ಚುನಾವಣೆ ಮುಗಿದ ಬಳಿ ಪ್ರಜ್ವಲ್‌ ರಾಜ್ಯಕ್ಕೆ ವಾಪಸ್‌?

| Published : May 07 2024, 01:12 AM IST / Updated: May 07 2024, 08:06 AM IST

Prajwal Revanna
ಚುನಾವಣೆ ಮುಗಿದ ಬಳಿ ಪ್ರಜ್ವಲ್‌ ರಾಜ್ಯಕ್ಕೆ ವಾಪಸ್‌?
Share this Article
  • FB
  • TW
  • Linkdin
  • Email

ಸಾರಾಂಶ

ಈಗ ಬಂದರೆ ಮತದಾನದ ಮೇಲೆ ಅಡ್ಡಪರಿಣಾಮ ಭೀತಿ ಹಿನ್ನೆಲೆಯಲ್ಲಿ ಇನ್ನೆರೆಡು ದಿನಳಲ್ಲಿ ವಿದೇಶದಿಂದ ವಾಪಸ್‌ ಬರುವ ಸಂಭವವಿದೆ.

 ಬೆಂಗಳೂರು :  ಅಶ್ಲೀಲ ವಿಡಿಯೊಗಳು ವೈರಲ್‌ ಆದ ಬೆನ್ನಲ್ಲೇ ವಿದೇಶಕ್ಕೆ ತೆರಳಿರುವ ಸಂಸದ ಪ್ರಜ್ವಲ್‌ ರೇವಣ್ಣ ಇನ್ನೆರಡು ದಿನಗಳಲ್ಲಿ ರಾಜ್ಯಕ್ಕೆ ವಾಪಸ್‌ ಆಗುವ ನಿರೀಕ್ಷೆಯಿದೆ.

ಇತ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ತಂದೆ ಎಚ್‌.ಡಿ.ರೇವಣ್ಣ ಅವರನ್ನು ಎಸ್‌ಐಟಿ ಬಂಧಿಸಿದೆ. ಇದರ ಬೆನ್ನಲ್ಲೇ ಪ್ರಜ್ವಲ್‌ ವಿದೇಶದಿಂದ ರಾಜ್ಯಕ್ಕೆ ಮರಳಲಿದ್ದಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿತ್ತು. ಆದರೆ, ಮಂಗಳವಾರ ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರದಲ್ಲಿ ಪ್ರಜ್ವಲ್‌ ತಮ್ಮ ಪ್ರಯಾಣವನ್ನು ಮುಂದಕ್ಕೆ ಹಾಕಿಕೊಂಡಿದ್ದಾರೆ. ಮಂಗಳವಾರ ಚುನಾವಣೆ ಮುಗಿದ ಬಳಿಕ ರಾಜ್ಯಕ್ಕೆ ವಾಪಸ್‌ ಆಗಬಹುದು ಎನ್ನಲಾಗುತ್ತಿದೆ.

ಪ್ರಜ್ವಲ್‌ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪದಡಿ ಪ್ರತ್ಯೇಕವಾಗಿ ಎರಡು ಎಫ್‌ಐಆರ್‌ ದಾಖಲಾಗಿವೆ. ಪ್ರಜ್ವಲ್‌ ಇದ್ದಾರೆ ಎನ್ನಲಾದ ಅಶ್ಲೀಲ ವಿಡಿಯೋ ಸಂಬಂಧ ಎಸ್‌ಐಟಿ ತನಿಖೆ ಕೈಗೊಂಡಿದ್ದು, ಎರಡು ಬಾರಿ ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್‌ಗೆ ನೋಟಿಸ್‌ ನೀಡಿತ್ತು. ಆದರೆ, ಪ್ರಜ್ವಲ್‌ ವಿದೇಶದಲ್ಲಿ ಇರುವುದರಿಂದ ಗೈರು ಹಾಜರಾಗಿದ್ದಾರೆ. ಇದರ ಬೆನ್ನಲ್ಲೇ ಎಸ್ಐಟಿ ಲುಕೌಟ್‌ ನೋಟಿಸ್‌ ಹಾಗೂ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೊಳಿಸಿದೆ.

ಏರ್‌ಪೋರ್ಟ್‌ನಲ್ಲಿ ಎಸ್ಐಟಿ ಟೀಂ ಮೊಕ್ಕಾಂ:

ಇನ್ನು ಪ್ರಜ್ವಲ್‌ ರೇವಣ್ಣ ತಂದೆಯ ಬಂಧನದ ಬಳಿಕ ವಿದೇಶದಿಂದ ರಾಜ್ಯಕ್ಕೆ ವಾಪಾಸಾಗುವ ನಿರೀಕ್ಷೆಯಲ್ಲಿ ಎಸ್‌ಐಟಿ ಅಧಿಕಾರಿಗಳ ತಂಡ ಕಳೆದ ಎರಡು ದಿನಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀಡುಬಿಟ್ಟಿದೆ. ವಿದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸಿದೆ. ಅಂತೆಯೆ ಗೋವಾ, ಚೆನ್ನೈ, ಕೊಚ್ಚಿನ್‌ ಸೇರಿದಂತೆ ನೆರೆಯ ರಾಜ್ಯಗಳ ವಿಮಾನ ನಿಲ್ದಾಣದ ವಲಸೆ ಅಧಿಕಾರಿಗಳಿಗೂ ಆರೋಪಿ ಪ್ರಜ್ವಲ್‌ ಬಗ್ಗೆ ಮಾಹಿತಿ ನೀಡಿದೆ. ಪ್ರಜ್ವಲ್‌ ಯಾವಾಗ ವಾಪಾಸ್‌ ಆದರೂ ಎಸ್‌ಐಟಿ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲೇ ವಶಕ್ಕೆ ಪಡೆಯಲಿದ್ದಾರೆ.