ಕರ್ನಾಟಕ ಪ್ರಾಂತ ರೈತ ಸಂಘದ ೧೧ನೇ ಜಿಲ್ಲಾ ಸಮ್ಮೇಳದ ಸಂಡೂರಿನಲ್ಲಿ ಫೆ. ೧೪ ಹಾಗೂ ೧೫ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿ ಬಂಗಲೆಯಲ್ಲಿ ಬುಧವಾರ ಪೂರ್ವಭಾವಿ ಸಭೆ ನಡೆಯಿತು.
ಸಂಡೂರು: ಕರ್ನಾಟಕ ಪ್ರಾಂತ ರೈತ ಸಂಘದ ೧೧ನೇ ಜಿಲ್ಲಾ ಸಮ್ಮೇಳದ ಸಂಡೂರಿನಲ್ಲಿ ಫೆ. ೧೪ ಹಾಗೂ ೧೫ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿ ಬಂಗಲೆಯಲ್ಲಿ ಬುಧವಾರ ಪೂರ್ವಭಾವಿ ಸಭೆ ನಡೆಯಿತು.
ಮುಖಂಡ ಜೆ.ಎಂ. ಚೆನ್ನಬಸಯ್ಯ ಮಾತನಾಡಿ, ತಾಲೂಕಿನಲ್ಲಿ ರೈತರ ಭೂ ಸಮಸ್ಯೆ ಜೀವಂತವಾಗಿದ್ದು, ೧೩ ಸಾವಿರಕ್ಕೂ ಹೆಚ್ಚು ಬಗರ್‌ಹುಕುಂ ಅರ್ಜಿಗಳು, ಐದು ಸಾವಿರ ಅರಣ್ಯಭೂಮಿ ಸಾಗುವಳಿದಾರರು ಹಾಗೂ ಸಾವಿರಾರು ಜನ ಇನಾಂ ಭೂಮಿಯ ಸಾಗುವಳಿದಾರರು ಜಮೀನುಗಳ ಪಟ್ಟಕ್ಕಾಗಿ ಪರದಾಡುತ್ತಿದ್ದಾರೆ. ೧೯೭೩ರ ಭೂ ಹೋರಾಟ ಮತ್ತು ಭೂಸುಧಾರಣೆ ಕಾಯ್ದೆಯ ಆನಂತರ ಸಾವಿರಾರು ರೈತರಿಗೆ ಸಾಗುವಳಿ ಪತ್ರ ನೀಡುವ ಮೂಲಕ ಭೂಮಿ ನೀಡಿದ್ದರೂ, ರೈತರು ಖಾತೆ ಬದಲಾವಣೆ ಮಾಡಿಕೊಳ್ಳದ ಕಾರಣ, ಈ ಭೂಮಿಗಳನ್ನು ಗೋಮಾಳ, ಗಯಾಳು, ರಾಲಗುಡ್ಡ, ಕರಾಪ್ ಇತ್ಯಾದಿಗಳನ್ನು ನಮೂದಿಸಿ, ಸಾಗುವಳಿ ರೈತರನ್ನು ಹೊರ ಹಾಕಲಾಗುತ್ತಿದೆ. ಮತ್ತೊಂದೆಡೆ ೨೧ ಗಣಿ ಮತ್ತು ಕೈಗಾರಿಕೆ ಉದ್ಯಮಗಳಿಗೆ ಸಾವಿರಾರು ಹೆಕ್ಟೇರ್ ಭೂಮಿಗಳನ್ನು ನೀಡಲಾಗುತ್ತಿದೆ. ಭೂಸಾಗುವಳಿದಾರರ ರಕ್ಷಣೆಗಾಗಿ ೧೯೭೩ರ ಐತಿಹಾಸಿಕ ಸಂಡೂರು ಭೂ ಹೋರಾಟಕ್ಕಿಂತ ತೀವ್ರ ತರಹದ ಹೋರಾಟ ನಡೆಸಬೇಕಾಗಿದೆ ಎಂದರು.ಕೆರೆ ತುಂಬಿಸುವ ನೀರಾವರಿ ಯೋಜನೆ ಜಾರಿ, ಅಂತರ್ಜಲ ರಕ್ಷಣೆ, ಗಣಿ, ಕೈಗಾರಿಕೆಗಳಿಂದ ಬೆಳೆ ಪರಿಹಾರ, ಕೃಷಿ ಭೂಮಿ ರಕ್ಷಣೆ ಮುಂತಾದ ಸಮಸ್ಯೆಗಳ ಬಗ್ಗೆ ಸಮ್ಮೇಳನ ಬೆಳಕು ಚೆಲ್ಲಲಿದೆ. ಸಮ್ಮೇಳನದಲ್ಲಿ ಸಿಪಿಐ (ಎಂ) ಪಾಲಿಟ್ ಬ್ಯೂರೋ ಸದಸ್ಯ ಶೇಖಾವತ್, ರಾಜಸ್ಥಾನದ ಸಂಸದ ಅಮ್ರಾರಾಮ, ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಯು. ಬಸವರಾಜ್, ಪ್ರಧಾನ ಕಾರ್ಯದರ್ಶಿ ಯಶವಂತ್ ಹಾಗೂ ಹಲವು ಮುಖಂಡರು ಭಾಗವಹಿಸಲಿದ್ದಾರೆ. ಜಿಲ್ಲೆಯ ೫ ತಾಲೂಕುಗಳಿಂದ ೩೦೦ ಪ್ರತಿನಿಧಿಗಳು, ಸುಮಾರು ೨೦೦೦ ರೈತರು ಭಾಗವಹಿಸುವ ನಿರೀಕ್ಷೆ ಇದೆ. ತಾಲೂಕಿನ ಪ್ರಗತಿಪರ ರೈತ ಕಾರ್ಮಿಕ ಜನಪರ ಸಂಘಟನೆಗಳು ಜಂಟಿಯಾಗಿ ಈ ಸಮ್ಮೇಳನ ಯಶಸ್ವಿಗೊಳಿಸಲು ಸಹಕರಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಸ್ವಾಗತ ಸಮಿತಿ ರಚಿಸಲಾಯಿತು. ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ವಿ.ಎಸ್. ಶಿವಶಂಕರ, ಮುಖಂಡರಾದ ಎ. ಸ್ವಾಮಿ, ಡಾ. ಸೈಯದ್ ರಹಮತ್ತುಲ್ಲಾ, ಖಲಂದರ್ ಬಾಷಾ, ಪಂಪನಗೌಡ ಕುರೆಕುಪ್ಪ, ಬಿ. ಮಂಜುನಾಥ, ರಮೇಶ್, ತಾಯಪ್ಪ, ಯರಿಸ್ವಾಮಿ, ಕಾಲುಬಾ, ವಿ. ದೇವಣ್ಣ, ಶರೀಫ, ಅಬ್ದುಲ್ ಬಾಕೈ, ಹಲವು ಸದಸ್ಯರು ಉಪಸ್ಥಿತರಿದ್ದರು.