ನಗರದ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಭಾನುವಾರ ಅಧ್ಯಕ್ಷ ಸಹಕಾರ ರತ್ನ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆಯಲ್ಲಿ ಜರಗಿತು. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮತ್ತು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಭೆಯನ್ನು ಉದ್ಘಾಟಿಸಿದರು.

ಉಡುಪಿ: ನಗರದ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಭಾನುವಾರ ಅಧ್ಯಕ್ಷ ಸಹಕಾರ ರತ್ನ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆಯಲ್ಲಿ ಜರಗಿತು. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮತ್ತು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಭೆಯನ್ನು ಉದ್ಘಾಟಿಸಿದರು.

ಸಂಘದ ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ವಿ. ಶೇರಿಗಾರ್ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ವರದಿ ಸಾಲಿನ ಅಂತ್ಯಕ್ಕೆ ಸಂಘವು 658.80 ಕೋಟಿ ರು. ಠೇವಣಿ ಮತ್ತು 533.96 ಕೋಟಿ ರು. ಹೊರಬಾಕಿ ಹೊಂದಿದೆ, ಸುಮಾರು 4,089 ಕೋಟಿ ರು. ವಹಿವಾಟು ನಡೆಸಿದ್ದು, 15.09 ಕೋಟಿ ರು. ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.15 ಡಿವಿಡೆಂಡ್ ನೀಡಲಾಗುತ್ತದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಜಯಕರ ಶೆಟ್ಟಿ ಅವರು, ಸತತ 2 ಬಾರಿ ರಾಷ್ಟ್ರಮಟ್ಟದ ಪ್ರಶಸ್ತಿ ಹಾಗೂ 9 ಬಾರಿ ರಾಜ್ಯಮಟ್ಟದ ಪ್ರಶಸ್ತಿ ಪಡೆದಿರುವ ಸಂಘಕ್ಕೆ, 2025-26ನೇ ಸಾಲಿನ ಪ್ರಶಸ್ತಿಯೂ ಸೇರಿ ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಸತತ 20ನೇ ಬಾರಿ ಸಾಧನಾ ಪ್ರಶಸ್ತಿ ಗಳಿಸಿದೆ. ಅಲ್ಲದೇ ರಾಜ್ಯಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಸಂಘಕ್ಕೆ ಸಹಕಾರ ಮಾಣಿಕ್ಯ ಪ್ರಶಸ್ತಿ ಲಭಿಸಿದ್ದು, ಈ ಪ್ರಶಸ್ತಿ ಪಡೆದ ಉಡುಪಿ ಜಿಲ್ಲೆಯ ಮೊದಲ ಕ್ರೆಡಿಟ್ ಸಹಕಾರ ಸಂಘವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸಂಘವು ಬ್ಯಾಂಕಿಂಗ್ ವ್ಯವಹಾರಕ್ಕೆ ಸೀಮಿತವಾಗದೆ, ಸಮಾಜಮುಖಿಯಾಗಿ ಪ್ರತಿವರ್ಷ ರು. 30 ಲಕ್ಷವನ್ನು ಶಿಕ್ಷಣ, ಆರೋಗ್ಯ, ಸಾಂಸ್ಕೃತಿಕ ಸಾಮಾಜಿಕ ಕಾರ್ಯಕ್ರಮಗಳಿಗೆ ವಿನಿಯೋಗಿಸುತ್ತಿದೆ ಎಂದವರು ಹೇಳಿದರು.ಸಾಧಕರಿಗೆ ಸನ್ಮಾನ: ಈ ಸಂದರ್ಭದಲ್ಲಿ ಫ್ಯಾಷನ್ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಸಾಧಕಿ ಸಚಿತ ರಾವ್, ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧಿ ಸ್ಫೂರ್ತಿ ಡಿ. ಶೆಟ್ಟಿ, ವಿಶ್ವದಾಖಲೆಯ ವಿದುಷಿ ಸಂಗೀತ ಬಾಲಚಂದ್ರ, ಆಹಾರೋತ್ಪನ್ನ ತಯಾರಿಸುವ ಸುಗುಣಾ ಪೈ ಟಿ. ಹಾಗೂ ಪವರ್‌ಲಿಫ್ಟಿಂಗ್ ನಲ್ಲಿ ದಕ್ಷಿಣ ಭಾರತದ ಸಾಧಕಿ ಆ್ಯನ್ನಿ ಲಿಸಾ ಅಮ್ಮನ್ನ ಅವರನ್ನು ಗೌರವಿಸಲಾಯಿತು.

ಸಂಘದ ಆಡಳಿತ ಮಂಡಳಿ ಸದಸ್ಯರಾದ ಸಂಜೀವ ಕಾಂಚನ್, ಎಲ್. ಉಮಾನಾಥ, ಪುರುಷೋತ್ತಮ ಪಿ. ಶೆಟ್ಟಿ. ಹಾಜಿ ಸಯ್ಯದ್ ಅಬ್ದುಲ್ ರಜಾಕ್, ವಿನಯ ಕುಮಾರ್ ಟಿ.ಎ., ಪದ್ಮನಾಭ ಕೆ ನಾಯಕ್, ಸದಾಶಿವ ನಾಯ್ಕ್, ಮನೋಹರ್ ಎಸ್ ಶೆಟ್ಟಿ, ಸಾಧು ಸಾಲ್ಯಾನ್, ಜಯಾ ಶೆಟ್ಟಿ, ಗಾಯತ್ರ್ರಿ ಎಸ್. ಭಟ್ ಇದ್ದರು. ಮಲ್ಪೆ ಶಾಖಾ ವ್ಯವಸ್ಥಾಪಕ ನವೀನ್ ಕೆ. ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಕುಮಾರ್ ವಂದಿಸಿದರು.