ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
4 ಸಾವಿರ ಎಕರೆಗೂ ಅಧಿಕ ಆಸ್ತಿಯನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಡೀಸಿಗೆ ರಾಜವಂಶಸ್ಥೆ ಪ್ರಮೋದಾದೇವಿ ಪತ್ರ ಬರೆದ ವಿಚಾರದಿಂದ ಹಲವು ಗ್ರಾಮಸ್ಥರು ವಿಚಲಿತರಾಗಿದ್ದಾರೆ.60-70 ವರ್ಷಗಳಿಂದ ಭೂಮಿ ನಂಬಿ ಜೀವನ ಸಾಗಿಸುತ್ತಿದ್ದವರು ತಮ್ಮ ಭೂಮಿ ಕಂದಾಯ ಗ್ರಾಮವನ್ನಾಗಿ ಮಾಡುವ ಬದಲು ರಾಜವಂಶಸ್ಧೆ ಪ್ರಮೋದಾದೇವಿ ಒಡೆಯರ್ ಹೆಸರಿಗೆ ಖಾತೆ ಆಗುತ್ತದೆಯೋ ಎಂಬ ಆತಂಕ ಹೊತ್ತು ಶುಕ್ರವಾರ ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ, ಅಟ್ಟಗುಳಿಪುರ ಗ್ರಾಮಸ್ಥರು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಜಯಚಾಮರಾಜೇಂದ್ರ ಒಡೆಯರ್ ನಮಗೆ 1035 ಎಕರೆ ಭೂಮಿ ದಾನ ನೀಡಿದ್ದಾರೆ. 1982ರಲ್ಲಿ ಸಚಿವರಾಗಿದ್ದ ಬಿ.ರಾಚಯ್ಯ ಕಾಲದಲ್ಲಿ ಸರ್ಕಾರ ಸಾಗುವಳಿ ಚೀಟಿ ನೀಡಿದೆ. ಈಗ ಪ್ರಮೋದಾದೇವಿ ಒಡೆಯರ್ ನಮ್ಮ ಊರಿನ ಸರ್ವೆ ನಂ.ಗಳನ್ನು ಉಲ್ಲೇಖಿಸಿ ಖಾತೆ ಮಾಡಿಕೊಡುವಂತೆ ಪತ್ರ ಬರೆದಿದ್ದಾರೆ ಎಂದು ಜಿಲ್ಲಾಧಿಕಾರಿ ಬಳಿ ಅಳಲು ತೋಡಿಕೊಂಡರು.
4000 ಕ್ಕೂ ಹೆಚ್ಚು ಜನಸಂಖ್ಯೆ ಸಿದ್ದಯ್ಯನಪುರ ಗ್ರಾಮದಲ್ಲಿದ್ದು ಪ್ರಮೋದಾದೇವಿ ಅವರಿಗೆ ಖಾತೆ ಮಾಡಿ ಕೊಟ್ರೆ ಇಡೀ ಊರಿಗೆ ಊರೆ ಖಾಲಿ ಮಾಡಬೇಕಾಗುತ್ತೆ, ಈ ಸಮಸ್ಯೆ ಬಗೆಹರಿಸಿ ಎಂದು ಅಳಲು ತೋಡಿಕೊಂಡರು.ಆತಂಕ ಬೇಡ ಎಂದ ಜಿಲ್ಲಾಧಿಕಾರಿ:
ಮನವಿ ಪತ್ರ ಸ್ವೀಕರಿಸಿ ಡೀಸಿ ಶಿಲ್ಪಾನಾಗ್ ಮಾತನಾಡಿ, ಈಗಾಗಲೇ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ನಡೆಸಿ, ಸರ್ಕಾರಿ ಜಾಗ ಎಂದು ಖಚಿತಪಡಿಸಿಕೊಂಡು ಕಂದಾಯ ಗ್ರಾಮವಾಗಿ ಘೋ಼ಷಣೆ ಮಾಡಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತಿದೆ. ಪ್ರಮೋದಾದೇವಿ ಒಡೆಯರ್ ತಕರಾರು ಅರ್ಜಿ ಸಲ್ಲಿಸಿದ್ದರೂ ಕೂಡ ಯಾವುದೇ ಪೂರಕ ದಾಖಲೆ ಲಗತ್ತಿಸಿಲ್ಲ, ನ್ಯಾಯಾಲಯದ ಆದೇಶವಿಲ್ಲ. ಆದ್ದರಿಂದ, ಯಾವುದೇ ಆತಂಕ ಬೇಡ, ನಿಮ್ಮ ಊರುಗಳು ಕಂದಾಯ ಗ್ರಾಮಗಳಾಗುವ ಹಂತದಲ್ಲಿದೆ ಎಂದರು.ಏನಿದು ಪತ್ರ ವಿವಾದ:
ಮೈಸೂರು ರಾಜಮನೆತನವು ಇಂದಿಗೂ ಕೂಡ ಹಲವು ಆಸ್ತಿಗಳ ವಿವಾದ ಬಗೆಹರಿಸಲು ಹೆಣಗಾಡುತ್ತಿದ್ದು ಚಾಮರಾಜನಗರ ಜಿಲ್ಲೆಯಲ್ಲಿ ಮೈಸೂರು ಮಹಾರಾಜರಿಗೆ ಸೇರಿರುವ ಖಾಸಗಿ ಸ್ವತ್ತು ಆಸ್ತಿಗಳನ್ನು ಖಾತೆ ಮಾಡಿಕೊಡುವ ಬಗ್ಗೆ ಹಾಗೂ ಖಾತೆಯಾಗುವ ತನಕ ಸದರಿ ಜಮೀನುಗಳಲ್ಲಿ ಯಾವುದೇ ರೀತಿಯ ಖಾತೆ, ಕಂದಾಯ ಗ್ರಾಮ ಇನ್ನಿತರೆ ಯಾವುದೇ ವಹಿವಾಟುಗಳನ್ನು ನಡೆಸದಂತೆ ಜಿಲ್ಲಾಡಳಿತಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮಾ.27 ರಂದು ತಕರಾರು ಅರ್ಜಿ ಸಲ್ಲಿಸಿದ್ದಾರೆ.ಮೈಸೂರು ಮಹಾರಾಜರು ಮತ್ತು ಭಾರತ ಸರ್ಕಾರದ ನಡುವೆ 1950ರ ಜ.6ರಲ್ಲಿ ನಡೆದ ಒಪ್ಪಂದ ಪ್ರಕಾರ ಚಾಮರಾಜನಗರ ಜಿಲ್ಲೆಯಲ್ಲಿ 4 ಸಾವಿರಕ್ಕೂ ಅಧಿಕ ಎಕರೆ ಮಹಾರಾಜರ ಖಾಸಗಿ ಸ್ವತ್ತಾಗಿದೆ, ಆದ್ದರಿಂದ ಈ ಸ್ವತ್ತುಗಳಲ್ಲಿ ಯಾವುದೇ ರೀತಿಯ ಕಂದಾಯ ಗ್ರಾಮ ಮಾಡದೇ ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ರಾಜವಂಶಸ್ಥೆ ಕೋರಿದ್ದರು.
;Resize=(128,128))
;Resize=(128,128))