ಲೈಂಗಿಕ ವಿಡಿಯೋದಲ್ಲಿರುವ ಪುರುಷ ಧ್ವನಿ ಪತ್ತೆಹಚ್ಚಲು ಟೆಸ್ಟ್‌ ಮಾಡಲಾಗಿದ್ದು, ಪ್ರಜ್ವಲ್‌ಗೆ ಧ್ವನಿ ಪರೀಕ್ಷೆ ನಡೆಸಿರುವ ಬಗ್ಗೆ ಎಸ್‌ಐಟಿ ಸಲ್ಲಿಸಿರುವ ರಿಮ್ಯಾಂಡ್‌ ಅಪ್ಲಿಕೇಷನ್‌ನಲ್ಲಿ ಮಾಹಿತಿ ಒದಗಿಸಿದೆ.

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಹಾಸನ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ವಿಶೇಷ ತನಿಖಾ ದಳವು (ಎಸ್‌ಐಟಿ) ಧ್ವನಿ ಪರೀಕ್ಷೆಗೊಳಪಡಿಸಿದೆ.

ಪ್ರಜ್ವಲ್ ಅವರಿಂದ ಸಂಗ್ರಹಿಸಲಾದ ಧ್ವನಿ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌)ಕ್ಕೆ ಎಸ್‌ಐಟಿ ರವಾನಿಸಿದ್ದು, ಈ ಬಗ್ಗೆ ಎಫ್ಎಸ್‌ಎಲ್‌ ವರದಿ ಆಧರಿಸಿ ಲೈಂಗಿಕ ವಿಡಿಯೋಗಳಲ್ಲಿರುವ ಅಪರಿಚಿತ ಪುರುಷನ ದನಿ ಬಗ್ಗೆ ಸ್ಪಷ್ಟವಾಗಲಿದೆ. ಅಲ್ಲದೆ ಪ್ರಜ್ವಲ್ ಅವರಿಗೆ ಧ್ವನಿ ಪರೀಕ್ಷೆ ಸಂಬಂಧ ಮಾದರಿ ಸಂಗ್ರಹಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿ ಎಸ್‌ಐಟಿ ಉಲ್ಲೇಖಿಸಿದೆ.

ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ತುಂಬಿದ್ದ ಪೆನ್‌ ಡ್ರೈವ್ ಬಹಿರಂಗವಾಗಿತ್ತು. ಈ ಪೆನ್‌ ಡ್ರೈವ್‌ನಲ್ಲಿ ಪತ್ತೆಯಾದ ಕೆಲ ಅಶ್ಲೀಲ ವಿಡಿಯೋಗಳಲ್ಲಿ ಪುರುಷ ಧ್ವನಿ ಕೇಳಿ ಬಂದಿತ್ತು. ಆದರೆ ಪುರುಷನ ಮುಖಚಹರೆ ಕಂಡು ಬಂದಿರಲಿಲ್ಲ. ಹೀಗಾಗಿ ಆ ಪುರುಷ ಧ್ವನಿ ಬಗ್ಗೆ ಖಚಿತಪಡಿಸಿಕೊಳ್ಳಲು ಪ್ರಜ್ವಲ್ ಅವರಿಗೆ ಎಸ್‌ಐಟಿ ಧ್ವನಿ ಪರೀಕ್ಷೆ ನಡೆಸಿದೆ. ಈ ಅಶ್ಲೀಲ ವಿಡಿಯೋದ ಪುರುಷ ಧ್ವನಿಗೂ ಪ್ರಜ್ವಲ್ ಅವರ ಧ್ವನಿಗೂ ಹೋಲಿಕೆಯಾದರೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಸ್‌ಐಟಿಗೆ ಮಹತ್ವದ ವೈದ್ಯಕೀಯ ಪುರಾವೆ ಸಿಗಲಿದೆ ಎನ್ನಲಾಗಿದೆ.