ೨೮ ಸೀಟು ಗೆಲ್ಲಬೇಕು. ಮೋದಿಯವರು ಮತ್ತೆ ಪ್ರದಾನಿಯಾಗಬೇಕು ಎಂಬ ಬದ್ದತೆ ಅವರಿಗಿದೆ’ ಎಂದು ಸ್ಪಷ್ಟಪಡಿಸಿದರು.

‘ಜೆಡಿಎಸ್‌ನಿಂದ ಅಭ್ಯರ್ಥಿ ಆದರೆ ಪ್ರಜ್ವಲ್ ಅಭ್ಯರ್ಥಿ ಆಗುತ್ತಾರೆ ಎಂದು ಅವರು ಮತ ಕೇಳಿದ್ದಾರೆ. ಅದು ಸ್ವಾಭಾವಿಕ. ಆದರೆ ಪ್ರಜ್ವಲ್ ಎನ್‌ಡಿಎ ಅಭ್ಯರ್ಥಿ ಎಂದು ಅವರು ಎಲ್ಲಿಯೂ ಹೇಳಿಲ್ಲ. ಅವರಿಗೂ ರಾಜಕೀಯ ಅನುಭವ ಇದೆ. ಹಾಸನಕ್ಕೆ ಅವರಿಗೆ ಸೀಟು ಕೊಡುವುದೇ ಇಲ್ಲ ಎನ್ನಲ್ಲ. ಆದರೆ ಕೊಟ್ಟಿದ್ದಾರೆ ಎನ್ನೋ ಮಾತು ಸತ್ಯ ಅಲ್ಲ. ಅದು ಚರ್ಚೆ ಹಂತದಲ್ಲಿದೆ. ಗೆಲುವೇ ಇಲ್ಲಿ ಮಾನದಂಡ. ಅಂತಿಮವಾಗಿ ಎಲ್ಲಾ ಕ್ಷೇತ್ರ ಗೆಲ್ಲಬೇಕು ಎನ್ನುವುದು ನಮ್ಮ ಗುರಿ’ ಎಂದು ಹೇಳಿದರು.

ಜೆಡಿಎಸ್‌ ಬದ್ಧತೆ ಬಗ್ಗೆ ನಂಬಿಕೆ ಇದೆ:

ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಡಿ.ಕೆ.ಶಿವಕುಮಾರ್ ಭೇಟಿ ವಿಚಾರವಾಗಿ ಮಾತನಾಡಿ, ‘ಅವರು ಯಾವಾಗ ಯಾರನ್ನು ಬೇಟಿ ಮಾಡ್ತಾರೊ ನನಗೆ ಮಾಹಿತಿ ಇಲ. ನಾನು ರಾಜ್ಯ ಪ್ರಧಾನ ಕಾರ್ಯದರ್ಶಿ. ಯಾರೋ ಒಬ್ಬ ವ್ಯಕ್ತಿ ಯಾರನ್ನೊ ಭೇಟಿಯಾದರೆ ಆ ಬಗ್ಗೆ ಮಾತನಾಡಲ್ಲ’ ಎಂದು ತಿಳಿಸಿದರು.

ಮೋದಿ ಪಿಎಂ ಮಾಡಲಿಕ್ಕೆ ಕೆಲವರು ವಾಪಸ್‌

ಬಿಜೆಪಿ ತೊರೆದಿದ್ದ ನಾಯಕರು ಮರಳಿ ಪಕ್ಷ ಸೇರ್ಪಡೆ ವಿಚಾರವಾಗಿ ಮಾತನಾಡಿ, ‘ಕೆಲ ನಾಯಕರು ಬೇರೆ ಬೇರೆ ಕಾರಣಗಳಿಗೆ ದೂರ ಸರಿದಿದ್ದರು. ಆದರೆ ಈಗ ಇರೋದು ಪಂಚಾಯಿತಿ ಚುನಾವಣೆ ಅಲ್ಲ, ದೇಶದ ಚುನಾವಣೆ. ಅನೇಕ ಹಿರಿಯರು ಕೆಲ ಇರಿಸು ಮುರಿಸಿನಿಂದ ದೂರ ಹೋದವರು ಮತ್ತೆ ವಾಪಸ್ ಬರ್ತಾ ಇದ್ದಾರೆ. ರಾಮ ಮಂದಿರ ವಿಚಾರವಾಗಿ ಕಾಂಗ್ರೆಸ್ ಪಕ್ಷದ ನಿಲುವು ಧಿಕ್ಕರಿಸಿ ಅಯೋಧ್ಯೆ ಬಗ್ಗೆ ಅವರ ನಿರ್ಧಾರದಿಂದ ಕೇವಲ ನಾಯಕರಲ್ಲ, ಲಕ್ಷಾಂತರ ಕಾರ್ಯಕರ್ತರು ಬಿಜೆಪಿ ಕಡೆ ಬರ್ತಾ ಇದ್ದಾರೆ. ಬಿಜೆಪಿ ಬಿಟ್ಟು ಹೋದೋರು ಮಾತ್ರವಲ್ಲ ಬೇರೆ ಪಕ್ಷದ ನಾಯಕರು ಕೂಡ ಪಕ್ಷಕ್ಕೆ ಬರ್ತಾರೆ’ ಎಂದು ಪ್ರೀತಂಗೌಡ ಹೇಳಿದರು.

ಜಗದೀಶ್ ಶೆಟ್ಟರ್ ನೆನ್ನೆ ಮೊನ್ನೆ ಬಿಜೆಪಿ ಪಕ್ಷದವರಲ್ಲ. ಅವರು ಜನ ಸಂಘದ ಕಾಲದಲ್ಲಿಂದಲು ಇದ್ದವರು. ಹಾಗಾಗಿ ಅವರು ಮರಳಿ ಬಂದಿದ್ದಾರೆ. ಇದಕ್ಕೆ ಯಾವ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಹುಡಾ ಮಾಜಿ ಅಧ್ಯಕ್ಷ ಲಲಾಟ್ ಮೂರ್ತಿ, ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಮುಖಂಡರಾದ ಕಿರಣ್, ಜಿ. ದೇವರಾಜೇಗೌಡ, ಯುವ ಮೋರ್ಚಾದ ಉಪಾಧ್ಯಕ್ಷ ಹರ್ಷಿತ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಮೀತ್ ಶೆಟ್ಟಿ, ಮಾದ್ಯಮ ಸಂಚಾಲಕ ಪ್ರೀತಿವರ್ಧನ್ ಇದ್ದರು.ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಪ್ರೀತಂ ಗೌಡ.