ಸಾರಾಂಶ
ಪತಿಯನ್ನು ಗುಂಡಿಟ್ಟು ಕೊಲ್ಲುವುದಾಗಿ ಬೆದರಿಸಿ ಜೆಡಿಎಸ್ ಪಕ್ಷದ ಜಿ.ಪಂ. ಸದಸ್ಯೆ ಮೇಲೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿರುವುದು ವಿಶೇಷ ತನಿಖಾ ದಳದ (ಎಸ್‌ಐಟಿ) ತನಿಖೆಯಲ್ಲಿ ರುಜುವಾತಾಗಿದೆ.
ಬೆಂಗಳೂರು : ಪತಿಯನ್ನು ಗುಂಡಿಟ್ಟು ಕೊಲ್ಲುವುದಾಗಿ ಬೆದರಿಸಿ ಜೆಡಿಎಸ್ ಪಕ್ಷದ ಜಿ.ಪಂ. ಸದಸ್ಯೆ ಮೇಲೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿರುವುದು ವಿಶೇಷ ತನಿಖಾ ದಳದ (ಎಸ್‌ಐಟಿ) ತನಿಖೆಯಲ್ಲಿ ರುಜುವಾತಾಗಿದೆ. ಆಘಾತಕಾರಿ ಸಂಗತಿಯೆಂದರೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಸರ್ಕಾರವು ಹಂಚಿಕೆ ಮಾಡಿದ್ದ ಅತಿಥಿ ಗೃಹದಲ್ಲಿ ಈ ಅತ್ಯಾಚಾರ ನಡೆದಿದೆ.
ಈ ಪ್ರಕರಣದೊಂದಿಗೆ, ಮಾಜಿ ಸಂಸದರ ವಿರುದ್ಧ ದಾಖಲಾಗಿದ್ದ ಮೂರು ಅತ್ಯಾಚಾರ ಪ್ರಕರಣಗಳು ಎಸ್‌ಐಟಿ ತನಿಖೆಯಲ್ಲಿ ಸಾಬೀತಾಗಿದ್ದು, ಈ ಕೃತ್ಯಗಳಿಗೆ ಪೂರಕವಾದ ಸಾಕ್ಷಿಗಳು ಪತ್ತೆಯಾಗಿವೆ ಎಂದು ಕೋರ್ಟ್‌ಗೆ ಎಸ್‌ಐಟಿ ಹೇಳಿದೆ.
ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಜಿ.ಪಂ. ಮಾಜಿ ಸದಸ್ಯೆ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ತನಿಖೆ ಪೂರ್ಣಗೊಳಿಸಿ ಶುಕ್ರವಾರ ಎಸ್ಐಟಿ ತನಿಖಾಧಿಕಾರಿ ಜಿ.ಶೋಭಾ ಆರೋಪಪಟ್ಟಿ ಸಲ್ಲಿಸಿದ್ದಾರೆ.
ತನ್ನ ಕಾಮತೃಷೆಗೆ ಸಂತ್ರಸ್ತೆ ಮೇಲೆ ಹಲವಾರು ಬಾರಿ ಅತ್ಯಾಚಾರ ಮಾಡಿದ್ದಲ್ಲದೆ ಆಗಾಗ ವಾಟ್ಸಾಪ್ ವೀಡಿಯೋ ಕಾಲ್‌ಗಳನ್ನು ಪ್ರಜ್ವಲ್ ಮಾಡುತ್ತಿದ್ದರು. ಈ ವೇಳೆ ಸಂತ್ರಸ್ತೆಗೆ ತಿಳಿಯದಂತೆ ನಗ್ನ ಪೋಟೋಗಳ ಸ್ಕ್ರೀನ್ ಶಾಟ್‌ಗಳನ್ನು ಅವರು ತೆಗೆದಿದ್ದರು. ತಾನು ಹೇಳಿದಂತೆ ಕೇಳದೇ ಇದ್ದರೆ ನಿನ್ನ ಗಂಡನನ್ನು ಕೊಲೆ ಮಾಡುತ್ತೇನೆ. ನಿನ್ನ ವೀಡಿಯೋಗಳನ್ನು ವೈರಲ್ ಮಾಡುತ್ತೇನೆ ಎಂದು ಬ್ಲಾಕ್ ಮೇಲ್ ಮಾಡಿ 2020ರ ಜನವರಿ-ಫೆಬ್ರವರಿಯಿಂದ 2023ರ ಡಿಸೆಂಬರ್‌ವರೆಗೆ ಹಲವಾರು ಬಾರಿ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯವನ್ನು ಪ್ರಜ್ವಲ್ ಎಸಗಿದ್ದಾರೆ ಎಂದು ಎಸ್‌ಐಟಿ ತಿಳಿಸಿದೆ.
ಆರೋಪಿಯು ಸಂಸದರಾಗಿ ಸಂವಿಧಾನಾತ್ಮಕ ಹುದ್ದೆಯಲ್ಲಿದ್ದು, ಒಬ್ಬ ಜವಾಬ್ದಾರಿಯುತ ಹಾಗೂ ಗೌರವಯುತವಾದ ಸ್ಥಾನದಿಂದ ಈ ಕೃತ್ಯ ಎಸಗಿದ್ದಾರೆ. ತನಿಖೆಯ ಕಾಲದಲ್ಲಿ ಸಂಗ್ರಹಿಸಿದ ತಾಂತ್ರಿಕ ವರದಿಗಳು, ತಜ್ಞರ ಪರೀಕ್ಷಾ ವರದಿಗಳಿಂದ ಆರೋಪಿಯು ಐಪಿಸಿ 376(2) (2), 506, 354(2) (1) (1), 354(2), 354(ಎ) ಆರೋಪ ಎಸಗಿರುವುದು ದೃಢಪಟ್ಟಿದೆ. ಆದರೆ ಅತ್ಯಾಚಾರದ ವೇಳೆ ಸಂತ್ರಸ್ತೆಯ ನಗ್ನ ದೇಹದ ವಿಡಿಯೋ ಮತ್ತು ನಗ್ನ ದೇಹದ ಫೋಟೊಗಳನ್ನು ಚೀತ್ರಿಕರಿಸಿಕೊಂಡಿದ್ದ ಮೊಬೈಲ್ ಬಗ್ಗೆ ಆರೋಪಿ ಮಾಹಿತಿ ನೀಡಿಲ್ಲ ಎಂದು ಆರೋಪ ಪಟ್ಟಿಯಲ್ಲಿ ಎಸ್‌ಐಟಿ ಉಲ್ಲೇಖಿಸಿದೆ.
ನಿನ್ನ ಗಂಡನನ್ನು ಮುಗಿಸಿಬಿಡುವೆ:
ಹಾಸನ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರಿಗೆ ಲೋಕೋಪಯೋಗಿ ಇಲಾಖೆಯಿಂದ ಹಂಚಿಕೆಯಾಗಿದ್ದ ಅತಿಥಿ ಗೃಹವನ್ನು ತಮ್ಮ ಗೃಹ ಕಚೇರಿಯನ್ನಾಗಿ ಆಗಿನ ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದರು. ಆ ವೇಳೆ ಹಾಸನ ಜಿಲ್ಲಾ ಪಂಚಾಯತ್‌ಗೆ ಜೆಡಿಎಸ್ ಪಕ್ಷದಿಂದ ಸಂತ್ರಸ್ತೆ ಸದಸ್ಯೆಯಾಗಿದ್ದರು.
2020ರ ಜನವರಿ-ಫೆಬ್ರವರಿ ಅವಧಿಯಲ್ಲಿ ಒಂದು ದಿನ ತಮ್ಮ ಕ್ಷೇತ್ರದ ವಿದ್ಯಾರ್ಥಿಗಳಿಗೆ ಬಿಸಿಎಂ ಹಾಸ್ಟೆಲ್‌ನಲ್ಲಿ ಸೀಟು ಕೊಡಿಸುವ ವಿಷಯಕ್ಕೆ ಪ್ರಜ್ವಲ್ ಅವರನ್ನು ಭೇಟಿ ಮಾಡಲು ಮಧ್ಯಾಹ್ನ ಸುಮಾರು 12.30ಕ್ಕೆ ಸಂತ್ರಸ್ತೆ ತೆರಳಿದ್ದರು. ಆಗ ಎಂಪಿ ಕ್ವಾರ್ಟರ್ಸ್‌ನ ಮೊದಲನೇ ಮಹಡಿಯ ಹಾಲ್‌ನಲ್ಲಿ ಕುಳಿತುಕೊಂಡಿರುವ ವೇಳೆ ಇತರರು ಭೇಟಿಯಾಗಲು ಬಂದಿದ್ದರು. ಅವರೆಲ್ಲ ತೆರಳಿದ ನಂತರ ಸಂತ್ರಸ್ತೆ ಒಬ್ಬರೇ ಇದ್ದಾಗ ಕೈಯನ್ನು ಹಿಡಿದು ಎಳೆದು ಮೊದಲನೇ ಮಹಡಿಯ ರೂಮ್‌ಗೆ ಕರೆದೊಯ್ದರು. ಬಳಿಕ ಬಾಗಿಲು ಚಿಲಕ ಹಾಕಿ ಮೈಮುಟ್ಟಿ ಬಟ್ಟೆ ಬಿಚ್ಚುವಂತೆ ಪ್ರಜ್ವಲ್ ಒತ್ತಾಯಿಸಿದ್ದರು. ಈ ಮಾತಿಗೆ ನಿರಾಕರಿಸಿದಾಗ ನನ್ನ ಬಳಿ ಗನ್ ಇದೆ. ನಾನು ಹೇಳಿದಂತೆ ಕೇಳದೆ ಹೋದರೆ ನಿನ್ನ ಗಂಡನನ್ನು ಮುಗಿಸಿ ಬಿಡುತ್ತೇನೆಂದು ಬೆದರಿಸಿದರು. ಆಗ ಬೆತ್ತಲೆ ದೇಹವನ್ನು ಮೊಬೈಲ್‌ನಿಂದ ವಿಡಿಯೋ ಚಿತ್ರೀಕರಣ ಮಾಡಲು ಮುಂದಾದಾಗ ಸಂತ್ರಸ್ತೆ ಕಣ್ಣೀರಿಟ್ಟಿದ್ದರು. ನೀನು ಅಳಬಾರದು ನಗಬೇಕು ಎಂದು ಹೇಳಿ ಸಂತ್ರಸ್ತೆ ಮೇಲೆ ಪ್ರಜ್ವಲ್ ಅತ್ಯಾಚಾರ ಮಾಡಿದ್ದರು.
ವಿಡಿಯೋ ಬಹಿರಂಗಪಡಿಸುವ ಬೆದರಿಕೆ:
ಇದಾದ ಎರಡು ದಿನಗಳ ನಂತರ ಸಂತ್ರಸ್ತೆಗೆ ರಾತ್ರಿ ಸುಮಾರು 7.30ಕ್ಕೆ ಕರೆ ಮಾಡಿದ್ದ ಪ್ರಜ್ವಲ್, ಎರಡು ದಿನದ ಹಿಂದೆ ಮಾಡಿದ್ದ ವೀಡಿಯೋ ಡಿಲೀಟ್ ಆಗಿಲ್ಲ. ಈಗ ಐದು ನಿಮಿಷದಲ್ಲಿ ನೀನು ಎಂಪಿ ಕ್ವಾರ್ಟರ್ಸ್‌ಗೆ ಬರದೆ ಇದ್ದರೆ ನಿನ್ನ ವೀಡಿಯೋವನ್ನು ಬಹಿರಂಗ ಮಾಡುತ್ತೇನೆ. ಇದರಲ್ಲಿ ನನ್ನ ಮುಖ ಕಾಣುತ್ತಿಲ್ಲ. ನಿನ್ನ ಮುಖ ಕಾಣುತ್ತಿದೆ ಎಂದು ಬೆದರಿಕೆ ಹಾಕಿದ್ದರು. ಆಗ ಬ್ಲ್ಯಾಕ್‌ಮೇಲ್‌ಗೆ ಹೆದರಿ ಕ್ವಾರ್ಟರ್ಸ್‌ಗೆ ಹೋದಾಗ ಸಂತ್ರಸ್ತೆ ಮೇಲೆ ಮತ್ತೆ ಪ್ರಜ್ವಲ್ ಅತ್ಯಾಚಾರ ಎಸಗಿದ್ದರು.
ಆಗ ನಾನು ನಿನಗೆ ವಾಟ್ಸಾಪ್ ವೀಡಿಯೋ ಕಾಲ್ ಮಾಡಿದಾಗ ತಕ್ಷಣ ಕರೆ ಸ್ವೀಕರಿಸಿ, ನಾನು ಹೇಳಿದಂತೆ ವೀಡಿಯೋ ಕಾಲ್‌ನಲ್ಲಿ ನಡೆದುಕೊಳ್ಳಬೇಕು. ನೀನು ನನ್ನ ಮಾತನ್ನು ಕೇಳದೇ ಇದ್ದರೆ ನಿನ್ನ ಗಂಡನಿಗೆ ತೊಂದರೆ ಮಾಡುತ್ತೇನೆ ಎಂದು ಧಮ್ಕಿ ಹಾಕಿದ್ದರು.
ಗುಪ್ತಾಂಗ ತೋರಿಸುವಂತೆ ಕಾಡುತ್ತಿದ್ದ ಪ್ರಜ್ವಲ್:
ತಮ್ಮ ಸೋಷಿಯಲ್ ಮೀಡಿಯಾ ನಿರ್ವಹಿಸುತ್ತಿದ್ದ ಸಿಬ್ಬಂದಿ ಹೆಸರಿನಲ್ಲಿ ಪ್ರಜ್ವಲ್ ಸಿಮ್ ಖರೀದಿಸಿದ್ದ. ಈ ಸಿಮ್ ಬಳಸಿಕೊಂಡು ಸಂತ್ರಸ್ತೆಗೆ ಪದೇ ಪದೇ ಕರೆ ಮಾಡಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು ಗುಪ್ತಾಂಗ ತೋರಿಸುವಂತೆ ಪೀಡಿಸುತ್ತಿದ್ದ ಪ್ರಜ್ವಲ್, ಆ ವೇಳೆ ಸಂತ್ರಸ್ತೆಗೆ ಗೊತ್ತಾಗದಂತೆ ನಗ್ನ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದರು ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.
ನಾನು ಹೇಳಿದ ಒಳ ಉಡುಪು ಧರಿಸಬೇಕು:
ವಾಟ್ಸಪ್ ವೀಡಿಯೋ ಕಾಲ್‌ನಲ್ಲಿ ಸಂತ್ರಸ್ತೆಯ ನಗ್ನ ಹಾಗೂ ಅರೆನಗ್ನ ಫೋಟೋಗಳ ಸ್ಟೀನ್ ಶಾಟ್‌ಗಳನ್ನು ತೆಗೆದುಕೊಳ್ಳುವಾಗ ಆರೋಪಿಯು, ತನ್ನ ಗುರುತನ್ನು ಮರೆಮಾಚುವ ಉದ್ದೇಶದಿಂದ ಪೂರ್ಣ ಮುಖವನ್ನು ಕಾಣಿಸದೇ, ತನ್ನ ಕಣ್ಣುಗಳು ಹಾಗು ಹುಬ್ಬುಗಳ ಮೇಲ್ಬಾಗ ಮಾತ್ರ ಕಾಣಿಸುವಂತೆ ಸ್ಟೀನ್ ಶಾಟ್‌ಗಳನ್ನು ತೆಗೆದುಕೊಳ್ಳುವುದನ್ನು ಚಾಳಿ ಮಾಡಿಕೊಂಡಿದ್ದರು. ಈ ವೇಳೆ ತಾನು ಹೇಳಿದ ರೀತಿಯ ಬಟ್ಟೆ ಹಾಗೂ ಒಳ ಉಡುಪುಗಳನ್ನು ಧರಿಸಬೇಕು ಎಂದು ತಾಕೀತು ಮಾಡಿದ್ದರು. ಅಲ್ಲದೆ ತಾನು ಕರೆ ಮಾಡುವ ಯಾವ ನಂಬರ್‌ಗಳನ್ನೂ ಸೇವ್ ಮಾಡಿಕೊಳ್ಳಬಾರದು ಎಂದು ಸಂತ್ರಸ್ತೆಗೆ ಮಾಜಿ ಸಂಸದರು ಸೂಚಿಸಿದ್ದರು.
ಮನೆಯಲ್ಲೂ ಅತ್ಯಾಚಾರ ಎಸಗಿದ್ದ ಪ್ರಜ್ವಲ್:
2020ರ ಜೂನ್‌ನಲ್ಲಿ ಒಂದು ದಿನ ಮಧ್ಯಾಹ್ನ ತಮ್ಮ ಹೊಳೆನರಸೀಪುರದ ಮನೆಗೆ ಸಂತ್ರಸ್ತೆಯನ್ನು ಪ್ರಜ್ವಲ್ ಕರೆಸಿಕೊಂಡಿದ್ದರು. ಅಂತೆಯೇ ಮನೆಗೆ ಹೋದಾಗ ಸಂತ್ರಸ್ತೆಯನ್ನು ರೂಮ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದರು. ಆಗಲೂ ವಿಡಿಯೋ ಮಾಡಿಕೊಂಡ ಪ್ರಜ್ವಲ್, ಈ ಬಗ್ಗೆ ಬಾಯ್ಬಿಟ್ಟರೆ ನಿನ್ನ ವಿಡಿಯೋಗಳನ್ನು ಬಹಿರಂಗಪಡಿಸುತ್ತೇನೆ ಎಂದು ಬೆದರಿಸಿದ್ದರು.
ಲಿಂಗಾಯಿತ ಸ್ವಾಮೀಜಿ ಕಾರ್ಯಕ್ರಮ ಮುಗಿಸಿ ರೇಪ್:
2022ರ ಅಕ್ಟೋಬರ್‌ನಲ್ಲಿ ಬೇಲೂರಿನಲ್ಲಿ ವೀರಶೈವ ಸಮಾಜದ ಸ್ವಾಮೀಜಿಯೊಬ್ಬರ ದಸರಾ ಉತ್ಸವ ಕಾರ್ಯಕ್ರಮದಲ್ಲಿ ತಮ್ಮ ಪತಿ ಜತೆ ಸಂತ್ರಸ್ತೆ ಪಾಲ್ಗೊಂಡಿದ್ದರು. ಆ ಕಾರ್ಯಕ್ರಮಕ್ಕೆ ಪ್ರಜ್ವಲ್ ಸಹ ಬಂದಿದ್ದರು. ಈ ಉತ್ಸವದ ಉಸ್ತುವಾರಿಯನ್ನು ಆಗಿನ ಬೇಲೂರು ಶಾಸಕರು ವಹಿಸಿದ್ದರು. ಈ ಸಮಾರಂಭ ಮುಗಿಸಿ ತಮ್ಮ ಆಪ್ತ ಸಹಾಯಕ ಹಾಗೂ ಅಂಗ ರಕ್ಷಕರ ಜತೆ ಹೊರಟ ಪ್ರಜ್ವಲ್ ಅವರು, ಕಾರ್ಯಕ್ರಮದಲ್ಲಿದ್ದ ಸಂತ್ರಸ್ತೆಗೆ ರಾತ್ರಿ 10ರಿಂದ 11.50ರ ಅವಧಿಯಲ್ಲಿ 12 ಬಾರಿ ಕರೆ ಮಾಡಿ ನೀನು ಈ ಕೂಡಲೇ ಕ್ವಾರ್ಟರ್ಸ್‌ಗೆ ಬಾರದೆ ಹೋದರೆ ಪರಿಣಾಮ ನೆಟ್ಟಗಿರಲ್ಲ ಎಂದು ಹೆದರಿಸಿದ್ದರು. ಈ ಬ್ಲ್ಯಾಕ್ ಮೇಲ್‌ಗೆ ಬೆದರಿದ ಸಂತ್ರಸ್ತೆ, ಎಂಪಿ ಕ್ವಾರ್ಟರ್ಸ್‌ಗೆ ಪ್ರಜ್ವಲ್‌ಗೂ ಮುನ್ನವೇ ತೆರಳಿದ್ದರು. ಆಗ ಸಂತ್ರಸ್ತೆ ಮೇಲೆ ಪ್ರಜ್ವಲ್ ಅತ್ಯಾಚಾರ ಎಸಗಿದ್ದರು. ಈ ಬಗ್ಗೆ ಅಂದಿನ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಶಾಸಕರು ಸಾಕ್ಷಿ ಹೇಳಿಕೆ ಕೊಟ್ಟಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
1691 ಪುಟಗಳ ಜಾರ್ಜ್‌ಶೀಟ್
ಜಿಪಂ ಮಾಜಿ ಸದಸ್ಯೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ವಿರುದ್ಧ 1691 ಪುಟಗಳ ಆರೋಪ ಪಟ್ಟಿಯನ್ನು ಎಸ್ಐಟಿ ಸಲ್ಲಿಸಿದೆ. ಇದರಲ್ಲಿ ಸಂತ್ರಸ್ತೆ ಪತಿ, ಮಾಜಿ ಸಂಸದರ ಆಪ್ತ ಸಹಾಯಕ, ಅಂಗರಕ್ಷಕರು, ಅತಿಥಿ ಗೃಹದ ಕೆಲಸಗಾರರು ಹಾಗೂ ಬೇಲೂರಿನ ಜೆಡಿಎಸ್ ಪಕ್ಷದ ಮಾಜಿ ಶಾಸಕರು ಸೇರಿದಂತೆ 120 ಮಂದಿ ಸಾಕ್ಷಿ ಹೇಳಿಕೆಗಳು ದಾಖಲಾಗಿವೆ. ಹಾಗೆಯೇ ವೈದ್ಯಕೀಯ ಹಾಗೂ ತಾಂತ್ರಿಕ ವರದಿಗಳನ್ನು ಲಗತ್ತಿಸಲಾಗಿದೆ ಎಂದು ತಿಳಿದು ಬಂದಿದೆ.