ಸಾರಾಂಶ
ಮದ್ದೂರು: ಗಣೇಶನ ವಿಸರ್ಜನೆ ವೇಳೆ ಕೋಮುಗಲಭೆ ಸಂಭವಿಸಿದ್ದ ನಾಗಮಂಗಲ ಹಾಗೂ ಮಂಡ್ಯಕ್ಕೆ ತೆರಳುತ್ತಿದ್ದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಜಿಲ್ಲೆಯ ಗಡಿಭಾಗ ತಾಲೂಕಿನ ನಿಡಘಟ್ಟದಲ್ಲಿ ಪೊಲೀಸರು ತಡೆಯೊಡ್ಡಿ ವಾಪಸ್ ಕಳುಹಿಸಿದ ಘಟನೆ ಶನಿವಾರ ಬೆಳಗ್ಗೆ ಜರುಗಿದೆ.
ಈ ವೇಳೆ ಪ್ರಮೋದ್ ಮುತಾಲಿಕ್ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಕೆಲಕಾಲ ಬಿಗುವಿನ ಪರಿಸ್ಥಿತಿ ಉಂಟಾಗಿತ್ತು. ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನಾಗಮಂಗಲಕ್ಕೆ ತೆರಳುವ ಸಾಧ್ಯತೆ ಇತ್ತು. ಇದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ನಾಗಮಂಗಲಕ್ಕೆ ಬರದಂತೆ ಮೌಖಿಕವಾಗಿ ಸೂಚನೆ ನೀಡಿದ್ದರು.ಶನಿವಾರ ಪ್ರಮೋದ್ ಮುತಾಲಿಕ್ ಕೋಮುಗಲಭೆ ಸಂಭವಿಸಿದ್ದ ನಾಗಮಂಗಲ ಹಾಗೂ ಗಲಭೆಯಿಂದ ಬಂಧಿತರಾಗಿ ಮಂಡ್ಯದ ಜಿಲ್ಲಾ ಕಾರಾಗೃಹದಲ್ಲಿರುವ ಬದ್ರಿಕೊಪ್ಪಲು ಗ್ರಾಮದ ಹಿಂದೂಪರ ಸಂಘಟನೆ ಯುವಕರನ್ನು ಭೇಟಿ ಮಾಡಲು ಮುಂದಾಗಿದ್ದರು.
ಮುತಾಲಿಕ್ ಆಗಮನ ಸುದ್ಧಿ ತಿಳಿದು ಪೊಲೀಸರು ಜಿಲ್ಲೆಯ ಗಡಿ ಭಾಗ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದ್ದರು. ಮುಂಜಾಗ್ರತೆ ಕ್ರಮವಾಗಿ ಬೆಂಗಳೂರು - ಮೈಸೂರು ಹೆದ್ದಾರಿಯ ನಿಡಘಟ್ಟ ಬಳಿ ಬ್ಯಾರಿಕೇಡ್ ಹಾಕಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಂಡಿದ್ದರು.ನಂತರ ರಾಮನಗರ - ಚನ್ನಪಟ್ಟಣದ ಮೂಲಕ ಮಂಡ್ಯ ಜಿಲ್ಲೆ ಗಡಿಭಾಗ ನಿಡಘಟ್ಟಕ್ಕೆ ಆಗಮಿಸಿದ ಪ್ರಮೋದ್ ಮುತಾಲಿಕ್ ಅವರನ್ನು ತಡೆದ ಪೊಲೀಸರು ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧ ಆದೇಶದ ಪತ್ರ ತೋರಿಸಿ ವಾಪಸ್ ಕಳಿಸಲು ಮುಂದಾದರು.
ಈ ವೇಳೆ ಪ್ರಮೋದ್ ಮುತಾಲಿಕ್ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳದಲ್ಲಿದ್ದ ಜಿಲ್ಲಾ ಎಸ್ಪಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಮುತಾಲಿಕ್ ಅವರಿಗೆ ನಾಗಮಂಗಲದಲ್ಲಿ ಸದ್ಯ ಪರಿಸ್ಥಿತಿ ಶಾಂತವಾಗಿದೆ. ತಾವು ಭೇಟಿ ನೀಡಿದರೆ ಮತ್ತೆ ಪರಿಸ್ಥಿತಿ ಹದಗೆಡುವ ಸಾಧ್ಯತೆ ಇದ್ದು, ನಾವು ಬಿಟ್ಟರೂ ಕಾನೂನು ಉಲ್ಲಂಘನೆಯಾಗುತ್ತದೆ. ದಯವಿಟ್ಟು ತಾವು ಬೆಂಗಳೂರಿಗೆ ತೆರಳಿ ಎಂದು ಮನವಿ ಮಾಡಿದರು.ನಂತರ ಅವರನ್ನು ಚನ್ನಪಟ್ಟಣ ತಾಲೂಕಿನ ಖಾಸಗಿ ಹೋಟೆಲ್ ಗೆ ಕರದೊಯ್ದು ಕಾಫಿ ಕುಡಿಸಿದರು. ನಂತರ ಪ್ರಮೋದ್ ಮುತಾಲಿಕ್ ನಾಗಮಂಗಲ ಭೇಟಿ ಕೈಬಿಟ್ಟು ಪೊಲೀಸ್ ಬಂದೋಬಸ್ ನಲ್ಲಿ ಮೈಸೂರಿಗೆ ತೆರಳಿದರು. ಡಿವೈಎಸ್ಪಿ ಕೃಷ್ಣಪ್ಪ, ಸರ್ಕಲ್ ಇನ್ಸ್ ಪೆಕ್ಟರ್ ಗಳಾದ ವೆಂಕಟೇಗೌಡ, ಶಿವಕುಮಾರ್ ಹಾಗೂ ಸಿಬ್ಬಂದಿ ಇದ್ದರು.