ಸಾರಾಂಶ
ಪ್ರಕಾಶ್ ಕೊಡೆಂಕಿರಿ ಅವರು ಹಲವು ವರ್ಷಗಳಿಂದ ಪುಸ್ತಕ ಪ್ರಕಾಶನ, ಸಂಚಾರಿ ಪುಸ್ತಕ ಮಳಿಗೆ, ಸದಭಿರುಚಿಯ ಪುಸ್ತಕಗಳ ಪ್ರಕಟಣೆ ಮಾಡಿಕೊಂಡು ಬಂದಿರುತ್ತಾರೆ. ಅಲ್ಲದೆ ೨೦೦೪ರಲ್ಲಿ ‘ಪ್ರಥಮ ಗೃಹ ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು ತನ್ನ ಮನೆಯಲ್ಲೇ, ಸ್ವ-ವೆಚ್ಚದಲ್ಲಿ ಏರ್ಪಡಿಸಿ ಸಾಹಿತ್ಯಾಸಕ್ತರಿಗೆ ಮೇಲ್ಪಂಕ್ತಿ ಹಾಕಿದ್ದರು.
ಕನ್ನಡಪ್ರಭ ವಾರ್ತೆ ಪುತ್ತೂರು
ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯ ಪರಿಷತ್ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರು ರಾಷ್ಟ್ರೋತ್ಥಾನ ಪರಿಷತ್‌ನ ಕೇಶವಶಿಲ್ಪ ಸಭಾಂಗಣದಲ್ಲಿ ನಡೆದ ‘ಕನ್ನಡ ಪುಸ್ತಕ ಹಬ್ಬ’ ಸಮಾರೋಪ ಸಮಾರಂಭದಲ್ಲಿ ಸಾಹಿತ್ಯ ಪ್ರಚಾರಕ ಪುತ್ತೂರಿನ ಜ್ಞಾನ ಗಂಗಾ ಪುಸ್ತಕ ಮಳಿಗೆಯ ಪ್ರಕಾಶ್ ಕುಮಾರ್ ಕೊಡೆಂಕಿರಿ ಅವರಿಗೆ ಭಾನುವಾರ ‘ಕನ್ನಡ ಪುಸ್ತಕ ಹಬ್ಬ’ ಪುರಸ್ಕಾರ ನೀಡಿ ಗೌರವಿಸಲಾಯಿತು. ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಕಾಶ್ ಕೊಡೆಂಕಿರಿ ಅವರಿಗೆ ಗೌರವ ಪುರಸ್ಕಾರ ಪ್ರದಾನ ಮಾಡಿದರು. ಪದ್ಮಶ್ರೀ ಪುರಸ್ಕೃತ ಮನೋವೈದ್ಯ ಸಿ.ಆರ್. ಚಂದ್ರಶೇಖರ್ ಅತಿಥಿಯಾಗಿ ಭಾಗವಹಿಸಿದ್ದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಕಾಶ್ ಕೊಡೆಂಕಿರಿ, ಜೀವನದಲ್ಲಿ ಆಸಕ್ತಿಗಳನ್ನು ಸಕ್ರಿಯಗೊಳಿಸಿದಾಗ ಅದು ಇತರರಿಗೆ ‘ಹುಚ್ಚು’ ಎಂದೆನಿಸಿಕೊಳ್ಳುತ್ತದೆ. ಇಂತಹ ಹುಚ್ಚುಗಳೇ ಬದುಕಿಗೆ ಸುಭಗತನವಾಗುತ್ತದೆ. ಓದುವ ಆಸಕ್ತಿ ಬೆಳೆಯುತ್ತದೆ ಎಂದು ಹೇಳಿದರು. ಪ್ರಕಾಶ್ ಕೊಡೆಂಕಿರಿ ಅವರು ಹಲವು ವರ್ಷಗಳಿಂದ ಪುಸ್ತಕ ಪ್ರಕಾಶನ, ಸಂಚಾರಿ ಪುಸ್ತಕ ಮಳಿಗೆ, ಸದಭಿರುಚಿಯ ಪುಸ್ತಕಗಳ ಪ್ರಕಟಣೆ ಮಾಡಿಕೊಂಡು ಬಂದಿರುತ್ತಾರೆ. ಅಲ್ಲದೆ ೨೦೦೪ರಲ್ಲಿ ‘ಪ್ರಥಮ ಗೃಹ ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು ತನ್ನ ಮನೆಯಲ್ಲೇ, ಸ್ವ-ವೆಚ್ಚದಲ್ಲಿ ಏರ್ಪಡಿಸಿ ಸಾಹಿತ್ಯಾಸಕ್ತರಿಗೆ ಮೇಲ್ಪಂಕ್ತಿ ಹಾಕಿದ್ದರು.