ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷರಾಗಿ ಎಚ್.ಕೆ.ಪ್ರಸನ್ನ ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.ನಿಕಟಪೂರ್ವ ಅಧ್ಯಕ್ಷ ಕೆ.ಶ್ರೀಧರ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ೧೪ನೇ ವಾರ್ಡಿನ ಸದಸ್ಯ ಎಚ್.ಕೆ.ಪ್ರಸನ್ನ ಒಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಅವಿರೋಧ ಆಯ್ಕೆಯನ್ನು ಘೋಷಿಸಿದರು.
೨೦೧೮ರಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ ಪುರಸಭೆಯ ೨೩ ಸದಸ್ಯರಲ್ಲಿ ೨೩ ಜೆಡಿಎಸ್ ಸದಸ್ಯರಿದ್ದರು, ನಂತರದಲ್ಲಿ ಒಬ್ಬ ಸದಸ್ಯರು ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೈರಶೆಟ್ಟಿ ಚುನಾಯಿತರಾದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೀಸಲಾತಿ ಪಟ್ಟಿ ಪ್ರಕಟಗೊಂಡ ನಂತರ ಅತೃಪ್ತ ಸದಸ್ಯರು ನ್ಯಾಯಾಲಯದ ಮೊರೆ ಹೋದ ಹಿನ್ನಲೆಯಲ್ಲಿ ೨೦೨೦ರ ನವೆಂಬರ್‌ನಲ್ಲಿ ೨.೫ ವರ್ಷದ ಮೊದಲ ಅವಧಿಯ ಹೊಸ ಮೀಸಲಾತಿ ಪಟ್ಟಿಯನ್ನು ಸರ್ಕಾರ ಪ್ರಕಟಿಸಿತು. ನವೆಂಬರ್ ೧೮ರಂದು ಪುರಸಭೆ ನೂತನ ಅಧ್ಯಕ್ಷೆಯಾಗಿ ಸಿ.ಜೆ.ವೀಣಾ ಅಧಿಕಾರ ಸ್ವೀಕರಿಸಿದರು. ನಂತರದಲ್ಲಿ ಜಿ.ಕೆ.ಸುಧಾನಳಿನಿ ಹಾಗೂ ಎನ್.ಜ್ಯೋತಿ ಅಧ್ಯಕ್ಷೆಯಾಗಿ ಆಡಳಿತ ನಡೆಸಿದರು. ೨೦೨೩ರ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಪುರಸಭಾಧ್ಯಕ್ಷರಾಗಿದ್ದ ಎನ್.ಜ್ಯೋತಿ ಅಧ್ಯಕ್ಷರ ಕೊಠಡಿ ತೆರವುಗೊಳಿಸಿದರು ಮತ್ತು ನಂತರದಲ್ಲಿ ೨.೫ ವರ್ಷದ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.ಆಗಸ್ಟ್ ೨೦೨೪ರಲ್ಲಿ ಸರ್ಕಾರ ಪ್ರಕಟಿಸಿದ ಎರಡನೇ ಅವಧಿಯ ಮೀಸಲಾತಿಯಂತೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಬಿಸಿಎಂ ಬಿ ಮಹಿಳೆಗೆ ಮೀಸಲಾಗಿತ್ತು. ಮೂರನೇ ಬಾರಿ ಪುರಸಭೆ ಸದಸ್ಯರಾಗಿ ಆಯ್ಕೆಯಾಗಿರುವ ಕೆ. ಶ್ರೀಧರ್, ಉಪಾಧ್ಯಕ್ಷ ಸ್ಥಾನಕ್ಕೆ ೨೩ ನೇ ವಾರ್ಡಿನ ತೆಲುಗು ಬಣಜಿಗರ ಜನಾಂಗದ ಪೂಜೆಕೊಪ್ಪಲಿನ ಸಾವಿತ್ರಮ್ಮ ಆಗಸ್ಟ್‌ನಲ್ಲಿ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಅಧ್ಯಕ್ಷ ಆಯ್ಕೆ ಪ್ರಕಟಗೊಳ್ಳುತ್ತಿದ್ದಂತೆ ಸ್ನೇಹಿತರು, ಹಿತೈಷಿಗಳು ಕುಟುಂಬ ಸದಸ್ಯರು ಶುಭಕೋರಿದರು ಹಾಗೂ ಸ್ನೇಹಿತರು ಪಟಾಕಿ ಸಿಡಿಸಿ, ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು.
ನೂತನ ಅಧ್ಯಕ್ಷ ಎಚ್.ಕೆ.ಪ್ರಸನ್ನ ಮಾತನಾಡಿ, ದೇವೇಗೌಡರ ಆಶೀರ್ವಾದ ಹಾಗೂ ಶಾಸಕ ರೇವಣ್ಣನವರ ಕೃಪೆಯಿಂದ ಅಧ್ಯಕ್ಷನಾಗಿದ್ದೇನೆ ಹಾಗೂ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ. ಪಟ್ಟಣದ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಬೀದಿ ದೀಪದ ವ್ಯವಸ್ಥೆ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಸಮಸ್ಯೆಗಳಿದ್ದರೆ ಪರಿಹರಿಸುತ್ತೇನೆ. ಸಾರ್ವಜನಿಕರ ಅರ್ಜಿಗಳನ್ನು ಗಮನಿಸಿ ತ್ವರಿತಗತಿಯಲ್ಲಿ ವಿಲೇ ಮಾಡುತ್ತೇನೆ ಎಂದರು. ಶಾಸಕ ಎಚ್.ಡಿ. ರೇವಣ್ಣ ಅಧ್ಯಕ್ಷರ ಆಯ್ಕೆಗೆ ಸಹಕರಿಸಿದ ಸದಸ್ಯರಿಗೆ ಧನ್ಯವಾದ ತಿಳಿಸಿದರು.