ಪ್ರಕಾಶ್ ಶೆಟ್ಟಿ ‘ನೆರವು’ ಕಾರ್ಯ ಸಮಾಜಕ್ಕೆ ಮಾದರಿ: ಡಾ. ತೇಜಸ್ವಿನಿ ಅನಂತಕುಮಾರ್

| Published : Dec 26 2024, 01:01 AM IST

ಪ್ರಕಾಶ್ ಶೆಟ್ಟಿ ‘ನೆರವು’ ಕಾರ್ಯ ಸಮಾಜಕ್ಕೆ ಮಾದರಿ: ಡಾ. ತೇಜಸ್ವಿನಿ ಅನಂತಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಈ ವರ್ಷ ಒಟ್ಟು 3 ಸಾವಿರ ಕುಟುಂಬಗಳಿಗೆ 6 ಕೋಟಿ ರು.ಗೂ ಅಧಿಕ ನೆರವು ವಿತರಿಸಲಾಗಿದ್ದು, ಇದರಿಂದ ಸುಮಾರು 15 ಸಾವಿರ ಮಂದಿಗೆ ಪ್ರಯೋಜನವಾಗಿದೆ. ನೆರವು ಕೋರಿ ಬಂದ ಅರ್ಜಿಗಳನ್ನು ಪರಿಶೀಲಿಸಿ, ಅವಶ್ಯ ಹಿಮ್ಮಾಹಿತಿಗಳನ್ನು ಪಡೆದು ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಎಲ್ಲರಿಗೂ ಈ ಕಾರ್ಯಕ್ರಮದಲ್ಲಿ ನೆರವು ಒದಗಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಸಮಾಜದಲ್ಲಿರುವ ಅಶಕ್ತರನ್ನು ತಾವೇ ಹುಡುಕಿಕೊಂಡು ನೆರವು ನೀಡುವ ಪ್ರಕಾಶ್‌ ಶೆಟ್ಟಿ ಕಾರ್ಯ ಸಮಾಜಕ್ಕೆ ಮಾದರಿ. ಎಲ್ಲರೂ ವೈಯಕ್ತಿಕ ನೆಲೆಯಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಕೆಲಸ ಆಗಲಿ ಎಂದು ಬೆಂಗಳೂರಿನ ಅದಮ್ಯ ಚೇತನ ಫೌಂಡೇಶನ್‌ ಅಧ್ಯಕ್ಷೆ ಹಾಗೂ ಸಹ-ಸಂಸ್ಥಾಪಕಿ ಡಾ. ತೇಜಸ್ವಿನಿ ಅನಂತಕುಮಾರ್ ಹೇಳಿದ್ದಾರೆ.

ಎಂಆರ್‌ಜಿ ಗ್ರೂಪ್‌ ಚೇರ್ಮನ್‌ ಡಾ.ಕೆ. ಪ್ರಕಾಶ್‌ ಶೆಟ್ಟಿ ನೇತೃತ್ವದಲ್ಲಿ 2019ರಿಂದ ಆಯೋಜಿಸಿಕೊಂಡು ಬಂದಿರುವ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆ ‘ನೆರವು’ ಸಹಾಯಹಸ್ತ ಪ್ರದಾನ ಕಾರ್ಯಕ್ರಮವನ್ನು ಬುಧವಾರ ಸಂಜೆ ಗೋಲ್ಡ್ ಫಿಂಚ್ ಸಿಟಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಹಿರಿಯರು ನಡೆದು ಬಂದ ದಾರಿಯನ್ನು ನೋಡಿ ಕಲಿಯಬೇಕು ಎಂದ ತೇಜಸ್ವಿನಿ, ಇಲ್ಲಿ ಆರ್ಥಿಕ ಸಹಾಯ ಪಡೆದಿರುವ ಮಕ್ಕಳು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಲಿ ಎಂದು ಆಶಿಸಿದರು.

ಎಂ.ಆರ್.ಜಿ.ಗ್ರೂಪ್ ಚೇರ್ಮನ್ ಡಾ.ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ, ನನ್ನ 60ನೇ ವರ್ಷದ ಹುಟ್ಟುಹಬ್ಬದ ಸಂದರ್ಭ ಸಮಾಜಕ್ಕೆ ನೆರವು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಂದಿನಿಂದ ನಿರಂತರವಾಗಿ ಈ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದೇವೆ ಎಂದರು.

ಮೊದಲ ವರ್ಷದಲ್ಲಿ 1.25 ಕೋಟಿ ರು. ನೆರವು ನೀಡಿದ್ದು, ಇಂದು ಅದರ ಮೊತ್ತ 6 ಕೋಟಿ ರು. ಗಡಿ ದಾಟಿದೆ. ಇಂತಹ ಕಾರ್ಯಕ್ರಮ ಇಂದು ಸಹಾಯ ಪಡೆದ ಕೈಗಳಿಗೆ ಸ್ಫೂರ್ತಿಯಾಗಬೇಕು. ಮುಂದೊಂದು ದಿನ ಅವರು ಕೂಡ ಸಮಾಜದಲ್ಲಿ ಒಂದಷ್ಟು ಮಂದಿಗೆ ನೆರವು ನೀಡಲು ಮುಂದೆ ಬರಬೇಕು ಎಂದು ಹೇಳಿದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಮಾತನಾಡಿ, ಹುಟ್ಟುವಾಗ ಶ್ರೀಮಂತಿಕೆ ಇಲ್ಲದಿದ್ದರೂ ತಮ್ಮ ಕಾರ್ಯ ಸಾಧನೆಯಿಂದ ಹಂತ ಹಂತವಾಗಿ ಯಶಸ್ವಿ ಹೊಟೇಲ್‌ ಉದ್ಯಮಿಯಾಗಿ ಗುರುತಿಸಿಕೊಂಡು ಬಂದಿರುವ ಪ್ರಕಾಶ್ ಶೆಟ್ಟಿ ಅವರ ವ್ಯಕ್ತಿತ್ವ ಎಲ್ಲರಿಗೆ ಮಾದರಿ. ಅವರ ದಾನ- ಧರ್ಮದ ಸಮಾಜಮುಖಿ ಕಾರ್ಯ ಇದೇ ರೀತಿ ಮುಂದುವರಿಯಲಿ ಎಂದು ಹೇಳಿದರು.ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಪ್ರಕಾಶ್ ಶೆಟ್ಟಿ ಅವರ ಇಂತಹ ಪುಣ್ಯ ಕಾರ್ಯ ಅತ್ಯಂತ ಅಪರೂಪ ಎಂದರು. ಬಳಿಕ ಶಿಕ್ಷಣ, ಮನೆ ನಿರ್ಮಾಣ, ವೈದ್ಯಕೀಯ ಚಿಕಿತ್ಸೆ, ವಿಶೇಷ ಚೇತನ ಮಕ್ಕಳು ಹಾಗೂ ಸಾಮಾಜಿಕ ಸಂಘಟನೆಗಳಿಗೆ ‘ನೆರವು’ ಸಹಾಯಹಸ್ತವನ್ನು ವಿತರಿಸಲಾಯಿತು. ಅನುಷ್ಕಾ ಶೆಟ್ಟಿ ನಿರೂಪಿಸಿದರು.

6 ಕೋಟಿ ರು.ಗೂ ಅಧಿಕ ನೆರವು ವಿತರಣೆಈ ವರ್ಷ ಒಟ್ಟು 3 ಸಾವಿರ ಕುಟುಂಬಗಳಿಗೆ 6 ಕೋಟಿ ರು.ಗೂ ಅಧಿಕ ನೆರವು ವಿತರಿಸಲಾಗಿದ್ದು, ಇದರಿಂದ ಸುಮಾರು 15 ಸಾವಿರ ಮಂದಿಗೆ ಪ್ರಯೋಜನವಾಗಿದೆ. ನೆರವು ಕೋರಿ ಬಂದ ಅರ್ಜಿಗಳನ್ನು ಪರಿಶೀಲಿಸಿ, ಅವಶ್ಯ ಹಿಮ್ಮಾಹಿತಿಗಳನ್ನು ಪಡೆದು ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಎಲ್ಲರಿಗೂ ಈ ಕಾರ್ಯಕ್ರಮದಲ್ಲಿ ನೆರವು ಒದಗಿಸಲಾಯಿತು.