ಸಾರಾಂಶ
ಮುಖ್ಯ ಅತಿಥಿ ಡಾ. ಜೀವರಾಜ ಸೊರಕೆ ಮಾತನಾಡಿ, ನಮ್ಮ ಆರೋಗ್ಯ ಭಾಗ್ಯಕ್ಕೆ ಯೋಗವನ್ನು ನಿತ್ಯ ನಿರಂತರ ಮಾಡಿದರೆ ಮಾತ್ರ ಅದರ ಫಲ ಪ್ರಾಪ್ತಿಯಾಗುತ್ತದೆ. ನಾನು ಸುಮಾರು 20 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಾ ಬಂದಿದ್ದು, ಪ್ರಸ್ತುತ 76ನೇ ವಯಸ್ಸಿನಲ್ಲೂ ನನಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿಲ್ಲದೆ ಆರೋಗ್ಯವಾಗಿ ಇದ್ದೇನೆ ಎಂದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಮನಸ್ಸಿನ ಚಂಚಲತೆ ನಿಯಂತ್ರಣಕ್ಕೆ ಪ್ರಾಣಯಾಮ ರಾಮಬಾಣ ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಹೇಳಿದ್ದಾರೆ.ನಗರದ ಮಂಗಳಾದೇವಿ ಸಮೀಪದ ಶ್ರೀ ರಾಮಕೃಷ್ಣ ಮಠದಲ್ಲಿ ಡಿಸೆಂಬರ್ ತಿಂಗಳ ಯೋಗ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.ಅಷ್ಟಾಂಗ ಯೋಗದ 4ನೇ ಮೆಟ್ಟಿಲು, ಪ್ರಾಣಕ್ಕೆ ಹೊಸ ಆಯಾಮವೇ ಪ್ರಾಣಯಾಮ. ಪ್ರಾಣಾಯಾಮವು ಉಸಿರಾಟದ ಮೇಲೆ ಹಿಡಿತವುಂಟು ಮಾಡುವುದಲ್ಲದೆ, ಸಕ್ರಮಗೊಳಿಸಿ ಶ್ವಾಸಕೋಶ ಮತ್ತು ನರಮಂಡಲದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಾಡಿ ಶುದ್ಧಿಯಾಗಿ ಮನಸ್ಸಿನ ಚಂಚಲತೆ ಇಲ್ಲದಾಗಿ ಶಾಂತವಾಗುವುದು, ಸಂಯಮ ಉಂಟಾಗುವುದು ಎಂದರು.
ಮುಖ್ಯ ಅತಿಥಿ ಡಾ. ಜೀವರಾಜ ಸೊರಕೆ ಮಾತನಾಡಿ, ನಮ್ಮ ಆರೋಗ್ಯ ಭಾಗ್ಯಕ್ಕೆ ಯೋಗವನ್ನು ನಿತ್ಯ ನಿರಂತರ ಮಾಡಿದರೆ ಮಾತ್ರ ಅದರ ಫಲ ಪ್ರಾಪ್ತಿಯಾಗುತ್ತದೆ. ನಾನು ಸುಮಾರು 20 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಾ ಬಂದಿದ್ದು, ಪ್ರಸ್ತುತ 76ನೇ ವಯಸ್ಸಿನಲ್ಲೂ ನನಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿಲ್ಲದೆ ಆರೋಗ್ಯವಾಗಿದ್ದೇನೆ. ನನ್ನ ಅನುಭವದ ಪ್ರಕಾರ ಗ್ಯಾಸ್ಟ್ರಿಕ್, ಬೆನ್ನುನೋವು, ಸೊಂಟ ನೋವು ಇವೆಲ್ಲ ಯೋಗದ ಮೂಲಕ ನಿಯಂತ್ರಿಸಬಹುದು. ಯೋಗವನ್ನು ದಿನಕ್ಕೆ ಕನಿಷ್ಠ 30 ನಿಮಿಷವಾದರೂ ಮಾಡಿದರೆ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂದರು.ಮುಖ್ಯ ಅತಿಥಿ ಡಾ. ಜೀವರಾಜ ಸೊರಕೆ ಅವರನ್ನು ಸ್ವಾಮಿ ಜಿತಕಾಮಾನಂದಜಿ ಸನ್ಮಾನಿಸಿದರು. ಯೋಗಗುರು ದೇಲಂಪಾಡಿ ಶಿಷ್ಯರಾದ ತುಕರಾಮ, ಚಂದ್ರಹಾಸ ಬಾಳ ಹಾಗೂ ಶ್ರೀಲಕ್ಷ್ಮೀ ಸಹಕರಿಸಿದರು.