ಸಾರಾಂಶ
ಕೊಪ್ಪಳ: ಸಂಸತ್ ಮೇಲೆ ದಾಳಿ ಮಾಡುವವರಿಗೆ ಪಾಸ್ ನೀಡಿರುವ ಸಂಸದ ಪ್ರತಾಪ್ ಸಿಂಹ ಎಲ್ಲಿದ್ದಾರೆ? ಗುಹೆ ಸೇರಿದರೇ ಹಾಗೂ ಇಂಥ ಸಂದರ್ಭದಲ್ಲಿ ಅಬ್ಬರಿಸುತ್ತಿದ್ದ ಸಿ.ಟಿ. ರವಿ ಎಲ್ಲಿದ್ದಾರೆ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.ಸಂಸತ್ ದಾಳಿ ಪ್ರಕರಣದಲ್ಲಿ ಸಂಸದ ಪ್ರತಾಪ ಸಿಂಹ ಅವರನ್ನು ಇನ್ನೂವರೆಗೆ ಏಕೆ ವಿಚಾರಣೆ ಮಾಡುತ್ತಿಲ್ಲ? ಹಾಗೊಂದು ವೇಳೆ ಯಾರಾದರೂ ಮುಸ್ಲಿಮರು ಪಾಸ್ ನೀಡಿದ್ದರೆ ಇವರೇ ಸುಮ್ಮನೆ ಇರುತ್ತಿದ್ದರಾ? ಕಾಂಗ್ರೆಸ್ ಪಕ್ಷದವರು ಅಥವಾ ಬೇರೆ ಯಾವುದೇ ಪಕ್ಷದವರು ಪಾಸ್ ನೀಡಿದ್ದರೆ ಬಿಜೆಪಿ ಏನೆಲ್ಲಾ ಮಾತನಾಡುತ್ತಿತ್ತು ಎಂದು ಕಿಡಿಕಾರಿದರು.ಈಗ ಬಿಜೆಪಿಯ ಸಂಸದ ಪ್ರತಾಪ ಸಿಂಹ ಅವರೇ ಪಾಸ್ ನೀಡಿದ್ದರೂ ಇದುವರೆಗೂ ವಿಚಾರಣೆ ಮಾಡುತ್ತಿಲ್ಲ. ಅವರು ಸಹ ಗುಹೆಯಿಂದ ಆಚೆ ಬಂದು ಉತ್ತರ ನೀಡುತ್ತಿಲ್ಲ. ಇಂಥ ವಿಷಯಗಳಲ್ಲಿ ಅಬ್ಬರಿಸಿ ಮಾತನಾಡುತ್ತಿದ್ದ ಸಿ.ಟಿ. ರವಿ ಈಗ ಎಲ್ಲಿದ್ದಾರೆ? ಎಂದರು.ದೇಶದ ಸಂಸತ್ತನ್ನೇ ಕಾಪಾಡದವರು ಇವರು ದೇಶವನ್ನೇನು ಕಾಪಾಡುತ್ತಾರೆ? ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಪ್ರಧಾನಿ ನರೇಂದ್ರ ಮೋದಿ ಸಂಸತ್ತು ದಾಳಿ, ಮಣಿಪುರ ಘಟನೆಯ ಕುರಿತು ಏಕೆ ಮಾತನಾಡುತ್ತಿಲ್ಲ? ಎಂದು ಪ್ರಶ್ನೆಗಳ ಸುರಿಮಳೆಗೈದರು.ಉಪರಾಷ್ಟ್ರಪತಿಗೆ ಅಪಮಾನ ಮಾಡಿದ್ದಾರೆ ಎಂದು ಪ್ರತಿಭಟನೆ ಮಾಡುವ ಬಿಜೆಪಿಯವರು ಮೊದಲು ಪ್ರಧಾನಿ ನರೇಂದ್ರಿ ಮೋದಿ ವಿರುದ್ಧ ಧಿಕ್ಕಾರ ಹೇಳಲಿ. ದೇಶದ ಸ್ಥಿತಿ ಅಧೋಗತಿಗೆ ಹೋಗಿದೆ. ಕಾನೂನು-ಸುವ್ಯವಸ್ಥೆ ಹಾಳಾಗಿದೆ ಎಂದು ಆರೋಪಿಸಿದರು.